Advertisement

ಅಜಪುರದಲ್ಲಿ ದಮಯಂತಿ ಪುನರ್‌ ಸ್ವಯಂವರ

05:41 PM Jun 20, 2019 | mahesh |

ತನ್ನ ಜೀವನದುದ್ದಕ್ಕೂ ಸಣ್ಣ ತಪ್ಪನ್ನು ಎಸಗದೇ ಜನಾನುರಾಗಿಯಾಗಿ ರಾಜ್ಯಬಾರ ಮಾಡುತ್ತಿದ್ದ ರಾಜನೆಂದೇ ಖ್ಯಾತಿಗಳಿಸಿದವನು ನಳ ಮಹಾರಾಜ. ಈತನಲ್ಲಿ ಏನಾದರೂ ಒಂದು ತಪ್ಪನ್ನು ಕಂಡುಹಿಡಿದು, ಸೋಲಿಸಬೇಕೆಂದು ಕಾಯುತ್ತಿದ್ದವನು ಶನಿದೇವ. ಅದರಂತೇ ಒಂದು ದಿನ ನಿತ್ಯಾಹಿ°ಕವನ್ನು ಪೂರೈಸಿದ ನಳನು ಕಾಲ ಹಿಮ್ಮಡಿಗೆ ನೀರು ಹಾಕಿಕೊಳ್ಳದೇ ಬಂದುದನ್ನು ಗಮನಿಸಿದ ಶನಿಯು ಆತನ‌ನ್ನು ಮೂವತ್ತು ವರ್ಷಗಳ ಕಾಲ ಕಾಡುತ್ತಿರುತ್ತಾನೆ. ಹೀಗಿರುವಾಗ ಒಂದು ದಿನ ನಳನು ದಾಯಾದಿ ಪುಷ್ಕರನೊಡನೆ ಜೂಜಾಟವಾಡಿ ಸರ್ವಸ್ವವನ್ನೂ ಕಳೆ‌ದುಕೊಂಡು ದೇಶ ಭ್ರಷ್ಟನಾಗಿ, ಮಡದಿ ದಮಯಂತಿಯೊಂದಿಗೆ ಕಾಡಲ್ಲಿ ಅಲೆದು ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಿದ್ರಾವಸ್ಥೆಗೆ ಜಾರಿದ ಮಡದಿಯನ್ನು ಮೆಲ್ಲನೆ ತೊರೆದು ಬಹು ಮುಂದಕ್ಕೆ ಸಾಗಿದಾಗ‌, ಕಾರ್ಕೋಟಕ ಎನ್ನುವ ಹೆಸರಿನ ಸರ್ಪ ದಂಶನದಿಂದ ನಳನ ದೇಹವೇ ವಿರೂಪವಾಗುತ್ತದೆ. ಕಾರ್ಕೋಟಕನ ಸೂಚನೆಯಂತೆ ನಳನು ಮಹಾರಾಜ ಋತುಪರ್ಣನ ರಾಜ್ಯ ಪ್ರವೇಶಿಸಿ, ಅರಮನೆಯಲ್ಲಿ ಬಾಹುಕನೆನ್ನುವ ಹೆಸರಿನಿಂದ ಅಶ್ವಶಾಲೆಯ ಮೇಲ್ವಿಚಾರಕನಾಗಿ ಸೇರುತ್ತಾನೆ. ಮುಂದೊಂದು ದಿನ ರಾಜನಿಗೆ ಸಾಂದರ್ಭಿಕ ಘಟನೆಗಳಿಂದಾಗಿ ಬಾಹುಕನೇ ನಳ ಮಹಾರಾಜ ಎಂದು ತಿಳಿದಾಗ ಬಹಳ ಸಂತೋಷವಾಯಿತು.

Advertisement

ಮುಂದೆ ಕುಂಡಿನಿಯ ಕಡೆ ಈರ್ವರೂ ಸಾಗಿ ದಮಯಂತಿಯನ್ನು ನಳನು ಪುನರ್‌ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಇದನ್ನು ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಆಡಿ ತೋರಿಸಿದವರು ಬ್ರಹ್ಮಾವರದ ಅಜಪುರ ಯಕ್ಷಗಾನ ಸಂಘ(ರಿ.)ದ ಸದಸ್ಯರು. ನಳನಾಗಿ ಮಹೇಂದ್ರ ಆಚಾರ್ಯ ಹೇರಂಜೆ ಮತ್ತು ದಮಯಂತಿಯಾಗಿ ಪ್ರತೀಶ್‌ ಕುಮಾರ್‌ ಬ್ರಹ್ಮಾವರ ಜೀವನದಲ್ಲಿ ಬಂದಂತಹ ಕಷ್ಟ ಕಾರ್ಪಣ್ಯಗಳನ್ನು ಧೃತಿ ಗೆಡದೆ ಅನುಭವಿಸುತ್ತಾ ಮುಂದಡಿಯಿಡುವ ಸನ್ನಿವೇಶವನ್ನು ಆಂಗಿಕ ಮತ್ತು ವಾಚಿಕಾಭಿನಯದ ಮೂಲಕ ಅನಾವರಣಗೊಳಿಸಿರುವುದು ಮನಸ್ಸನ್ನು ಬಹುವಾಗಿ ಕಾಡಿತು. ಋತುಪರ್ಣನಾಗಿ ಶಶಾಂಕ್‌ ಪಟೇಲ್‌ ಕೆ. ಜೆ. ಅವರ ರಂಗ ನಡೆ ಮತ್ತು ಚಿತ್ತ ಸೆಳೆವ ಮಾತಿನ ಶೈಲಿ ಹಾಗೂ ಕುರೂಪಿ ಬಾಹುಕನಾಗಿ ಪದ್ಮನಾಭ ಗಾಣಿಗ ಬ್ರಹ್ಮಾವರ ಇವರು, ಋತುಪರ್ಣನಿಗೆ ತನ್ನ ನಿಜ ವಿಚಾರ ತಿಳಿಯದಂತೆ ನಡೆದುಕೊಂಡ ಆಂಗಿಕ ಅಭಿನಯ ಮತ್ತು ಮೆಲುದನಿಯ ಮಾತು ಕ್ಷಣಕಾಲ ಭಾವುಕರನ್ನಾಗಿಸಿತು.

ಬ್ರಾಹ್ಮಣ ಮತ್ತು ರತ್ನದ ವ್ಯಾಪಾರಿಯಾಗಿ ಪ್ರಭಾಕರ ಆಚಾರ್ಯ ಮಟಪಾಡಿ ಇವರ ಪಾತ್ರೋಚಿತ ನಟನೆ ಮೆಚ್ಚುಗೆಗೆ ಪಾತ್ರವಾಯಿತು. ಚೈದ್ಯ ರಾಣಿಯಾಗಿ ಸ್ಪೂರ್ತಿ ಶ್ಯಾನುಭೋಗ್‌ ಮಂದಾರ್ತಿಯವರು ಸೊಗಸಾದ ಪಾತ್ರ ಪೋಷಣೆ ಗೈದರೆ, ಪುಷ್ಕರನಾಗಿ ವಿಜಯ ನಾಯಕ್‌ ಮಟಪಾಡಿ, ಕಿರಾತನಾಗಿ ದಯಾನಂದ ನಾಯಕ್‌ ಸುಂಕೇರಿ, ಸುದೇವ ಬ್ರಾಹ್ಮಣನಾಗಿ ರಾಜೇಶ್‌ ನಾವಡ ಜಿ. ವಿ. , ಬೀಮಕನಾಗಿ ವಿನೋದ್‌ ಕುಮಾರ್‌, ಖೂಳ ರಕ್ಕಸನಾಗಿ ಕಾರ್ತಿಕ್‌ ಶೆಟ್ಟಿಗಾರ್‌, ಶನಿಯಾಗಿ ಶುಭಕರ ಗಾಣಿಗ ಇವರುಗಳು ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದರು. ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಇವರ ಸೊಗಸಾದ ಕಂಠಸಿರಿಯ ಭಾಗವತಿಕೆಗೆ ಮದ್ದಳೆಯಲ್ಲಿ ದೇವದಾಸ್‌ ರಾವ್‌ ಕೂಡ್ಲಿ ಮತ್ತು ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಶಿರಿಯಾರ ಇವರುಗಳು ಜೊತೆಯಾಗಿ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next