ವಿಟ್ಲ : ವಿಟ್ಲ ಪ.ಪಂ. ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ದಮಯಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಬಹುಮತ ವಿದ್ದರೂ ಮೀಸಲಾತಿ ಅನ್ವಯ ಅಧ್ಯಕ್ಷರ ಪಟ್ಟ ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಸೋಮವಾರ ವಿಟ್ಲ ಪ.ಪಂ.ನಲ್ಲಿ ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರು ಚುನಾವಣೆ ಪ್ರಕ್ರಿಯೆ ನಡೆಸಿ, ದಮಯಂತಿ ಅವರನ್ನು ಅಧ್ಯಕ್ಷೆಯಾಗಿ ಘೋಷಣೆ ಮಾಡಿದರು.
ಕಳೆದ ಬಾರಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿಟ್ಲ ಪ.ಪಂ. ಚುನಾವಣೆಯಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್ 6 ಸ್ಥಾನಗಳಲ್ಲಿ ವಿಜಯ ಗಳಿಸಿದ್ದವು. ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಸದಸ್ಯ ಅರುಣ್ ಎಂ. ವಿಟ್ಲ ಆಯ್ಕೆಗೊಂಡಿದ್ದರು. 2 ವರ್ಷಗಳ ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದು, ಬಿಜೆಪಿ ಸದಸ್ಯ ಜಯಂತ ನಾಯ್ಕ ಆಯ್ಕೆಯಾಗಿದ್ದರು.
ಈ ಬಾರಿ ರಾಜ್ಯ ಸರಕಾರವು ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಬಿ ಮೀಸಲಾತಿ ಘೋಷಿಸಿತ್ತು. ಆದರೆ ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಮಹಿಳೆ ಸದಸ್ಯರಿಲ್ಲದೇ ಇದ್ದುದರಿಂದ ಕಾಂಗ್ರೆಸ್‌ನ ದಮಯಂತಿ ಅವರಿಗೆ ಅವಕಾಶ ಲಭಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಇನ್ನೂ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.
ನಿರ್ಗಮನ ಅಧ್ಯಕ್ಷ ಅರುಣ್ ಎಂ. ವಿಟ್ಲ ಮಾತನಾಡಿ, ತನ್ನ ಅವಧಿಯಲ್ಲಿ ಎಲ್ಲರ ಸಹಕಾರದಲ್ಲಿ ವಿಟ್ಲವನ್ನು ಅಭಿವೃದ್ಧಿಪಡಿಸ ಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೊಂ ದಿಗೆ ವಿಟ್ಲದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ವಿಟ್ಲದ ಜನತೆ ಬಿಜೆಪಿಗೆ ಅಧಿಕಾರ ನೀಡಿ ದ್ದರೂ ಮೀಸಲಾತಿಯಿಂದ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಲಭಿಸಿದೆ ಎಂದರು. ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್‌ನಿಂದ ಸಂಭ್ರಮ ಆಚರಿಸಲಾಯಿತು.
ಪ.ಪಂ. ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಜಿಲ್ಲಾ ಯೋಜನ ಸಮಿತಿ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ದಿವಾಕರ, ಗ್ರಾಮಕರಣಿಕ ಪ್ರಕಾಶ್ ಚುನಾವಣೆಗೆ ಸಹಕರಿಸಿದರು.
ವಿಟ್ಲದ ಅಭಿವೃದ್ಧಿ
ನೂತನ ಅಧ್ಯಕ್ಷೆ ದಮಯಂತಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಮೀಸಲಾತಿಯಿಂದ ಅಧ್ಯಕ್ಷ ಸ್ಥಾನ ಲಭ್ಯವಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಸದಸ್ಯರನ್ನು ಒಂದೇ ಮನೆಯ ಸದಸ್ಯರಂತೆ ಭಾವಿಸಿ ಮುನ್ನಡೆಸುತ್ತೇನೆ. ವಿಟ್ಲದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.