Advertisement

ಶಾಲಾ ಕೊಠಡಿ ಶಿಥಿಲ: ಭಯದಲ್ಲೇ ಪಾಠ!

04:42 PM May 16, 2022 | Team Udayavani |

ಹರಪನಹಳ್ಳಿ: ಸರ್ಕಾರ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ, ಹಾಲು, ಸಮವಸ್ತ್ರ ಜೊತೆಗೆ ಕಲಿಕಾ ಚೇತರಿಕೆ, ಓದು ಕರ್ನಾಟಕ, ನಲಿಕಲಿ ಹೀಗೆ ಮಕ್ಕಳನ್ನು ಶಾಲೆಗೆ ಸೆಳೆಯಲು ಹಾಗೂ ಕಲಿಕೆಗೆ ಒತ್ತು ನೀಡುವ ದೃಷ್ಟಿಯಿಂದ ಸಾಲು ಸಾಲು ಯೋಜನೆಗಳನ್ನು ಜಾರಿ ಮಾಡುತ್ತಲೇ ಇದೆ. ಆದರೆ ಇವೆಲ್ಲವುದಕ್ಕಿಂತ ಮುಖ್ಯವಾಗಿ ಸಮರ್ಪಕ ಶಿಕ್ಷಕರು, ತರಗತಿ ಕೊಠಡಿಗಳ ಕೊರತೆ ನೀಗಿಸಲು ಈವರೆಗೂ ಆಗುತ್ತಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ.

Advertisement

ಹರಪನಹಳ್ಳಿ ತಾಲೂಕು ಡಾ| ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲೂಕಾಗಿದೆ ಮತ್ತು ಕಲ್ಯಾಣ ಕರ್ನಾಟಕದ ಭಾಗವು ಹೌದು. ತಾಲೂಕಿನಲ್ಲಿ ಒಟ್ಟು 289 ಸರ್ಕಾರಿ ಶಾಲೆಗಳಿದ್ದು, ಅದರಲ್ಲಿ 126 ಹಿರಿಯ ಪ್ರಾಥಮಿಕ ಶಾಲೆಗಳು, 142 ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಒಟ್ಟು 33,350 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಕೋವಿಡ್‌ನಿಂದಾಗಿ ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಾಕಷ್ಟು ಏರಿಕೆ ಕಂಡಿದೆ. ಆದರೆ ಈ ತಾಲೂಕಿನಲ್ಲಿ ಕೆಲವು ಶಾಲಾ ಕೊಠಡಿಗಳು ಅತ್ಯಂತ ಶಿಥಿಲಗೊಂಡಿದ್ದು, ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ಪರಿಸ್ಥಿತಿ ಒದಗಿದೆ.

ಅದರಲ್ಲಿ ತಾಳೇದಹಳ್ಳಿ, ಅರೇಮಜ್ಜಿಗೇರಿ, ವ್ಯಾಸನತಾಂಡಾ, ಒಳತಾಂಡಾ, ಕೂಲಹಳ್ಳಿ, ಕಾಳನಾಯ್ಕನ ತಾಂಡಾ, ಅಡಾವಿಹಳ್ಳಿ, ಬೆಣ್ಣಿಹಳ್ಳಿ, ಹಾರಕನಾಳು, ಭೀಮ್ಲತಾಂಡಾ, ಹಾರಕನಾಳು ಸಣ್ಣ ತಾಂಡಾ, ದೊಡ್ಡಾ ತಾಂಡಾ, ಕಾನಹಳ್ಳಿ, ಬಂಡ್ರಿ, ಯಲ್ಲಾಪುರ, ಮಾದಾಪುರ, ವಿ. ದಾದಾಪುರ ಹೀಗೆ 132 ಶಾಲೆಗಳ 284 ಕೊಠಡಿಗಳು ದುಸ್ಥಿತಿಯಲ್ಲಿವೆ.

ಉದಾಹರಣೆಗೆ ತಾಳೇದಹಳ್ಳಿ ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೆ ತರಗತಿಗಳಿದ್ದು, 120 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 6 ಕೊಠಡಿಗಳು ಇದ್ದು, ಅದರಲ್ಲಿ 3 ದುಸ್ಥಿತಿಯಲ್ಲಿವೆ. ಇಲ್ಲಿ ಮೂರು ಜನ ಶಿಕ್ಷಕರಿದ್ದಾರೆ. ಎರಡು ಶಿಕ್ಷಕ ಹುದ್ದೆ ಖಾಲಿ ಇವೆ.ತಾಲೂಕಿನಲ್ಲಿ ಶೇ. 70ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಶೇ. 30ರಷ್ಟು ಶಾಲೆಗಳಲ್ಲಿ ಅಡುಗೆ ಕೋಣೆಗಳಿಲ್ಲ. ಅಂದಾಜು 80 ಶಾಲೆಗಳಲ್ಲಿ ಕಾಂಪೌಂಡ್‌ ಇಲ್ಲ. ಈಚೆಗೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ, ಗಾಳಿಗೆ ಶಾಲಾ ಮೇಲ್ಚಾವಣಿ ತಗಡುಗಳು ಹಾರಿ ಹೋಗಿವೆ.

Advertisement

ಅನೇಕ ಶಾಲೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿವೆ. ಕೆಲ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. ಕೆಲವೊಂದು ಕಡೆ ಇದ್ದರೂ ಸ್ವತ್ಛತೆ ಕೊರತೆ ಇದೆ. ಕೋವಿಡ್‌ನಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಈ ಬಾರಿ ಬೇಸಿಗೆ ರಜೆಯನ್ನು ಕಡಿತಗೊಳಿಸಿ ಮೇ 16ರಿಂದಲೇ ಕಲಿಕಾ ಚೇತರಿಕೆ ಎಂಬ ವಿನೂತನ ಕಾರ್ಯಕ್ರಮ ಸರ್ಕಾರ ಹಮ್ಮಿಕೊಂಡಿದೆ.

ಕಲಿಕೆಗೆ ಅನುಕೂಲವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮೂಲಸೌಕರ್ಯಗಳ ಕೊರತೆ ಇದ್ದರೆ ಕಲಿಕೆಗೆ ಮಾರಕವಾಗುವುದು ಅಷ್ಟೆ ಸತ್ಯ. ಆದ್ದರಿಂದ ಸರ್ಕಾರ ಸುಸಜ್ಜಿತ ಕೊಠಡಿಗಳು ಸೇರಿದಂತೆ ಮೂಲಸೌಕರ್ಯ ತ್ವರಿತವಾಗಿ ಒದಗಿಸಿದರೆ ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಯಾಗುವ ಆಶಾ ಭಾವ ಮೂಡುತ್ತದೆ.

ಇಲಾಖೆ ಆದೇಶದ ಪ್ರಕಾರವೇ ಮೇ 16ರಂದು ಶಾಲೆ ಪ್ರಾರಂಭಿಸಲಾಗುವುದು. ಶಾಲಾ ಪ್ರಾರಂಭೋತ್ಸವಕ್ಕಾಗಿ ಎಲ್ಲ ಸಿದ್ಧತೆಯಾಗಿದೆ. ಈಗಾಗಲೇ ತಾಲೂಕಿಗೆ 250 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಅನುಮತಿ ನೀಡಿದೆ. ಇನ್ನು ಕಲ್ಯಾಣ ಕರ್ನಾಟಕ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಹೆಚ್ಚುವರಿ ಕೊಠಡಿಗಳ ಮಂಜೂರಾತಿಗೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. – ಯು. ಬಸವರಾಜಪ್ಪ, ಬಿಇಒ, ಹರಪನಹಳ್ಳಿ

ತಾಳೇದಹಳ್ಳಿ ಶಾಲೆಯಲ್ಲಿ 6 ಕೊಠಡಿಗಳಿದ್ದು ಇದರಲ್ಲಿ 3 ಕೊಠಡಿಗಳು ಶಿಥಿಲಗೊಂಡಿವೆ. ಇನ್ನು ಶೌಚಾಲಯ ಮತ್ತು ಅಡುಗೆ ಕೋಣೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ದುರಸ್ತಿ ಮಾಡಬೇಕಿದೆ. ಮುಖ್ಯವಾಗಿ ಶಿಥಿಲಗೊಂಡಿರುವ ಕೊಠಡಿಗಳನ್ನು ಸರ್ಕಾರ ಬೇಗ ನಿರ್ಮಿಸಬೇಕು. -ಹನುಮಂತಪ್ಪ ಗಿರಿಯಪ್ಪರ್‌, ಅಧ್ಯಕ್ಷರು, ಎಸ್‌ಡಿಎಂಸಿ ತಾಳೇದಹಳ್ಳಿ

ಎಚ್.ದೇವೇಂದ್ರ ಮಜ್ಜಿಗೇರಿ

Advertisement

Udayavani is now on Telegram. Click here to join our channel and stay updated with the latest news.

Next