ಬೀದರ: ನ್ಯಾ| ಎ.ಜೆ. ಸದಾಶಿವ ಆಯೊಗದ ವರದಿ ಜಾರಿಗೊಳಿಸುವಂತೆ ಶಿಫಾರಸು ಮಾಡುವುದು ಮತ್ತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅ. 11ರಂದು ಕರೆ ನೀಡಿರುವ “ಬೀದರ ಬಂದ್’ಗೆ ವಿವಿಧ ದಲಿತಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಡಿಎಸ್‌ಎಸ್ ಸಂಘಟನೆಗಳ ಪ್ರಮುಖರಾದ ಮಾರುತಿ ಬೌದ್ಧೆ, ರಮೇಶ ಡಾಕುಳಗಿ, ಬಾಬುರಾವ್ ಪಾಸ್ವಾನ್ ಮತ್ತು ಮಹೇಶ ಗೋರನಾಳಕರ್ ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಸಂಪುಟದಲ್ಲಿ ಸಚಿವ ಸ್ಥಾನದ ಉನ್ನತ ಹುದ್ದೆಯಲ್ಲಿರುವ ಚವ್ಹಾಣ ಅವರು ಆಯೋಗದ ವರದಿ ಜಾರಿ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅ. 25ರಂದು ಎಪಿಎಂಸಿ ಬಂದ್
ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ವಗೀಕರಣಕ್ಕಾಗಿ ಕಳೆದ 25 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗಿದೆ. ಆದರೆ, ಎಲ್ಲ ರಾಜಕೀಯ ಪಕ್ಷಗಳು ಜಾರಿಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿವೆ. ಕೇವಲ ಚುನಾವಣೆ ವೇಳೆ ವರದಿ ಜಾರಿ ಬಗ್ಗೆ ಆಶ್ವಾಸನೆ ನೀಡಿ ಮುಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಸಮಾಜವನ್ನು ಕೇವಲ ಮತ ಬ್ಯಾಂಕ್‌ಗೆ ಬಳಸಿಕೊಂಡು ತುಳಿಯಲಾಗುತ್ತಿದೆ ಎಂದು ಕಿಡಿಕಾರಿದರು.
ಪರಿಶಿಷ್ಟ ಜಾತಿ ಪಟ್ಟಿಯಿಂದ ಲಮಾಣಿ ಮತ್ತು ಭೋವಿ ಸಮಾಜಗಳನ್ನು ತೆಗೆದು ಹಾಕಬೇಕೆಂಬುದು ನಮ್ಮ ಆಗ್ರಹವಲ್ಲ. ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಇದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಅಸ್ಪೃಶ್ಯ ಜನಾಂಗದವರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿದಂತಾಗುತ್ತದೆ. ಆದರೆ ಈ ಬಗ್ಗೆ ದಲಿತ ಮತ್ತು ಮಾದಿಗ ಸಮಾಜದ ಯಾರೊಬ್ಬ ಶಾಸಕರು, ಸಚಿವರು ಸದನದಲ್ಲಿ ಎತ್ತುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬೀದರ ಬಂದ್‌ಗೆ ಸಾರ್ವಜನಿಕರು, ವ್ಯಾಪಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಘಟನೆಗಳ ಪ್ರಮುಖರಾದ ರಮೇಶ ಕಟ್ಟಿತುಗಾಂವ್, ಪ್ರದೀಪ ಹೆಗಡೆ ಇನ್ನಿತರರಿದ್ದರು.
ಸದಾಶಿವ ಆಯೋಗದ ವರದಿ ಕುರಿತು ಸಚಿವ ಪ್ರಭು ಚವ್ಹಾಣ ಅವರ ಹೇಳಿಕೆ ಸಂಬಂಧ ರಾಜ್ಯಾದ್ಯಂತ ಬೆಂಕಿ ಹೊತ್ತಿಕೊಂಡಿದ್ದು, ಎಲ್ಲೆಡೆ ಅವರನ್ನು ಛೀಮಾರಿ ಹಾಕಲಾಗುತ್ತಿದೆ. ಮೂಲ ಅಸ್ಪೃಶ್ಯರಾದ ದಲಿತರು ಮತ್ತು ಮಾದಿಗರ ನಡುವೆ ರಾಜಕಾರಣಿಗಳು ಕಂದಕ ಸೃಷ್ಟಿ ಮಾಡುತ್ತ ಬಂದಿದ್ದರು. ಆದರೆ, ಈಗ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಾಡು ಇಲ್ಲವೇ ಮಡಿ ಈ ಹೋರಾಟ. ಬೀದರ ಬಂದ್‌ಗೆ ಬೆಂಗಳೂರಿನಿಂದ ಒಂದು ಸಾವಿರ ಮತ್ತು ಪ್ರತಿ ಜಿಲ್ಲೆಯಿಂದ 200 ಜನ ಸೇರಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.
ಫರ್ನಾಂಡಿಸ್ ಹಿಪ್ಪಳಗಾಂವ್, ಕಾರ್ಯಾಧ್ಯಕ್ಷ ಮಾದಿಗ ಮೀಸಲಾತಿ ಹೋರಾಟ ಸಮಿತಿ