Advertisement

ದಾಲ್ಮಿಯಾ ಜಂಕ್ಷನ್‌ ಮೇಲ್ಸೇತುವೆಗೆ 3 ತಿಂಗಳು ಗಡುವು

12:00 PM Sep 06, 2017 | |

ಬೆಂಗಳೂರು: ಮೈಸೂರು ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆ ನಡುವಿನ ಸಿಗ್ನಲ್‌ ಫ್ರೀ ಕಾರಿದಾರ್‌ ಯೋಜನೆಯ ಕಾಮಗಾರಿಗಳನ್ನು ಮಂಗಳವಾರ ಪರಿಶೀಲನೆ ನಡೆಸಿದ ಮೇಯರ್‌ ಜಿ. ಪದ್ಮಾವತಿ, ಈ ಮಾರ್ಗದಲ್ಲಿ ಬರುವ ದಾಲ್ಮಿಯ ಜಂಕ್ಷನ್‌ ಮೇಲ್ಸೇತುವೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. 

Advertisement

ದಾಲ್ಮಿಯ ಜಂಕ್ಷನ್‌ ಬಳಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ಈಚೆಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರೂ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದ್ದರು. ಹೀಗಿರುವಾಗಲೇ ಮೇಯರ್‌ ಅವರೂ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. 

ಮುಂದಿನ ಮೂರು ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಅಣಿಗೊಳಿಸುವಂತೆ ಆದೇಶಿಸಿದ್ದಾರೆ. 25.89 ಕೋಟಿ ರೂ. ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿದೆ. ನಂತರ ಮುತ್ತುರಾಜ್‌ ಜಂಕ್ಷನ್‌ ಬಳಿ 18.7 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿರುವ ಅಂಡರ್‌ ಪಾಸ್‌ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಮೇಯರ್‌, ಮಂದಗತಿಯ ಕಾಮಗಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ನಾಗರಿಕರಿಂದ ದೂರು 
ಪರಿಶೀಲನೆ ವೇಳೆ ಸ್ಥಳೀಯರು, ಕಾಮಗಾರಿ ಸಾಕಷ್ಟು ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಅಧಿಕಾರಿಗಳು ಈಗಿರುವ ರಸ್ತೆಯಲ್ಲಿ ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಸಂಚಾರದಟ್ಟಣೆ ಹೆಚ್ಚಾಗುತ್ತಿದೆ ದೂರಿದರು. ಆಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್‌, “ಕೆಲಸ ಆರಂಭಿಸದಿದ್ದರೆ, ತಡೆಗೋಡೆ ನಿರ್ಮಿಸಿರುವುದು ಏಕೆ? ಬುಧವಾರದಿಂದಲೇ ರಸ್ತೆಯ ಎರಡೂ ಬದಿ ಕಾಮಗಾರಿ ಆರಂಭಿಸಬೇಕು’ ಎಂದು ಆದೇಶಿಸಿದರು. 

ಮೇಲ್ಸೇತುವೆ ಬಹುತೇಕ ಪೂರ್ಣ
ಕೆಇಬಿ ಜಂಕ್ಷನ್‌ ಬಳಿಯ ಮೇಲ್ಸೇತುವೆ ಕಾಮಗಾರಿಯನ್ನೂ ಮೇಯರ್‌ ಪರಿಶೀಲನೆ ನಡೆಸಿದರು. 17.82 ಕೋಟಿ ವೆಚ್ಚದ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಶೀಘ್ರದಲ್ಲೇ ಈ ಮೇಲ್ಸೇತುವೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ ಎಂದು ತಿಳಿಸಿದರು. 

Advertisement

ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಜೆ.ಡಿ. ಮರ ಜಂಕ್ಷನ್‌ ನಡುವಿನ 14.5 ಕಿ.ಮೀ. ರಸ್ತೆಯನ್ನು ಸಿಗ್ನಲ್‌ ಫ್ರೀ ಕಾರಿದಾರ್‌ ಆಗಿ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಫ‌ುಡ್‌ವರ್ಲ್ಡ್ ಜಂಕ್ಷನ್‌ ಹಾಗೂ ಜೆ.ಡಿ. ಮರ ಜಂಕ್ಷನ್‌ಗಳು ಬರುತ್ತವೆ. ಇಲ್ಲಿ ಕೂಡ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ.  

Advertisement

Udayavani is now on Telegram. Click here to join our channel and stay updated with the latest news.

Next