ಬೆಳ್ತಂಗಡಿ: ಚಾರ್ಮಾಡಿ ಗ್ರಾ. ಪಂ. ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬಾರೆ, ಕುಂಟಾಡಿ, ಕುಕ್ಕಾಜೆ ಮೊದಲಾದ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಒಂಟಿ ಸಲಗ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ.
ಸ್ಥಳೀಯರು ಒಂಟಿ ಸಲಗವನ್ನು ತೋಟದಲ್ಲಿ ಕಂಡಿದ್ದು ಓಡಿಸಲು ಪ್ರಯತ್ನಿಸಿದ್ದಾರೆ. ಮೂರು ನಾಲ್ಕು ದಿನಗಳ ಹಿಂದೆ ಈ ಪರಿಸರದಲ್ಲಿ ಕೆಲವು ಆನೆಗಳು ಕೃಷಿ ಹಾನಿ ಉಂಟು ಮಾಡಿದ್ದವು.
ತೋಟತ್ತಾಡಿ ಪ್ರದೇಶ ಇತ್ತೀಚೆಗೆ ಸ್ಯಾಟಲೈಟ್ ಫೋನ್ ಬಳಕೆ, ನಿಗೂಢ ಸ್ಫೋಟ ಎಂಬ ವದಂತಿಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತಲ್ಲದೇ ಪೊಲೀಸ್ ಇಲಾಖೆ ಸಾಕಷ್ಟು ಪರಿಶೀಲನೆ ನಡೆಸಿತ್ತು. ಈ ಸಮಯ ಅಧಿಕಾರಿಗಳಿಗೆ ಕಾಡಾನೆಗಳ ಸಂಚಾರದ ಹಲವು ಕುರುಹುಗಳು ಕಂಡುಬಂದಿದ್ದವು.
ಪಟಾಕಿ ನೀಡಲು ಆಗ್ರಹ
ಕಾಡಾನೆಗಳನ್ನು ಓಡಿಸಲು ಇಲಾಖೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ, ಪಟಾಕಿ ಪೂರೈಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆ ಅಗತ್ಯ ಇರುವಷ್ಟು ಪಟಾಕಿಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಆನೆ ಸಂಚಾರ ಇರುವ ಸ್ಥಳಗಳಲ್ಲಿ ಆನೆ ಕಂದಕ ನಿರ್ಮಿಸಿ ಅವುಗಳ ಸಂಚಾರವನ್ನು ಹತೋಟಿಗೆ ತರಬೇಕು. ಕಾಡಾನೆಗಳು ದಾಟುವ ಇಲ್ಲಿನ ಸ್ಥಳಗಳಿಗೆ ಆನೆ ಕಂದಕ ನಿರ್ಮಾ ಣಕ್ಕೆ ಅನುದಾನ ಮಂಜೂರಾಗಿದ್ದು, ಇದರ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಸ್ಥಳೀಯರು ಇಲಾಖೆಯನ್ನು ಆಗ್ರಹಿಸಿದ್ದಾರೆ.