ಬಜಪೆ : ತರಕಾರಿ ಗಿಡಗಳಿಗೆ ಬಜಪೆ ವ್ಯಾಪ್ತಿಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಇಲ್ಲಿ ಹೆಚ್ಚಿನ ತರಕಾರಿ ಗಿಡಗಳು ಸಂತೆಯಲ್ಲಿ ಬಿಕರಿಯಾಗುತ್ತವೆ. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತರಕಾರಿ ಗಿಡಗಳಿಗೆ ಹಾನಿಯಾಗಿದ್ದು, ಮಾರುಕಟ್ಟೆಯಲ್ಲಿ ಗಿಡಗಳು ಸಿಗದೆ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ತರಕಾರಿಯ ರಾಣಿ ಎಂದೇ ಕರೆಯಲ್ಪಡುವ ಇಲ್ಲಿನ ಬೆಂಡೆಗೆ ಭಾರೀ ಬೇಡಿಕೆ ಇದೆ. ಹೆಚ್ಚಿನ ಕೃಷಿಕರು ಇದನ್ನು ಎಕರೆಗಟ್ಟಲೆ ಬೆಳೆಯುತ್ತಾರೆ. ಈ ಬಾರಿ ಮಹಾ ಮಳೆಗೆ ಭತ್ತದ ಕೃಷಿ ಜತೆಗೆ ತರಕಾರಿ ಕೃಷಿಗೆ ಪೆಟ್ಟು ಬಿದ್ದಿದೆ. ಇದರಿಂದ ತರಕಾರಿ ಕೃಷಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಹೀಗಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಸದಾ ಕಾಣಸಿಗುತ್ತಿದ್ದ ಬೆಂಡೆ ಹಾಗೂ ಮೆಣಸಿನ ಗಿಡ ಈ ಬಾರಿ ಕಾಣುತ್ತಿಲ್ಲ.
ಇಲ್ಲಿನ ಕೃಷಿಕರು ತಿಂಗಳ ಹಿಂದೆಯೇ ತರಕಾರಿ ಬೆಳೆಗೆ ತಯಾರು ಮಾಡಿ ಬೀಜ ಬಿತ್ತನೆ ಮಾಡಿದ್ದರು. ಮಳೆ ಜಾಸ್ತಿಯಾದ ಕಾರಣ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಗಿಡಗಳು ಮೇಲೆ ಬರಲಿಲ್ಲ. ಬಂದರೂ ಕೆಲವು ಅಲ್ಲಲ್ಲಿ ಮಾತ್ರ. ಗಿಡಗಳ ಬುಡಕ್ಕೆ ಒಂದು ಬಾರಿಯೂ ಮಣ್ಣು ಹಾಕಲು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮಳೆ, ಬಿಸಿಲು ಇದ್ದರೆ ಒಂದು ತಿಂಗಳೊಳಗೆ ಎರಡು ಬಾರಿ ಗಿಡಗಳ ಬುಡಕ್ಕೆ ಮಣ್ಣು ಹಾಕಲು ಸಿಗುತಿತ್ತು. ಗಿಡಗಳು ಒಂದು ಅಡಿಯಷ್ಟು ಉದ್ದನೇ ಬೆಳೆಯುತ್ತಿತ್ತು. ಗೊಬ್ಬರ ಹಾಕಲು ಗಿಡಗಳು ಬೆಳೆದಿಲ್ಲ. ಸಾಲು ಸಾಲಲ್ಲಿ ಬಿತ್ತಿದ ಬೀಜಗಳಲ್ಲಿ ಅಲ್ಲಲ್ಲಿ ಮಾತ್ರ ಮೊಳಕೆ ಬಂದು ಗಿಡಗಳಾಗಿವೆ. ಬೇರೆ ಬೀಜ ಬಿತ್ತುವಂತೆ ಇಲ್ಲ. ಈಗಿರುವ ಗಿಡಗಳ ವ್ಯತ್ಯಾಸದಿಂದಾಗಿ ಬುಡಗಳಿಗೆ ಗೊಬ್ಬರ ಹಾಕಲು ತೊಂದರೆಯಾಗುತ್ತಿದೆ.
ಸೋಮವಾರ ಸ್ವಲ್ಪ ಬಿಸಿಲು ಕಾಣಿಸಿಕೊಂಡಿರುವುದು ಕೃಷಿಕರಲ್ಲಿ ಕೊಂಚ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಸಂತೆಯಲ್ಲಿ ತರಕಾರಿ ಗಿಡ ಖರೀದಿಸಲು ಜನ ಮುಗಿಬಿದ್ದರು. ಒಂದೆರಡು ಕಟ್ಟು ಮಾತ್ರ ಬೆಂಡೆ, ಮೆಣಸಿನ ಗಿಡಗಳು ಮಾರುಕಟ್ಟೆಯಲ್ಲಿದ್ದದ್ದು ವ್ಯಾಪಾರಿಗಳು ಮಾತ್ರವಲ್ಲ ಗ್ರಾಹಕರಲ್ಲೂ ನಿರಾಸೆ ಮೂಡಿಸಿತ್ತು. ಹರಿವೆ 50 ಗಿಡಗಳ ಒಂದು ಕಟ್ಟು 30ರೂಪಾಯಿ, ಕುಂಬಳ ಕಾಯಿ 15 ಗಿಡಗಳ ಒಂದು ಕಟ್ಟು 40 ರೂಪಾಯಿ, 30 ಅಲಸಂಡೆ ಗಿಡಕ್ಕೆ 40 ರೂಪಾಯಿ, 30 ಬದನೆಗಿಡಗಳ ಕಟ್ಟು ಒಂದಕ್ಕೆ 30 ರೂಪಾಯಿಗೆ ಮಾರಾಟವಾಯಿತು. 20 ಬೆಂಡೆ ಗಿಡಗಳ ಒಂದು ಕಟ್ಟು 50 ರೂಪಾಯಿ, 300 ಮೆಣಸಿನ ಗಿಡಗಳ ಒಂದು ಕಟ್ಟು 80 ರೂಪಾಯಿಗೆ ಮಾರಾಟವಾದವು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಾರಾಟಕ್ಕೆ ಗಿಡವೇ ಇಲ್ಲ
ಪ್ರತಿ ವರ್ಷ ನಾನು 1.5 ಎಕರೆಯಲ್ಲಿ ಬೆಂಡೆ ಕೃಷಿ ಮಾಡುತ್ತಿದ್ದೆ. ಈ ಬಾರಿಯೂ ಮಾಡಿದ್ದೇನೆ. ಅದರ ಜತೆ ಹೀರೆಕಾಯಿ, ಮುಳ್ಳು ಸೌತೆ ಕೂಡ ಬೆಳೆದಿದ್ದೇನೆ. ಭಾರೀ ಮಳೆಯಿಂದಾಗಿ ಬೆಂಡೆ ಗಿಡಗಳು ಮೇಲೆ ಬರಲಿಲ್ಲ. ಬೆಳವಣಿಗೆ ಕುಂಠಿತವಾಗಿದೆ. ಕಳೆದ ಬಾರಿ ಸಾಲಿನಲ್ಲಿ ಸುಮಾರು 300 ಕಟ್ಟು ಬೆಂಡೆ ಗಿಡಗಳನ್ನು ಮಾರಾಟ ಮಾಡಿದ್ದೆ. ಆದರೆ ಈ ಬಾರಿ ಒಂದು ಕಟ್ಟು ಬೆಂಡೆ ಗಿಡವೂ ಮಾರುವಂತಿಲ್ಲವಾಗಿದೆ. ಮುಳ್ಳುಸೌತೆ ಗಿಡಗಳ ಬಳ್ಳಿ ಮೇಲೆ ಬರಬೇಕಿತ್ತು. ಅದು ಕೂಡ ಬಂದಿಲ್ಲ.
- ಲಾನ್ಸಿ ಡಿ’ಸೋಜಾ
ಅಡ್ಕಬಾರೆಯ ಕೃಷಿಕ
ಮಳೆಗೆ ಕರಗಿತು ಗಿಡ
ಮಾರುಕಟ್ಟೆಯಿಂದ 250 ಹರಿವೆ ಗಿಡಗಳನ್ನು ಕೊಂಡು ಹೋಗಿ, 25 ಸೆಂಟ್ಸ್ ಜಾಗದಲ್ಲಿ ನೆಟ್ಟಿದ್ದೆ. ಮಳೆಗೆ ಎಲ್ಲ ಗಿಡಗಳು ಕರಗಿ ಹೋಗಿವೆ. ಈಗ ಮತ್ತೂಮ್ಮೆ ಕೊಂಡೊಯ್ಯಲು ಮಾರುಕಟ್ಟೆಗೆ ಬಂದಿದ್ದೇನೆ.
-
ಮ್ಯಾಕ್ಸಿಂ, ಪೆರ್ಮುದೆ