Advertisement

ಮಳೆಯಿಂದ ಹೆಸರು ಬೆಳೆ ಕೊಯ್ಲು ರಾಶಿಗೆ ಕಂಟಕ: ಅನ್ನದಾತರಿಗೆ ಆತಂಕ

04:38 PM Aug 20, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಕಳೆದ ವರ್ಷ ಬರದಿಂದ ಮುಂಗಾರು ಬೆಳೆ ಹಾನಿಗೀಡಾದರೆ ಈ ಬಾರಿ ಕೆಲ ಕಡೆಗಳಲ್ಲಿ ಮಳೆಯಿಂದಾಗಿ ಕೊಯ್ಲು ಹಾಗೂ ರಾಶಿ ಮಾಡಬೇಕಿದ್ದ ಹೆಸರು ಬೆಳೆ ಹಾಳಾಗುತ್ತಿದ್ದು, ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಕಣ್ಣೆದುರೆ ಬೆಳೆ ಹಾಳಾಗುತ್ತಿರುವುದು, ರಾಶಿ ಮಾಡಲೆಂದು ಗುಂಪು ಹಾಕಿರುವ ಹೆಸರು ಮೊಳಕೆ ಬರುವಂತಾಗುತ್ತಿರುವುದು
ಅನ್ನದಾತರಿಗೆ ಕಣ್ಣೀರು ತರಿಸುತ್ತಿದೆ.

Advertisement

ಧಾರವಾಡ, ಗದಗ, ಹಾವೇರಿ ಇನ್ನಿತರ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿಗೆ ಹೆಸರು ಬಿತ್ತನೆ ಮಾಡಲಾಗುತ್ತದೆ. ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಮುಂಗಾರು ಹಂಗಾಮಿನ ಬಹುತೇಕ ಬೆಳೆ ಬಂದಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿತ್ತು. ಮುಂಗಾರು ಹಂಗಾಮಿನ ಫಸಲುಗಳು ಉತ್ತಮ ಎನ್ನುವ ರೀತಿಯಲ್ಲಿದ್ದವು. ಹೆಸರು ಬೆಳೆಯೂ ಉತ್ತಮ ಫಸಲಿನ ನಿರೀಕ್ಷೆ
ಮೂಡಿಸಿತ್ತು. ಹಲವು ಕಡೆಗಳಲ್ಲಿ ಹೆಸರು ಬೆಳೆ ಕೊಯ್ಲು ಆಗಿದ್ದು, ಕೆಲ ರೈತರು ರಾಶಿ ಮಾಡಿದ್ದಾರೆ.ಆದರೆ ಇನ್ನು ಹಲವು ಕಡೆಗಳಲ್ಲಿ ಕಟಾವು ಮಾಡಿದ್ದು, ರಾಶಿ ಮಾಡಲು ಸಾಧ್ಯವಾಗದೆ ಗುಂಪು ಹಾಕಲಾಗಿದೆ.

ಮೊಳಕೆ ಬರುವ ಭೀತಿ: ಹೆಸರು ಬೆಳೆ ಕಟಾವಿಗೆ ಬಂದ ನಂತರ ಹೆಚ್ಚಿನ ದಿನಗಳವರೆಗೆ ಉಳಿಸಲು ಬರಲ್ಲ. ಬಿಸಿಲು ಹೆಚ್ಚಾದರೆ ಕಾಳು ಸಿಡಿದು ಮಣ್ಣು ಪಾಲಾಗುತ್ತದೆ. ಮಳೆ ಅಧಿಕವಾಗಿ ಕೊಯ್ಲು ಸಾಧ್ಯವಾಗದ್ದರೂ ಬೆಳೆ ಹಾನಿಗೀಡಾಗುತ್ತದೆ. ಕೊಯ್ಲು ಮಾಡಿ ರಾಶಿ ಮಾಡದೆ ಒಂದು ಕಡೆ ಹಾಕಿದರೂ ಕಾಳು ಮೊಳಕೆ ಬರಲು ಶುರುವಾಗುತ್ತದೆ. ಇಂತಹ ಎಲ್ಲ ಸಂಕಷ್ಟಗಳನ್ನು ಮೀರಿ ರೈತರು ಹೆಸರಿನ ಫಸಲು ಪಡೆಯಬೇಕಿದೆ.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ವಿಶೇಷವಾಗಿ ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಮಳೆ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಬಿಟ್ಟೂ ಬಿಡದೆ ಹಲವು ದಿನಗಳವರೆಗ ಜಿಟಿ ಜಿಟಿ ಹಾಗೂ ಕೆಲ ಕಡೆ ಜೋರು ಮಳೆಯಾಗಿತ್ತು. ಇದರಿಂದ ಹಲವು ರೈತರು ಹೆಸರು ಬೆಳೆ ಕೊಯ್ಲು ಸಾಧ್ಯವಾಗಿಲ್ಲ. ಕೊಯ್ಲು ಮಾಡಿದರೂ ಕೆಲವರಿಗೆ ರಾಶಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಕಳೆದ ಐದಾರು ದಿನಗಳಿಂದ ಮಳೆ ಇಲ್ಲದೆ ಇನ್ನೇನು ಭೂಮಿ ಒಣಗಿದೆ ಹೆಸರು ಬೆಳೆ ಕಟಾವು ಮಾಡಿದರಾಯಿತು ಎಂದುಕೊಳ್ಳುವುದರೊಳಗೆ ಎರಡ್ಮೂರು ದಿನಗಳಿಂದ ಮತ್ತೆ ಮಳೆ ಅಬ್ಬರಿಸ ತೊಡಗಿರುವುದು ರೈತರ ಜಂಘಾಬಲವೇ
ಕುಸಿಯುವಂತೆ ಮಾಡಿದೆ.

ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶೇ.75 ಹೆಸರು ಬೆಳೆ ಕಟಾವು ಆಗಿದ್ದು, ರಾಶಿ ಮಾಡಬೇಕಿದೆ. ಶೇ.25ಬೆಳೆ ಕಟಾವು ಮಾಡಬೇಕಿದೆ. ಮಳೆಯಿಂದಾಗಿ ಕಟಾವು, ರಾಶಿ ಸಾಧ್ಯವಾಗದೆ ಶೇ.10 ಹೆಸರು ಬೆಳೆ ಮೊಳಕೆ ಬರತೊಡಗಿದೆ. ಇನ್ನಷ್ಟು ದಿನ ಮಳೆ ಮುಂದುವರಿದರೆ ಹೆಸರು ಬೆಳೆಯಲ್ಲಿ ಮೊಳಕೆ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ ಎಂಬ ಆತಂಕ
ರೈತರದ್ದಾಗಿದೆ. ಒಂದು ಎಕರೆಗೆ 6-7 ಕ್ವಿಂಟಲ್‌ ನಷ್ಟು ಬರುತ್ತಿದ್ದ ಹೆಸರು ಇದೀಗ ಮಳೆ ಹೊಡೆತ ದಿಂದ ಎಕರೆಗೆ 3 ಕ್ವಿಂಟಲ್‌ ಬಂದರೂ ಹೆಚ್ಚು ಎನ್ನುವಂತಿದೆ. ಮಳೆ ಇದೇ ರೀತಿ ಮುಂದುವರಿದರೆ ಅದು ಕೂಡ ಕೈಗತ್ತುತ್ತದೆಯೋ ಇಲ್ಲವೋ ಎಂಬ
ಆತಂಕ ರೈತರನ್ನು ಕಾಡತೊಡಗಿದೆ.

Advertisement

ಆರಂಭವಾಗದ ಖರೀದಿ ಕೇಂದ್ರ: ಹೆಸರು ಬೆಳೆ ಮಾರುಕಟ್ಟೆಗೆ ಬರುತ್ತಿದ್ದು, ಕೇಂದ್ರ ಸರ್ಕಾರ ಘೋಷಣೆ ಮಾಡಿದ ಕನಿಷ್ಠ ಬೆಂಬಲ ಬೆಲೆ ದೊರೆಯುತ್ತಿಲ್ಲ. ಹೆಸರು ಖರೀದಿ ಕೇಂದ್ರಗಳನ್ನು ಆರಂಭಿಸದೆ ಮಾರುಕಟ್ಟೆಯಲ್ಲಿ ಫಸಲಿನ ದರ ಹೆಚ್ಚಳವಾಗುತ್ತದೆ ಇಲ್ಲವೆ ಎಂಎಸ್‌ಪಿ ಅಡಿಯಲ್ಲಿಯಾದರೂ ರೈತರು ಖರೀದಿ ಕೇಂದ್ರಕ್ಕೆ ಮಾರಾಟ ಮಾಡುತ್ತಾರೆ. ಇಲ್ಲವಾದರೆ ದಲ್ಲಾಳಿಗಳು ಆಡಿದ್ದೇ ಆಟ ಎನ್ನುವಂತಾಗುತ್ತದೆ. ಹೆಸರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 5-6 ಸಾವಿರ ರೂ.ಗಳವರೆಗೆ ಖರೀದಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಒಂದು ಎಕರೆಗೆ ಹೆಸರು ಬೆಳೆ ಕಟಾವು ಮಾಡಲು ಯಂತ್ರಕ್ಕೆ 2,500 ರೂ.ಗಳು ನೀಡಬೇಕು, ಒಟ್ಟಾರೆ ಎಕರೆಗೆ ಅಂದಾಜು 10 ಸಾವಿರ ರೂ.ಗಳವರೆಗೆ ಖರ್ಚು ಬರುತ್ತದೆ. ಉತ್ತಮ ದರ ಸಿಕ್ಕರೆ ಪರವಾಗಿಲ್ಲ. ಒಂದು ಕಡೆ ಬರ-ಅತಿ ಮಳೆ ಯಿಂದ ಬೆಳೆನಷ್ಟ ಇನ್ನೊಂದು ಕಡೆ ಉತ್ತಮ ಬೆಲೆ ಸಿಗುತ್ತಿಲ್ಲ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಇಂದಿಗೂ ಬರ ಪರಿಹಾರ ಹಣ ರೈತರಿಗೆ ಸಿಕ್ಕಿಲ್ಲವಾಗಿದೆ. ನಮ್ಮಗ್ರಾಮವೊಂದರಲ್ಲೇ ಸುಮಾರು 2,500 ಖಾತೆಗ ‌ಳಿದ್ದು, ಕೇವಲ 437 ರೈತರ ಖಾತೆಗಳಿಗೆ ಹಣ ಜಮಾ ಆಗಿದ್ದು ಬಿಟ್ಟರೆ ಉಳಿದವರಿಗೆ ಬಂದಿಲ್ಲ. ಕೇಳಿದರೆ ಆಧಾರ ಲಿಂಕ್‌ ಆಗಿಲ್ಲ, ತಾಂತ್ರಿಕ ತೊಂದರೆ ಆಗಿದೆ ಎಂಬ ಸಬೂಬು ಹೇಳಲಾಗುತ್ತದೆ. ಹೀಗಾದರೆ ರೈತರು ಬದುಕುವುದಾದರೂ ಹೇಗೆ, ಯಾವ ಪುರುಷಾರ್ಥಕ್ಕೆ ಒಕ್ಕಲುತನ ಮಾಡಬೇಕು ಎಂಬುದು ಕೋಳಿವಾಡದ ರೈತರ ಸುಭಾಸ ಬೂದಿಹಾಳ ಅವರ ಆಕ್ರೋಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next