Advertisement

ಠಾಣೆ ಎದುರು ದಲಿತ ಸಂಘಟನೆಗಳ ಪ್ರತಿಭಟನೆ

11:09 PM Jul 02, 2019 | mahesh |

ಪುತ್ತೂರು: ಬಾಲಕಿಯ ಮೇಲೆ ದೌರ್ಜನ್ಯಕ್ಕೆ ಕಾರಣವಾಗಿರುವ ಠಾಣಾಧಿಕಾರಿ ಸಹಿತ ಮೂವರು ಪೊಲೀಸ್‌ ಸಿಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಹಾಗೂ ಬಾಲಕಿಗೆ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ವತಿಯಿಂದ ಸಂಪ್ಯ ಪೊಲೀಸ್‌ ಠಾಣೆಯ ಎದುರು ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಬೆಳಗ್ಗೆ 11 ಗಂಟೆಗೆ ಠಾಣೆಯ ಎದುರು ಜಮಾಯಿಸಿದ ಸಂಘಟನೆಗಳ ಮುಖಂಡರ ಸಹಿತ ನೂರಾರು ಮಂದಿ ಠಾಣೆ, ಎಸ್‌ಐ ಹಾಗೂ ಸಿಬಂದಿಯ ವಿರುದ್ಧ ಘೋಷಣೆ ಕೂಗಿದರು. ಬಾಲಕಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಒತ್ತಡದಿಂದ ಒಪ್ಪಿಸಿದ್ದಾರೆ
ದಲಿತ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತ ಸಂಘಟನೆಗಳ ಪ್ರಮುಖರು ಠಾಣೆಯ ಎದುರು ಪ್ರತಿಭಟನೆ ಮಾಡಿದ್ದು ಇದು ಪ್ರಥಮ. ದಲಿತ ಬಾಲಕಿಗೆ ಕಿರುಕುಳ, ಚಿತ್ರ ಹಿಂಸೆ ನೀಡಿ ಒತ್ತಡದಿಂದ ಕಳ್ಳತನವನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಘಟನೆಗೆ ಕಾರಣವಾದ ಎಸ್‌ಐ ಹಾಗೂ ಮೂವರು ಸಿಬಂದಿಯನ್ನು ಕೆಲಸದಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಕರಣ ದಾಖಲಿಸಿ

ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಇದು ಎಲ್ಲ ದಲಿತ ಸಮುದಾಯಗಳಿಗೆ ಆದ ನೋವು. ಇತರ ರಾಜ್ಯಗಳಲ್ಲಿ ನಡೆಯುತ್ತಿದ್ದ ದಲಿತರ ಮೇಲಿನ ದೌರ್ಜನ್ಯ ಇಂದು ಇಲ್ಲಿಗೂ ಕಾಲಿಟ್ಟಿದೆ ಎಂದು ಆರೋಪಿಸಿದರು. ಮಂತ್ರವಾದಿ ಹೇಳಿದ ಮಾತು ಕೇಳಿ ಮಹಿಳೆ ಮುಮ್ತಾಜ್‌ ದೂರು ನೀಡಿದ್ದಾರೆ. ಅವರ ಮೇಲೂ ಪ್ರಕರಣ ದಾಖಲಿಸಬೇಕು ಎಂದರು.

Advertisement

ಹೋರಾಟ ನಿಲ್ಲದು

ದೌರ್ಜನ್ಯಕ್ಕೆ ಒಳಗಾಗಿರುವ ಬಾಲಕಿಯ ಬಡ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಎಸ್‌ಐ ಹಾಗೂ ಮೂವರು ಸಿಬಂದಿಯನ್ನು ಕೆಲಸದಿಂದ ವಜಾ ಮಾಡುವ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ. ವಜಾ ಆಗದಿದ್ದಲ್ಲಿ ನಮ್ಮ ಧ್ವನಿಯನ್ನು ವಿಧಾನಸೌಧದ ತನಕ ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಭೇಟಿ

ಪ್ರತಿಭಟನ ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ್‌ ಭೇಟಿ ನೀಡಿದರು. ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಸೂಕ್ತ ನ್ಯಾಯ ಸಿಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್‌, ಅದನ್ನು ದ.ಕ. ಜಿಲ್ಲಾಧಿಕಾರಿ, ಎಸ್ಪಿಗೆ ನೀಡುವುದಾಗಿ ತಿಳಿಸಿದರು.

ದಲಿತ ಸಂಘಟನೆಗಳ ಮುಖಂಡರಾದ ರಾಮಣ್ಣ ಪಿಲಿಂಜ, ಮೀನಾಕ್ಷಿ ವಿಟ್ಲ, ಕೇಶವ ಕುಬ್ಲಾಜೆ, ಸೇಸಪ್ಪ ನೆಕ್ಕಿಲು, ಕೃಷ್ಣ ಸೂಟರ್‌ಪೇಟೆ, ಗೀತಾ ಚೆನ್ನಪ್ಪ, ಗಣೇಶ್‌ ಕಾರೆಕ್ಕಾಡು, ದೇವಪ್ಪ ಕಾರೆಕ್ಕಾಡು, ಸಂಜೀವ ಕೋಟ್ಯಾನ್‌, ಚಂದ್ರಶೇಖರ್‌ ಪಲ್ಲತ್ತಡ್ಕ, ಸತೀಶ್‌ ಸುಳ್ಯ, ಆನಂದ ಕೆ.ಪಿ., ನಿಶಾಂತ್‌ ಮುಂಡೋಡಿ, ದಮ್ಮಾನಂದ ಬೆಳ್ತಂಗಡಿ ಪಾಲ್ಗೊಂಡರು.

ರಸ್ತೆ ತಡೆ

ಪೊಲೀಸ್‌ ಸಿಬಂದಿಯನ್ನು ಅಮಾನತು ಗೊಳಿಸಿದ ಕುರಿತ ವರದಿ ನೀಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ಬಳಿಕ 5 ನಿಮಿಷ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿ ತೆರಳಿದರು. ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಗ್ರಾಮಾಂತರ ಸಿಪಿಐ ನಾಗೇಶ್‌ ಕದ್ರಿ, ಬೆಳ್ಳಾರೆ ಠಾಣಾಧಿಕಾರಿ ಈರಯ್ಯ, ನಗರ ಮಹಿಳಾ ಎಸ್‌ಐ ಸೇಸಮ್ಮ ನೇತೃತ್ವದಲ್ಲಿ ಬಂದೋಬಸ್ತ್ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next