ಕೊಪ್ಪಳ: ಜಿಲ್ಲೆಯ 26 ಕಿ.ಮೀ. ಉದ್ದದ ಹಿರೇಹಳ್ಳ ಸ್ವಚ್ಛ ಮಾಡಿ ಜಲ ಸಂರಕ್ಷಣೆಗೆ ಪಣ ತೊಟ್ಟಿದ್ದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಂಕಲ್ಪದಂತೆ ಹಳ್ಳದುದ್ದಕ್ಕೂ 6ಕ್ಕೂ ಹೆಚ್ಚು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ ಅತಿಯಾದ ಮಳೆಯಿಂದಾಗಿ ಬ್ಯಾರೇಜ್‌ಗಳಿಗೆ ಅಪಾಯ ಎದುರಾಗಿದ್ದು, ತಡೆಗೋಡೆಗಳು ಕುಸಿಯುತ್ತಿವೆ. ಇಲ್ಲಿನ ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಿತಿಯೂ ಹೀಗೇ ಆಗಿ ಕಿತ್ತೋಗಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಹೌದು.. ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಕೆಲ ವರ್ಷಗಳ ಹಿಂದಷ್ಟೇ ಹಳ್ಳದಲ್ಲಿನ ತ್ಯಾಜ್ಯವನ್ನು ತಾವೇ ಜನರ ಸಹಯೋಗದಲ್ಲಿ ಸ್ವತ್ಛಮಾಡಿ ಇಡೀ ನಾಡಿಗೆ ಬೆಳಕಾದರು. ಸ್ವತ್ಛತೆಯ ಜೊತೆಗೆ ಹಳ್ಳದುದ್ದಕ್ಕೂ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿದೆ ಎಂದು ಜಿಲ್ಲಾಡಳಿತ, ಜನಪ್ರತಿನಿ ಧಿಗಳ ಸಹಯೋಗದಲ್ಲಿ ಪ್ರಸ್ತುತ 6ಕ್ಕೂ ಹೆಚ್ಚು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ.
ಬ್ಯಾರೇಜ್‌ಗಳೇನೋ ಅತ್ಯಂತ ಸುಂದರವಾಗಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣಗೊಂಡಿವೆ. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಹಾಗೂ ಹಿರೇಹಳ್ಳ ಡ್ಯಾಂನಿಂದ ಅಧಿಕ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಬ್ಯಾರೇಜ್ ಮಟ್ಟ ಮೀರಿಯೂ ನೀರು ಹರಿದಿದೆ. ಇದರಿಂದ ಬ್ಯಾರೇಜ್ ಅಕ್ಕಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ತಡೆಗೋಡೆಗಳು ಕುಸಿದಿವೆ. ತಡೆಗೋಡೆ ಕುಸಿದು ಅಕ್ಕಪಕ್ಕದಲ್ಲಿನ ರೈತರ ಜಮೀನಿಗೂ ನೀರು ನುಗ್ಗಿ ಸಂಕಷ್ಟ ತಂದಿರಿಸಿದೆ.
ಕೋಳೂರು ಬ್ಯಾರೇಜು ಹೀಗೆ ಆಗಿತ್ತು: ಈ ಮೊದಲು ಕೋಳೂರು ಬಳಿ ಮೊದಲ ಬಾರಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿತ್ತು. ಈ ಬ್ಯಾರೇಜ್ ಸುತ್ತಲಿನ ಸಾವಿರಾರು ರೈತರ ಬದುಕಿಗೆ ಆಸರೆಯಾಗಿತ್ತು. ಇದು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಆದರೆ ಕಳೆದ ಬಾರಿ ಅತಿಯಾದ ಮಳೆಯಿಂದ ಹಾಗೂ ಡ್ಯಾಂನಿಂದ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಕೋಳೂರು ಬ್ಯಾರೇಜ್ ಅರ್ಧ ಭಾಗ ಕಿತ್ತು ಹೋಗಿತ್ತು. ಅದಕ್ಕೂ ಮೊದಲೇ ತಡೆಗೋಡೆಗಳು ಕುಸಿದಿದ್ದವು. ತಡೆಗೋಡೆ ಕುಸಿತವಾದ ಕುರಿತು ಮಾಧ್ಯಮದಲ್ಲಿ ವರದಿ ಬಂದಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿಲ್ಲ. ಇದರಿಂದ ಗೋಡೆ ಮೊದಲೇ ರಕ್ಷಣೆ ಮಾಡಿದ್ದರೆ ಬ್ಯಾರೇಜು ಉಳಿಯುತ್ತಿತ್ತು.
ರಕ್ಷಿಸಿ: ಪ್ರಸ್ತುತ ಈಗ ಹೊಸದಾಗಿ ನಿರ್ಮಿಸಿರುವ 6ಕ್ಕೂ ಹೆಚ್ಚು ಬ್ಯಾರೇಜುಗಳ ತಡೆಗೋಡೆಗಳು ನೀರಿನ ರಭಸಕ್ಕೆ ಕಿತ್ತು ಹೋಗಿವೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ತಡೆಗೋಡೆ ರಕ್ಷಣೆ ಮಾಡದಿದ್ದರೆ ಹೊಸ ಬ್ಯಾರೇಜುಗಳಿಗೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಕೂಡಲೇ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಜನಪ್ರತಿನಿಧಿಗಳು ತುರ್ತು ಸಭೆ ನಡೆಸಿ, ತಡೆಗೋಡೆ ರಕ್ಷಣೆ ಮಾಡಿದ್ದರೆ ಕೋಳೂರು ಬ್ಯಾರೇಜಿಗೆ ಆಗಿರುವ ಹಾನಿಯೂ ಇಲ್ಲಿ ಸಂಭವಿಸಬಹುದು ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಒಟ್ಟಿನಲ್ಲಿ ಶ್ರೀಗಳ ಸಂಕಲ್ಪದಂತೆ ಬ್ರಿಡ್ಜ್ ಕಂ ಬ್ಯಾರೇಜುಗಳು ಉಳಿಯಬೇಕಿದೆ. ಜಲ ಸಂರಕ್ಷಣೆಯಾಗಿ ಜನರಿಗೆ ಆಸರೆಯಾಗಬೇಕಿದೆ. ಇದರಿಂದ ಬ್ಯಾರೇಜಿನ ತಡೆಗೋಡೆಗಳು ಮೊದಲು ನಿರ್ಮಿಸಬೇಕಿದೆ. ಇಲ್ಲದಿದ್ದರೆ ಅಪಾಯ ಎದುರಾಗುವುದರಲ್ಲಿ ಎರಡು ಮಾತಿಲ್ಲ ಎಂದೆನ್ನುತ್ತಿದೆ ರೈತ ಸಮೂಹ.