Advertisement

ಕಾಮಗಾರಿ ವೇಳೆ ಅನಿಲ ಪೈಪ್‌ಗೆ ಹಾನಿ

11:52 AM Oct 30, 2018 | |

ಮಹದೇವಪುರ: ಮೆಟ್ರೋ ಕಾಮಗಾರಿ ವೇಳೆ ನೈಸರ್ಗಿಕ ಅನಿಲ ಪೈಪ್‌ಗೆ ಹಾನಿಯಾದ ಪರಿಣಾಮ ಅನಿಲ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ವೈಟ್‌ಫಿಲ್ಡ್‌ ರಸ್ತೆಯ ಗರುಡಚಾರ್‌ಪಾಳ್ಯದ ಸಮೀಪ ಸೋಮವಾರ ನಡೆದಿದೆ.

Advertisement

ಸೋಮವಾರ ಮುಂಜಾನೆ 3.45ರ ಸುಮಾರಿನಲ್ಲಿ ಮೆಟ್ರೋ ಕಾಮಗಾರಿ ನಡೆಸುವಾಗ ಭೂಮಿ ಕೊರೆಯುವ ಯಂತ್ರದ ತುದಿ, ಮಹರಾಷ್ಟ್ರದಿಂದ ಮಾಗಡಿ ಮೂಲಕ ವೈಟ್‌ ಫೀಲ್ಡ್‌ನತ್ತ ಬಂದಿರುವ ನೈಸರ್ಗಿಕ ಅನಿಲ ಪೈಪ್‌ಗೆ ತಾಕಿ ಹಾನಿಯಾಗಿದೆ. ಪರಿಣಾಮ ಅನಿಲ ಹೂರಬಂದು ಸುತ್ತಮತ್ತಲ ಪ್ರದೆಶದಲ್ಲಿ ದಟ್ಟವಾಗಿ ಹರಡಿ ಕೆಲ ಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸರು, ಸ್ಥಳದಲ್ಲಿದ್ದ ಎಲ್ಲ ನಾಗರಿಕರು ತಮ್ಮ ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡುವಂತೆ ಹಾಗೂ ವಾಹನಗಳ ಎಂಜಿನ್‌ ಸ್ಥಗಿತಗೊಳಿಸುವಂತೆ ಸೂಚಿಸಿದರು. ಹಾಗೇ ವಿದ್ಯುತ್‌ ಪರಿಕರಗಳನ್ನು ಬಳಸದಂತೆ ಸ್ಥಳೀಯರಿಗೆ ಹಾಗೂ ಸುತ್ತ ಮುತ್ತಲ ನಿವಾಸಿಗಳಿಗೆ ಮನವಿ ಮಾಡಿದರು. 

ಘಟನೆ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಐಟಿಪಿಎಲ್‌-ವೈಟ್‌ಫೀಲ್ಡ್‌ ರಸ್ತೆ, ಗೋ ಶಾಲೆ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಕೆಲ ಕಾಲ ನಿರ್ಬಂಧಿಸಲಾಗಿತ್ತು. ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡದೆ ತಳ್ಳಿಕೊಂಡು ಹೋಗಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅನುಮತಿ ನೀಡಿದ್ದರು.

ನಸುಕಿನ 5 ಗಂಟೆ ವೇಳೆಗೆ ಭಾರತೀಯ ಅನಿಲ ಪ್ರಾಧಿಕಾರ ನಿಗಮದ (ಗೇಲ್‌) ಅಧಿಕಾರಿಗಳು ಮತ್ತು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಘಟನೆ ನಡೆದ ಪ್ರದೇಶದ ಸಮೀಪದಲ್ಲಿಯೇ ಇದ್ದ ಅನಿಲ ಪೂರೈಕೆ ವಾಲ್‌ ಅನ್ನು ಬಂದ್‌ ಮಾಡಿ, ಅನಿಲ ಪೂರೈಕೆ ಸ್ಥಗೀತಗೊಳಿಸಿದರು. ನಂತರ ಹಾನಿಯಾಗಿದ್ದ ಪೈಪ್‌ ದುರಸ್ತಿ ಕಾರ್ಯ ಪ್ರಾರಂಭಿಸಲಾಯಿತು.

Advertisement

ವೈಟ್‌ ಫೀಲ್ಡ್‌ ಸುತ್ತ ಇರುವ ಐಟಿ, ಬಿಟಿ ಕಂಪನಿಗಳಿಗೆ ತೆರಳುತ್ತಿದ್ದ ನೌಕರರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವೈಟ್‌ಫಿಲ್ಡ್‌ ರಸ್ತೆಯಲ್ಲಿ ವಾಹನಗಳ ಏಕ ಮುಖ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಯಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಮಿಲೇನಿಯಂ ಬ್ರಿಗೇಡ್‌ ಖಾಸಗಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಸುತ್ತಮುತ್ತಲಿನ ಟೀ ಅಂಗಡಿ ಮತ್ತು ಹೋಟೆಲ್‌ಗ‌ಳನ್ನು ಮಧ್ಯಾಹ್ನದವರಿಗೆ ತೆರೆಯದಂತೆ ಹಾಗೂ ಬೆಂಕಿ ರೂಪದ ಯಾವುದೇ ವಸ್ತುಗಳನ್ನು ಬಳಸದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಆಗಾಗ ಎಚ್ಚರಿಕೆ ನೀಡುತ್ತಿದ್ದರು.

ಈ ಹಿಂದೆ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆ ಸಮೀಪ ಕೂಡ ಕಾಮಗಾರಿ ವೇಳೆ ಇದೇ ರೀತಿ ಅನಿಲ ಪೈಪ್‌ಗೆ ಹಾನಿಯುಂಟಾಗಿತ್ತು. ಈ ಸಂಬಂಧ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಪರಿಣಾಮ ಟಿನ್‌ ಫ್ಯಾಕ್ಟರಿಯಿಂದ ಐಟಿಪಿಎಲ್‌ಗೆ ತೆರಳುವ ವೈಟ್‌ಫೀಲ್ಡ್‌ ರಸ್ತೆ, ಗರುಡಚಾರಪಾಳ್ಯದ ಗೋಶಾಲೆ ರಸ್ತೆ, ಹೂಡಿ ರಸ್ತೆಯಲ್ಲಿ 5 ಕಿ.ಮೀ.ವರಗೆ ಸಂಚಾರ ದಟ್ಟಾಣೆ ಉಂಟಾಗಿತ್ತು. 

ಬಿಎಂಆರ್‌ಸಿಎಲ್‌, ಐಟಿಡಿಸಿ ವಿರುದ್ಧ ಪ್ರಕರಣ: ಮೆಟ್ರೋ ಕಾಮಗಾರಿ ವೇಳೆ ನೈಸರ್ಗಿಕ ಅನಿಲ ಪೈಪ್‌ಗೆ ಹಾನಿ ಉಂಟು ಮಾಡಿದ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ಐಟಿಡಿಸಿ ವಿರುದ್ಧ ಗೇಲ್‌ ಕಂಪನಿ ಪ್ರಕರಣ ದಾಖಲಿಸಿದೆ. ಕೆಲವು ದಿನಗಳ ಹಿಂದೆ ವೈದೇಹಿ ಆಸ್ಪತ್ರೆ ಬಳಿ ಇದೇ ರೀತಿಯ ಪ್ರಕರಣ ನಡೆದಿತ್ತು. ಆದರೂ ಬಿಎಂಆರ್‌ಸಿಎಲ್‌ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲ್ಲಿಲ್ಲ. ಘಟನೆ ಮರುಕಳಿಸಿದ ಹಿನ್ನೆಲೆಯಲ್ಲಿ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮಗಾರಿಗೆ ಮೆಟ್ರೋ ಅನುಮತಿ ಪಡೆದಿರಲಿಲ್ಲ  ಗೇಲ್‌
ಬೆಂಗಳೂರು:
ಮಹಾದೇವಪುರದಲ್ಲಿ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಹಾದುಹೋಗಿರುವ ಜಾಗದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ, ಭಾರತೀಯ ಅನಿಲ ಪ್ರಾಧಿಕಾರ ನಿಗಮದ (ಗೇಲ್‌) ಅನುಮತಿಯನ್ನೇ ಪಡೆದಿಲ್ಲ. 

ಅನಿಲ ಕೊಳವೆ ಮಾರ್ಗ ಹಾದುಹೋಗಿರುವ ಕಡೆಗಳಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಅನುಮತಿ ಪಡೆಯುವುದು ಅವಶ್ಯಕ. ಹಾಗೂ ಸುರಕ್ಷತೆ ದೃಷ್ಟಿಯಿಂದಲೂ ಇದು ಅತ್ಯಗತ್ಯ. ಆದರೆ, ಉದ್ದೇಶಿತ ಮಹದೇವಪುರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದಂತೆ ಬಿಎಂಆರ್‌ಸಿಯು ತಮ್ಮಿಂದ ಅನುಮತಿ ಪಡೆದಿರಲಿಲ್ಲ ಎಂದು ಗೇಲ್‌ ಸ್ಪಷ್ಟಪಡಿಸಿದೆ. 

ಮೆಟ್ರೋ ನಿರ್ಮಾಣ ಕಾಮಗಾರಿಗಾಗಿ ಸೋಮವಾರ ಭೂಮಿ ಅಗೆಯುವ ವೇಳೆ ನೈಸರ್ಗಿಕ ಅನಿಲ ಕೊಳವೆ ಮಾರ್ಗದ ಎಂಟು ಇಂಚು ಸುತ್ತಳತೆಯ ಸ್ಟೀಲ್‌ ಪೈಪ್‌ ಒಡೆದಿರುವುದು ವರದಿಯಾಗಿದೆ. ಇದರಿಂದ ಮಹದೇವಪುರದಿಂದ ಡೆಕಥ್ಲಾನ್‌ವರೆಗೆ ಅಂದರೆ ಸುಮಾರು ಎರಡು ಕಿ.ಮೀ.ವರೆಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಆ ಮಾರ್ಗದಲ್ಲಿ ಬರುವ ಗ್ರಾಹಕರಿಗೆ ಮೊಬೈಲ್‌ ಕ್ಯಾಸ್‌ಕೇಡ್‌ಗಳ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಯಿತು. 

ಈ ಮಧ್ಯೆ ಘಟನೆ ವರದಿಯಾಗುತ್ತಿದ್ದಂತೆ ತಕ್ಷಣ ಸ್ಥಳೀಯ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ, ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದರು. ಜತೆಗೆ ಗೇಲ್‌ ಸಿಬ್ಬಂದಿ ಕೂಡ ತ್ವರಿತಗತಿಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ಮರುಪೂರೈಕೆ ಆಗಲಿದೆ. ಘಟನೆಗೆ ಸಂಬಂಧಿಸಿದಂತೆ ಮಹದೇವಪುರ ಠಾಣೆಯಲ್ಲಿ ಎಫ್ಐಆರ್‌ ಕೂಡ ದಾಖಲಿಸಲಾಗಿದೆ ಎಂದು ಗೇಲ್‌ ಪ್ರಕಟಣೆಯಲ್ಲಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next