ಈಗಾಗಲೇ ಎಲ್ಲೆಡೆ ನಿರೀಕ್ಷೆ ಹುಟ್ಟಿಸಿರುವ ರಾಧಿಕಾ ಅಭಿನಯದ “ದಮಯಂತಿ’ ಈ ವಾರ ತೆರೆಗೆ ಬರಲು ಸಜ್ಜಾಗುತ್ತಿದೆ. ಶೀರ್ಷಿಕೆ, ಪೋಸ್ಟರ್, ಟೀಸರ್ ಹಾಗೂ ಟ್ರೇಲರ್ ಮೂಲಕವೇ ಕುತೂಹಲ ಕೆರಳಿಸಿದ್ದ “ದಮಯಂತಿ’ ಇದೀಗ ಬಿಡುಗಡೆಗೆ ಮುನ್ನವೇ ಮತ್ತೊಂದು ಸುದ್ದಿಗೆ ಕಾರಣವಾಗಿದೆ. ಹೌದು, “ದಮಯಂತಿ’ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದ್ದು, ಆಯಾ ಭಾಷೆಯಲ್ಲೇ ತೆರೆಗೆ ಬರುತ್ತಿದೆ.
ನ.29 ರಂದು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ತಮಿಳು ಭಾಷೆಯಲ್ಲಿ ಈ ಚಿತ್ರವನ್ನು ಚೆನ್ನೈನ ತೆನಾಂಡಲ್ ಫಿಲ್ಮ್ಸ್ ವಿತರಣೆ ಮಾಡುತ್ತಿದೆ. ತೆನಾಂಡಲ್ ಫಿಲ್ಮ್ಸ್ ಕಾಲಿವುಡ್‌ನ ದೊಡ್ಡ ಪ್ರೊಡಕ್ಷನ್ಸ್ ಸಂಸ್ಥೆ ಸುಮಾರು 150 ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ, ವಿತರಣೆ ಮಾಡಿರುವ ತೆನಂಡಲ್ ಸ್ಟುಡಿಯೋ, “ದಮಯಂತಿ’ ಚಿತ್ರವನ್ನು ವೀಕ್ಷಿಸಿ, ತಾನೇ ತಮಿಳು ನಾಡಿನಾದ್ಯಂತ ಬಿಡುಗಡೆ ಮಾಡುತ್ತಿದೆ.
ಈ ಕುರಿತು ಮಾತನಾಡುವ ನಿರ್ದೇಶಕ ಕಮ್ ನಿರ್ಮಾಪಕ ನವರಸನ್, “ತೆನಾಂಡಲ್ ಫಿಲ್ಮ್ಸ್ ತಮಿಳಿನಾಡಿನ ದೊಡ್ಡ ಪ್ರೊಡಕ್ಷನ್ಸ್ ಹೌಸ್. “ದಮಯಂತಿ’ ಚಿತ್ರ ನೋಡಿ, ತಾವೇ ರಿಲೀಸ್ ಮಾಡುವುದಾಗಿ ಹೇಳಿ ಮಾತುಕತೆ ಮುಗಿಸಿದ್ದಾರೆ. ಇನ್ನು, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಸೆನ್ಸಾರ್ ಆಗಬೇಕಿದೆ. ಅದಾದ ನಂತರ ಡಿಸೆಂಬರ್ 6 ಅಥವಾ 13 ರಂದು ಆ ಮೂರು ಭಾಷೆಯಲ್ಲಿ ಚಿತ್ರ ಬಿಡಗುಡೆಯಾಗಲಿದೆ’ ಎನ್ನುತ್ತಾರೆ ನವರಸನ್.
ಆರಂಭದಲ್ಲಿ “ದಮಯಂತಿ’ ಚಿತ್ರದ ಕಥೆ ಕೇಳಿದ ರಾಧಿಕಾ ಅವರು, ಹಿಂದೆ ಮುಂದೆ ನೋಡದೆ, ಕಥೆ, ಪಾತ್ರದಲ್ಲಿ ಗಟ್ಟಿತನ ಇದೆ ಅಂದುಕೊಂಡು ನಟಿಸಲು ಗ್ರೀನ್‌ಸಿಗ್ನಲ್ ಕೊಟ್ಟು, ಈಗ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ. ಒಂದು ಊರಲ್ಲಿ ದೇವತೆ ಇದ್ದಾಗ, ದುಷ್ಟ ಶಕ್ತಿಗಳೆಲ್ಲಾ ಹೇಗೆ ಓಡಿ ಹೋಗುತ್ತವೆ ಎಂಬ ಒನ್‌ಲೈನ್ ಇಲ್ಲಿದ್ದರೂ, ಇಲ್ಲೊಂದು ವಿಶೇಷ ಕಥೆ ಇದೆ. ಅದೇ ಸಿನಿಮಾದ ಹೈಲೈಟ್.
ನೋಡುಗರಿಗೆ ಮಜ ಎನಿಸುವ ಮೊದಲರ್ಧ ಸಾಕಷ್ಟು ನಗಿಸುವ, ದ್ವಿತಿಯಾರ್ಧ ಅಷ್ಟೇ ಭಯಪಡಿಸುವ ಅಂಶಗಳೂ ಇವೆ ಎಂಬುದು ನಿರ್ದೇಶಕರ ಮಾತು. ಪಿಕೆಎಚ್ ದಾಸ್ ಛಾಯಾಗ್ರಹಣ ಮಾಡಿದರೆ, ಆರ್.ಎಸ್.ಗಣೇಶ್ ನಾರಾಯಣ್ ಸಂಗೀತವಿದೆ. ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಮಿತ್ರ, ತಬಲನಾಣಿ, “ಭಜರಂಗಿ’ ಲೋಕಿ, ಪವನ್‌ಕುಮಾರ್, ಕಂಪೇಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ.