ಅಫಜಲಪುರ: ತಾಲೂಕಿನಾದ್ಯಂತ ಮಳೆ ಕೊರತೆ ಹಿನ್ನೆಲೆಯಲ್ಲಿ ಅಲ್ಪಾವಧಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಆತಂಕಪಡುವಂತೆ ಆಗಿದೆ. ಉತ್ತಮ ಮುಂಗಾರು ಮಳೆ ಬಂದ ಹಿನ್ನೆಲೆಯಲ್ಲಿ ರೈತರು ಖುಷಿಯಿಂದ ಅಲ್ಪಾವಧಿ ಬೆಳೆಗಳಾದ ಉದ್ದು, ಎಳ್ಳು, ಹೆಸರು ಬಿತ್ತನೆ ಮಾಡಿದ್ದರು. ಬಿತ್ತನೆಯಾದ ಮೇಲೆ ಮಳೆಯೇ ಬಾರದಿರುವ ಹಿನ್ನೆಲೆಯಲ್ಲಿ ಬೆಳೆಗಳು ಹಾಳಾಗಿವೆ. ಕೆಲವೆಡೆ ರೈತರು ತಾವೇ ಬಿತ್ತಿದ ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ತಾಲೂಕಿನ ಘತ್ತರಗಿಯಲ್ಲಿ ರೈತರೊಬ್ಬರು ಮಳೆ ಆಗದಿದ್ದರೇನಂತೆ ಎಂದು ಸ್ಪಿಂಕ್ಲರ್ ಮೂಲಕ ನೀರು ಸಿಂಪಡಿಸಿ ನೋಡುತ್ತೇನೆ ಎಂದು ಬೆಳೆಗೆ ನೀರು ಸಿಂಪಡಿಸುತ್ತಿದ್ದಾರೆ. ಈ ಪ್ರಯತ್ನ ಫಲ ನೀಡಿದರೆ ಶ್ರಮಕ್ಕೆ ಫಲ ಸಿಗಲಿದೆ. ತಾಲೂಖೀನ ಗೊಬ್ಬೂರ (ಬಿ) ಗ್ರಾಮದಲ್ಲಿ ರೈತರು ಮಳೆ ಕೊರತೆಯಿಂದ ಬಾಡಿ ಹೋಗುತ್ತಿರುವ ಹೆಸರು ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ಸಾಲ ಮಾಡಿಕೊಂಡು ದುಬಾರಿಯಾದರೂ ಯೋಚಿಸದೆ ಆಳುಗಳನ್ನು ಹಚ್ಚಿ ಬಿತ್ತನೆ ಮಾಡಿದ್ದ ರೈತರು ಅದೇ ಕೂಲಿ ಆಳುಗಳಿಂದ ಬಿತ್ತಿದ ಬೆಳೆಯನ್ನು ಕಿತ್ತಿಸುತ್ತಿದ್ದಾರೆ. ಹಿಂಗಾರಿ ಬೆಳೆ ಮೇಲೆ ಆಸೆ: ಮುಂಗಾರು ಮಳೆ ಕೈ ಕೊಟ್ಟಿದ್ದು, ಹಿಂಗಾರು ಮಳೆ ಉತ್ತಮವಾಗಿ ಆದರೆ ಜೋಳವನ್ನಾದರೂ ಬೆಳೆದುಕೊಂಡು ವರ್ಷದ ಗಂಜಿ ಮಾಡಿಕೊಳ್ಳುತ್ತೇವೆ. ದನಕರುಗಳಿಗೆ ಕಣಕಿ ಮೇವಾದರೂ ಸಿಗಲಿದೆ. ಹಿಂಗಾರು ಮಳೆಯೂ ಬಾರದಿದ್ದರೆ ನಾವು ಈ ಬಾರಿ ಗುಳೆ ಹೋಗುವುದಂತು ಖಂಡಿತ ಎಂದು ರೈತರು ತಮ್ಮ ಗೋಳನ್ನು ಹೇಳಿಕೊಳ್ಳುತ್ತಾರೆ. ಈ ಬಾರಿ ತಾಲೂಕಿನಾದ್ಯಂತ 2095 ಹೆಕ್ಟೇರ್ ಪ್ರದೇಶದಲ್ಲಿ ಮಳೆಯಾಶ್ರಿತ ಬಿತ್ತನೆಯಾಗಿದೆ. ಈ ಪೈಕಿ 1676 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದು ಮಳೆಯಾಶ್ರಿತ ಬೆಳೆಯಾಗಿದ್ದರಿಂದ ಸ್ಪಿಂಕ್ಲರ್ ಪಯೋಗಿಸದರೆ ಪ್ರಯೋಜನವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಹಿಂಗಾರು ಕೈಕೊಟ್ಟರೆ ಬೀದಿಪಾಲು: ಮುಂಗಾರು ಮಳೆ ಬಾರದೇ ಇರುವುದರಿಂದ ಬಿತ್ತಿದ ಬೆಳೆ ಹಾಳಾಗಿದೆ. ಹಿಂಗಾರು ಮಳೆಯಾದರೂ ಉತ್ತಮವಾಗಿ ಬಂದರೆ ಜೋಳ ಬೆಳೆದುಕೊಂಡು ನಮಗೂ ಮತ್ತು ದನಕರುಗಳಿಗೂ
ತುತ್ತಿನ ಗಂಜಿ ಬೆಳೆದುಕೊಳ್ಳುತ್ತೇವೆ. ಇಲ್ಲದಿದ್ದರೆ ನಮ್ಮ ಬಾಳು ಬೀದಿಪಾಲಾಗಲಿದೆ.
ಶಿವಾನಂದ ಬಸಣ್ಣ ಕಲಶೆಟ್ಟಿ, ಗೊಬ್ಬೂರ (ಬಿ) ಗ್ರಾಮದ ರೈತ
ಬೆಳೆ ಕೈ ಹಿಡಿಯದಿದ್ದರೆ ಪರದಾಟ: ಸ್ಪಿಂಕ್ಲರ್ ಬಳಸಿ ಹೆಸರು ಬೆಳೆಗೆ ನೀರು ಹರಿಸುತ್ತಿದ್ದೇನೆ. ಇದರಿಂದ ಬೆಳೆ ಕೈಹಿಡಿದರೆ ನಾವು, ನಮ್ಮ ಕುಟುಂಬದವರು ಬದುಕಲು ಸಹಕಾರಿಯಾಗಲಿದೆ. ಇಲ್ಲದಿದ್ದರೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೆಳೆ ಕೈ ಹಿಡಿದರೆ ಇತರ ರೈತರಿಗೂ ಮಾದರಿ ಆಗಲಿದೆ.
ಮಹಾದೇವಪ್ಪ ಗುರುಪ್ಪ ಭೂಸನೂರ, ಘತ್ತರಗಾ ಗ್ರಾಮದ ರೈತ