Advertisement

ಎಂಜಿಎಂ ಕಾಲೇಜು ಮುಂದೆ ಒಳಚರಂಡಿಗೆ ಹಾನಿ

08:37 PM Dec 20, 2019 | mahesh |

ಉಡುಪಿ: ಎಂ.ಜಿ.ಎಂ. ಕಾಲೇಜು ಬಸ್‌ ನಿಲ್ದಾಣದ ಬಳಿ ರಸ್ತೆ ವಿಸ್ತರಣೆ ಸಂದರ್ಭ ಒಳಚರಂಡಿಯ ಕೊಳವೆ ಹಾಗೂ ಮ್ಯಾನ್‌ಹೋಲ್‌ ಒಡೆದು ಕಲುಷಿತ ನೀರು ಹರಿಯುವ ಮೂಲಕ ದುರ್ನಾತ ಬೀರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸ್ಥಳೀಯರು ದೂರು ನೀಡಿ ಮೂರು ನಾಲ್ಕು ತಿಂಗಳುಗಳು ಕಳೆದರೂ ಸಮಸ್ಯೆಗೆ ಪರಿಹಾರ ಕಂಡು ಬಂದಿಲ್ಲ.

Advertisement

ನಗರಸಭೆ ವ್ಯಾಪ್ತಿಯ ಸುಮಾರು 35 ವಾರ್ಡ್‌ಗಳಲ್ಲಿ 2 ಸಾವಿರಕ್ಕೂ ಅಧಿಕ ಮ್ಯಾನ್‌ಹೋಲ್‌ಗ‌ಳಿದ್ದು, ಪ್ರತಿ ದಿನ ಒಂದಲ್ಲ ಒಂದು ಕಡೆ ಕೊಳಚೆ ನೀರು ಹೊರಬರುವುದು ಸಾಮಾನ್ಯ ವಾಗಿದೆ. ರಸ್ತೆ ದುರಸ್ತಿ ಸಮಯ ದಲ್ಲಿ ಚರಂಡಿಗಳ ಕೆಲಸಗಳನ್ನು ಕೈಗೊಳ್ಳಲಾಗಿತ್ತು. ಆದರೆ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ಕಾಮಗಾರಿ ಕೆಲಸವೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಎಂಜಿಎಂ ಕಾಲೇಜು ಬಳಿಯೂ ಮೊದಲು ಒಳಚರಂಡಿ ಪೈಪ್‌ಲೈನ್‌ ಕಾಲೇಜಿನ ಮುಂಭಾಗದ ಮ್ಯಾನ್‌ಹೋಲ್‌ಗೆ ಸಂಪರ್ಕಿಸುತ್ತಿತ್ತು. ಆದರೆ ಕಾಮಗಾರಿ ಸಮಯ ಮ್ಯಾನ್‌ಹೋಲ್‌ಗೆ ಹಾನಿಯಾಗಿದ್ದು ತುಸು ಮೀಟರ್‌ ಅಂತರದಲ್ಲಿ ಈ ಒಳಚರಂಡಿ ಪೈಪ್‌ಲೈನ್‌ ಕೂಡ ಒಡೆದು, ಕೊಳಚೆ ನೀರು ಮಳೆ ನೀರು ಹರಿಯುವ ಚರಂಡಿಯಲ್ಲಿ ನಿಲ್ಲುತ್ತಿದೆ ಎಂದು ಸಾರ್ವಜನಿಕರು ದಿನನಿತ್ಯ ಅಳಲು ತೋಡಿಕೊಳ್ಳುತ್ತಾರೆ.

ಪರಸ್ಪರ ಗೊಂದಲ
ಒಳಚರಂಡಿ ದುರಸ್ತಿಯನ್ನು ಸರಿ ಮಾಡುವಂತೆ ಸ್ಥಳೀಯರು ನಗರಸಭೆಗೆ ದೂರು ನೀಡಿದಾಗ ಹೆದ್ದಾರಿ ಪ್ರಾಧಿಕಾರವನ್ನು ಕೇಳುವಂತೆ ತಿಳಿಸಿದ್ದರು. ಹೆದ್ದಾರಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದಾಗ ನಗರಸಭೆಯಲ್ಲಿ ಕೇಳುವಂತೆ ಸೂಚಿಸುತ್ತಾರೆ ಹೊರತು ಇಲ್ಲಿಯವರೆಗೂ ಸಮಸ್ಯೆ ಪರಿಹಾರಕ್ಕೆ ಯಾರೂ ಮುಂದಾಗಿಲ್ಲ. ಈ ಗೊಂದಲಗಳ ನಡುವೆಯೇ ಸುತ್ತಮುತ್ತ ಪರಿಸರ ಕಲುಷಿತಗೊಂಡಿದೆ. ಕೊಳಚೆ ಪ್ರದೇಶದಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯು ಸ್ಥಳೀಯರನ್ನು ಕಾಡುತ್ತಿದೆ.

ಬಸ್‌ ನಿಲ್ದಾಣ ಬಳಕೆ ಕಡಿಮೆ
ಕಾಲೇಜಿನ ಬಳಿ ಇರುವ ಬಸ್‌ ನಿಲ್ದಾಣದ ಪಕ್ಕದಲ್ಲಿಯೇ ಡ್ರೈನೇಜ್‌ ನೀರು ನಿಲ್ಲುವುದರಿಂದ ಸುತ್ತಮುತ್ತ ದುರ್ವಾಸನೆ ಬರುತ್ತಿದೆ. ಈ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಬಸ್‌ ನಿಲ್ದಾಣ ಬಿಟ್ಟು ದೂರದಲ್ಲಿ ಬಸ್‌ ಕಾಯುತ್ತಾರೆ.

ಮಳೆ ಚರಂಡಿ ಕೆಲಸವೂ ಅರ್ಧಕ್ಕೆ ಬಾಕಿ
ಕಾಲೇಜಿನ ಮುಂಭಾಗದ ಮಳೆ ಚರಂಡಿ ಕಾಮಗಾರಿ ಸಂದರ್ಭ ಕಾಲೇಜಿನ ಮೂರು ಪ್ರವೇಶ ದ್ವಾರಗಳ ಪಕ್ಕ ಅಗೆಯಲಾಗಿತ್ತು. ಆದರೆ ಚರಂಡಿಯ ಸಂಪೂರ್ಣ ಕೆಲಸ ಆಗದೆ ಕಾಲೇಜಿನ 3 ಗೇಟುಗಳನ್ನು ತೆರೆಯುಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇಲ್ಲಿ ಸ್ವತ್ಛತೆಗೂ ಧಕ್ಕೆಯುಂಟಾಗುತ್ತಿದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸದ್ಯ ಒಂದೇ ಪ್ರವೇಶ ದ್ವಾರವನ್ನೇ ಆಶ್ರಯಿಸಿಕೊಂಡಿದ್ದಾರೆ.

Advertisement

ತತ್‌ಕ್ಷಣ ಕ್ರಮ
ಸಮಸ್ಯೆ ಗಮನಕ್ಕೆ ಬಂದಿದೆ. ಯುಜಿಡಿ ಪೈಪ್‌ಲೈನ್‌, ಮಳೆನೀರಿನ ಚರಂಡಿ ಕೆಲಸ ಭೂಸ್ವಾಧೀನದ ಮೂಲಕ ನಡೆಯಬೇಕಿದೆ. ಈ ಪ್ರಕ್ರಿಯೆ ಫೆಬ್ರವರಿ -ಮಾರ್ಚ್‌ ತಿಂಗಳ ಒಳಗೆ ಸಂಪೂರ್ಣ ಕೆಲಸ ಮುಗಿಯಲಿದೆ. ತತ್‌ಕ್ಷಣಕ್ಕೆ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗುವುದು.
-ಮಂಜುನಾಥ್‌, ಎಂಜಿನಿಯರ್‌, ಹೆದ್ದಾರಿ ಇಲಾಖೆ

ಚರಂಡಿಗೆ ಬೀಳುವ ಸಾಧ್ಯತೆ
ಇಲ್ಲಿ ಚರಂಡಿಯ ಪಕ್ಕ ಗಿಡಗಳು ಬೆಳೆದಿರುವುದರಿಂದ ಅಪಾಯಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರಿಗೆ ಚರಂಡಿ ಗೋಚರಕ್ಕೆ ಬಾರದೆ ಬೀಳುವ ಸಾಧ್ಯತೆ ಇರುತ್ತದೆ.
-ಸುಜೀತ್‌ ಕೊಟ್ಯಾನ್‌, ಸ್ಥಳೀಯರು

ದುರ್ವಾಸನೆ
ನೀರು ನಿಂತು ಕಾಲೇಜು ಮುಂಭಾಗದಲ್ಲಿ ದುರ್ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ಇದೆ. ಬಸ್‌ನಿಲ್ದಾಣದಲ್ಲಿ ಬಸ್‌ಗೆ ಕಾಯಲು ಕೂಡ ಸಮಸ್ಯೆಯಾಗಿದೆ. ಶೀಘ್ರ ಇದಕ್ಕೊಂದು ಪರಿಹಾರ ಕಲ್ಪಿಸಿ.
-ಪ್ರಣಮ್ಯಾ, ವಿದ್ಯಾರ್ಥಿನಿ

ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ
ಇಲ್ಲಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸದ್ಯ ಕಾಲೇಜಿನ ಮೂರು ಗೇಟುಗಳ ಪೈಕಿ ಒಂದೇ ಗೇಟನ್ನು ತೆರೆಯಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆಯೆ ಲಿಖೀತ ರೂಪದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.ಇನ್ನೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.
-ಡಾ| ಎಂ.ಜಿ.ವಿಜಯ, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು ಉಡುಪಿ

ಜನದನಿ 9148594259

ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next