ನಗರ : ನಗರಸಭಾ ವ್ಯಾಪ್ತಿಯ ಸಾಲ್ಮರ – ಜಿಡೆಕಲ್ಲು ರಸ್ತೆಗೆ ಮಳೆಯ ನಡುವೆಯೇ ಡಾಮರು ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಇದರಿಂದ ಕಾಮಗಾರಿ ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದ ಆತುರದ
ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಬಿಲ್ ಪಾವತಿಯನ್ನು ತಡೆಹಿಡಿಯಬೇಕು ಎಂದು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿಯು ದ.ಕ. ಜಿಲ್ಲಾಧಿಕಾರಿ ಹಾಗೂ ಪುತ್ತೂರು ಶಾಸಕರಿಗೆ ದೂರು ನೀಡಿದೆ.
ಈ ರಸ್ತೆಗೆ ನಗರೋತ್ಥಾನ ಯೋಜನೆಯಡಿ 1 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಆದರೆ ಗುತ್ತಿಗೆದಾರರು ಮಳೆ ಆರಂಭದ ಹಂತದಲ್ಲಿ ಇರುವಾಗ ಕಾಮಗಾರಿ ನಡೆಸಿದ್ದಾರೆ. ರಸ್ತೆಯಲ್ಲಿ ನೀರಿನ ಅಂಶ ಇರುವಾಗ ಡಾಮರು ನಡೆಸಿರುವುದರಿಂದ ರಸ್ತೆ ಬಾಳ್ವಿಕೆಯನ್ನು ಕಳೆದುಕೊಳ್ಳುತ್ತಿದೆ.
ಕಾಮಗಾರಿ ನಡೆಸುವ ಸಂದರ್ಭದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆಯನ್ನೂ ಮಾಡಿಲ್ಲ. ಜನರಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಲು ಸ್ಥಳ ಇಲ್ಲದಂತೆ ಡಾಮರು ಕಾಮಗಾರಿ ನಡೆಸಲಾಗಿದೆ. ಆದ್ದರಿಂದ ಕಾಮಗಾರಿಯನ್ನು ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಮತ್ತು ಗುಣಮಟ್ಟ ಸಾಬೀತಾಗುವ ತನಕ ಬಿಲ್ಲಿನ ಪಾವತಿಯನ್ನು ತಡೆ ಹಿಡಿಯಬೇಕು ಎಂದು ಸಮಿತಿಯು ಮನವಿಯಲ್ಲಿ ವಿನಂತಿಸಿದೆ.