Advertisement

Aluru: ಸಿಡಿಮದ್ದು ಸ್ಫೋಟದಿಂದ ಮನೆಗಳಿಗೆ ಹಾನಿ

02:58 PM Sep 12, 2023 | Team Udayavani |

ಆಲೂರು: ಪಶ್ಚಿಮಘಟ್ಟ ಸಕಲೇಶಪುರದಿಂದ ಬಯಲಸೀಮೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವ ಸಲುವಾಗಿ ಎತ್ತಿನಹೊಳೆ ಕಾಲುವೆ ಪಾಳ್ಯ ಹೋಬಳಿಯ ಜಿ.ಜಿ . ಕೊಪ್ಪಲು, ಗೋರೆಗೌ ಡನಕೊ ಪ್ಪಲು, ಕಾಮತಿ, ಬೀರಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಲುವೆ ಹಾದು ಹೋಗಿರುವುದರಿಂದ ತಾಲೂಕಿನಲ್ಲಿ ವೈವಿಧ್ಯತೆ ಯಿಂದ ಕೂಡಿರುವ ಕಾಡು ನಾಶವಾಗುವುದರ ಮೂಲಕ ಈ ಭಾಗದ ಜನಸಾಮಾನ್ಯರು ಹಲವು ಸಮಸ್ಯೆ ಎದುರಿಸುವಂತಾಗಿದೆ.

Advertisement

ಎತ್ತಿನಹೊಳೆ ಯೋಜನೆಯಡಿಯಲ್ಲಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದ್ದು, ನಿರ್ಮಾಣದ ಸಂದರ್ಭದಲ್ಲಿ ಕಾಲುವೆ ಅಡ್ಡಲಾಗಿರುವ ದೊಡ್ಡ ದೊಡ್ಡ ಬಂಡೆಗಳನ್ನು ಹೊರ ತೆಗೆಯಲಾಗುತ್ತಿದ್ದು, ಈ ಭಾಗದಲ್ಲಿ ಉಳಿಸಿಕೊಂಡು ಬಂದಿದ್ದ ಸಣ್ಣಪುಟ್ಟ ಬಂಡೆಗಳು ಕಣ್ಮರೆಯಾಗುತ್ತಿರುವುದು ಒಂದು ಕಡೆಯಾದರೆ, ಸ್ಫೋಟಕ ಸಿಡಿಮದ್ದು ಸಿಡಿಸುತ್ತಿರುವುದರಿಂದ ಮನೆಗಳು ಬಿರುಕು ಬಿಟ್ಟು ಚಾವಣಿ ಬಿರುಕು, ಕುಸಿಯುತ್ತಿವೆ. ಮನೆಯಲ್ಲಿ ವಾಸಿಸಲು ಆಗದೇ ಜೀವ ಕೈಯಲ್ಲಿಡಿದು ಬದುಕು ಸಾಗಿಸುವಂತಾಗಿದೆ ಇಲ್ಲಿನ ಜನರ ಸ್ಥಿತಿ.

ಮನೆ ಗೋಡೆ ಬಿರುಕು: ಆಲೂರು ತಾಲೂಕಿನ ಪಾಳ್ಯ ಹೋಬಳಿ ಜಿ.ಜಿ.ಕೊಪ್ಪಲು, ಗೊರೇ ಗೌಡನ ಕೊಪ್ಪಲು, ಬೀರಕನಹಳ್ಳಿ, ಕಾಮತಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಮೂಲಕ ಎತ್ತಿನಹೊಳೆ ಕಾಲುವೆ ಹಾದು ಹೋಗಿದೆ. ಇಲಾಖೆ ಹಾಗೂ ಗುತ್ತಿಗೆದಾರರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರಾತ್ರೋ ರಾತ್ರಿ ಆಳವಾಗಿ ಬಂಡೆ ಕೊರೆದು ಹೆಚ್ಚು ತೀವ್ರವಾದ ಸ್ಫೋಟಕಗಳನ್ನು ಬಳಕೆ ಮಾಡಿ ಸಿಡಿಮದ್ದು ಸಿಡಿಸುವುದರಿಂದ ಸ್ಫೋಟಕಗಳ ರಭಸಕ್ಕೆ ಮನೆ ಗೋಡೆಗಳು ಬಿರುಕು, ಚಾವಣಿ ಕುಸಿಯುತ್ತಿವೆ. ಈ ಬಗ್ಗೆ ಒಂದು ವರ್ಷಗಳಿಂದ ಹಲವು ಬಾರಿ ಕಂದಾಯ ಇಲಾಖೆ ಹಾಗೂ ಎತ್ತಿನಹೊಳೆ ಇಲಾಖೆ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಅದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ: ಡೈನಾಮೆಟ್‌ ಸಿಡಿದಾಗ ಮನೆಯಲ್ಲಿರಲು ಭಯವಾಗುತ್ತದೆ. ಮಕ್ಕಳು, ವಯೋ ವೃದ್ಧರು ಭಯ ಭೀತರಾಗಿ ಮನೆಯಿಂದ ಹೊರ ಬರುತ್ತಿಲ್ಲ. ಎತ್ತಿನಹೊಳೆ ಇಲಾಖೆ ತೆಗೆದಿರುವ ಕಾಲುವೆಗಳಲ್ಲಿ ನೀರು ತುಂಬಿಕೊಂಡು ಗ್ರಾಮದೊಳಗಿರುವ ಚರಂಡಿಗಳಲ್ಲಿ ನೀರು ತುಂಬಿ ಇಡೀ ಗ್ರಾಮಗಳು ಶೀತಪೀಡಿತವಾಗಿದ್ದು, ವೃದ್ಧರು ಹಾಗೂ ಚಿಕ್ಕಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಾರೆ. ತಕ್ಷಣ ಪರಿಹಾರ ನೀಡುವುದರ ಜೊತೆಗೆ ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಲ್ಲಿಯ ವರೆಗೆ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾರತಮ್ಯ ನೀತಿಗೆ ಜಮೀನು ಕಳೆದುಕೊಂಡವರ ಆಕ್ರೋಶ: ಸಕಲೇಶಪುರ ತಾಲೂಕಿನಲ್ಲಿ ಕಾಲುವೆ ತೆಗೆದು ಅವುಗಳಿಗೆ ಪೈಪ್‌ ಅಳವಡಿಸಿ ಮಣ್ಣು ಮುಚ್ಚಲಾಗಿದೆ. ಅದರೆ, ಆಲೂರು ತಾಲೂಕಿನಲ್ಲಿ ಅಳವಾಗಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕಾಲುವೆ ಇಕ್ಕೆಲಗಳಲ್ಲಿ 2-3 ಕಿ.ಮೀ.ನಷ್ಟು ನೀರು ಬಸಿದು ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯುತ್ತಿದೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ದೀರ್ಘ‌ಕಾಲದ ಮರಗಿಡಗಳು ಬತ್ತಿ ಕುಡಿಯುವ ನೀರಿಗೂ ತಾತ್ಸರ ಉಂಟಾಗಿದೆ. ಇದರ ಜೊತೆಗೆ ಸಕಲೇಶಪುರ ತಾಲೂಕಿನ ರೈತರಿಗೆ ಕಾಮಗಾರಿ ಪ್ರಾರಂಭ ಮಾಡುವ ಮೊದಲು ಹೆಚ್ಚು ಪರಿಹಾರ ನೀಡಿದ್ದಾರೆ. ಆದರೆ, ಆಲೂರು ತಾಲೂಕಿನ ರೈತರಿಗೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದರೂ ಇನ್ನೂ ಕೆಲವು ರೈತರಿಗೆ ಪರಿಹಾರ ಹಣ ತಲುಪಿಲ್ಲ.

Advertisement

ಜಮೀನು ಜತೆಗೆ ಮನೆಯನ್ನು ಕಳೆದುಕೊಳ್ಳಬೇಕಾ?: ಎತ್ತಿನಹೊಳೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಿಡಿಮದ್ದು ಸ್ಫೋಟಕದಿಂದ ಅವರ ಮನೆಗಳಿಗೆ ಹಾನಿಯಾಗಿದೆ. ಎರಡು ವರ್ಷಗಳಿಂದ ಇನ್ನೂ ಕೆಲವರಿಗೆ ಪರಿಹಾರ ಸಿಕ್ಕಿಲ್ಲ ಎಂದು ಶಾಸಕ ಸಿಮೆಂಟ್‌ ಮಂಜುನಾಥ್‌ ಉದಯವಾಣಿಗೆ ತಿಳಿಸಿದರು. ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ನ್ಯಾಯ ಸಿಕ್ಕಿಲ್ಲ. ಜಮೀನು ಕಳೆದುಕೊಂಡರಿರುವ ರೈತರು ಮನೆಯನ್ನು ಕಳೆದುಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಸಮಸ್ಯೆ ಸುಳಿಯಲ್ಲಿರುವ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು. ಜೊತೆಗೆ ಎÇÉಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು. ಪ್ರತಿಭಟನೆ ಜನರ ಹಕ್ಕು, ಅಧಿಕಾರಿಗಳು ಹತ್ತಿಕ್ಕಲು ಮುಂದಾದರೆ ನಾನೇ ಅವರ ಜೊತೆ ಪ್ರತಿಭಟನೆಗೆ ಕೂರುತ್ತೇನೆಎಂದು ಎಚ್ಚರಿಸಿದರು.

ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ: ನಾಲ್ಕೈದು ದಿನಗಳ ಹಿಂದೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರ ಜೊತೆ ಭೇಟಿ ನೀಡಿ ಪರಿಶೀಲಿಸಿದ್ದು, ಕೆಲವು ಮನೆಗಳು ಬಿರುಕು ಬಿಟ್ಟಿವೆ. ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರನ್ನು ಕರೆಸಿ ಈ ಬಗ್ಗೆ ಮಾತನಾಡಿದ್ದೇನೆ. ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ. ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ತಹಶಿಲ್ದಾರ್‌ ಮಮತಾ ತಿಳಿಸಿದರು.

ಎತ್ತಿನಹೊಳೆ ಇಲಾಖೆ ಹಾಗೂ ಹಿಂದೆ ಆಡಳಿತ ನಡೆಸಿದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನಮ್ಮ ಬದುಕೆ ಬೀದಿಗೆ ಬಂದಿದೆ. ಯಾರಿಗೋ ನೀರು ಕುಡಿಸಲು ನಮ್ಮ ಜಮೀನು ನೀಡಿ ಪರಿಹಾರಕ್ಕಾಗಿ ಇವರ ಹತ್ತಿರ ಭಿಕ್ಷೆ ಬೇಡಬೇಕಾಗಿದೆ. ನ್ಯಾಯ ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳು ಉಡಾಫೆ ತೋರುತ್ತಾರೆ. -ಯೋಗೇಶ್‌, ಬೀರಕನಹಳ್ಳಿ ಗ್ರಾಮದ ಮುಖಂಡ

ದೊಡ್ಡ ದೊಡ್ಡ ಬಂಡೆ ತೆಗೆಯುವ ಸಲುವಾಗಿ ಆಳವಾಗಿ ಗುಳಿ ಕೊರೆದು ಜಿಲೆಟಿನ್‌ ಹಾಗೂ ಕೆಮಿಕಲ್ಸ್ ಹಾಕಿ ಸಿಡಿಮದ್ದು ಸಿಡಿಸುತ್ತಿರುವುದರಿಂದ ಭೂಮಿ ಕಂಪಿಸಿದೆ. ಮನೆಯ ಗೋಡೆ ಬಿರುಕು ಬಿಟ್ಟು ಹಾನಿಯಾಗಿವೆ. ಶಬ್ದದಿಂದ ಮನೆಯಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಸಮಸ್ಯೆ ಬಗೆಹರಿಸಲು ವಿಫ‌ಲರಾಗಿದ್ದಾರೆ. – ಸುಜಾತ, ಜಿ.ಜಿ.ಕೊಪ್ಪಲು ಗ್ರಾಮದ ನಿವಾಸಿ

– ಟಿ.ಕೆ.ಕುಮಾರಸ್ವಾಮಿ, ಆಲೂರು

Advertisement

Udayavani is now on Telegram. Click here to join our channel and stay updated with the latest news.

Next