ಹುಣಸೂರು: ಉಪ ವಿಭಾಗ ವ್ಯಾಪ್ತಿಯ ದಲಿತರು, ಆದಿವಾಸಿಗಳು ಸೇರಿದಂತೆ ಎಲ್ಲವರ್ಗಗಳ ರೈತರ ಭೂ ಒಡೆತನದ ಹಕ್ಕು ಪತ್ರವನ್ನು ವಿತರಿಸಲು ಆಗ್ರಹಿಸಿ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ವತಿಯಿಂದ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ ವೇದಿಕೆ ಮುಖಂಡರು ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ಭೂಮಿ ನಮ್ಮದು, ನಮ್ಮ ಕಾಡು ನಮ್ಮದು, ಭೂ ಒಡೆತನ ನೀಡಿ-ಇಲ್ಲವೇ ಕಾಡಿಗೆ ಮರಳಲು ಬಿಡಿ ಎಂಬ ಘೋಷಣೆ ಮೊಳಗಿಸಿ ಗಮನ ಸೆಳೆದರು.
ಈ ವೇಳೆ ಮಾತನಾಡಿದ ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ, ಹುಣಸೂರು ಉಪ ವಿಭಾಗ ವ್ಯಾಪ್ತಿಯ ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಕಳೆದ ೫-೬ ದಶಕಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಆದಿವಾಸಿಗಳು, ದಲಿತರು ಮತ್ತು ಎಲ್ಲ ವರ್ಗದ ಶೋಷಿತರು ಇಂದಿಗೂ ತಮ್ಮ ಭೂಮಿ ಒಡತನದ ಹಕ್ಕನ್ನು ಪಡೆಯುವಲ್ಲಿ ಸಾಕಷ್ಟು ಹೋರಾಟಗಳು ನಡೆಸಿದ್ದರೂ ಪಡೆಯಲು ಸಾದ್ಯವಾಗಿಲ್ಲ.
ಈ ನಡುವೆ ಸರಕಾರ ವಿವಿಧ ಕಾನೂನುಗಳ ಮೂಲಕ ಕೃಷಿ ನಡೆಸಿಕೊಂಡು ಜೀವನ ನಡೆಸುತ್ತಿರುವ ಆದಿವಾಸಿಗಳು ಜೀವನೋಪಾಯ ಕೈಗೊಂಡಿರುವ ಶೋಷಿತ ಸಮುದಾಯಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವುದು ಖಂಡನೀಯ, ಆದಿವಾಸಿಗಳನ್ನು ಕಾಡಿನಿಂದ ನಾಡಿಗೆ ಕರೆತಂದು ಅತಂತ್ರರನ್ನಾಗಿಸಿದ ಸರಕಾರ ಅವರ ಭೂ ಒಡೆತನದ ಹಕ್ಕನ್ನು ನೀಡದೆ, ಕಾಡಿಗೂ ಮರಳಲು ಬಿಡದೆ ಸತಾಯಿಸುತ್ತಿರುವುದು ಸರಿಯಲ್ಲ. ತಕ್ಷಣವೇ ಸರಕಾರ ಎಲ್ಲಾ ಸಮುದಾಯಗಳ ಭೂ ಮಾಲಿಕತ್ವ ಗುರುತಿಸಿ ಹಕ್ಕುಪತ್ರ ವಿತರಿಸಲು ಮುಂದಾಗುವಂತೆ ಒತ್ತಾಯಿಸಿದರು.
ರೈತ ಸಂಘಧ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ ಕಾಡಂಚಿನಲ್ಲಿ ಮೀಸಲು ಅರಣ್ಯ ಎಂಬ ಕಾರಣ ನೀಡಿ ದಶಕಗಳಿಂದ ಉಳುಮೆ ಮಾಡುತ್ತಿರುವ ಕಾಡಂಚಿನ ಗ್ರಾಮಗಳ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಈ ಸಮಸ್ಯೆಗೆ ಉಪ ವಿಭಾಗಾಧಿಕಾರಿಗಳು ಸೂಕ್ತ ವರದಿ ನೀಡಿ ಅರಣ್ಯದಂಚಿನ ಗ್ರಾಮ ಮತ್ತು ಸಾರ್ವಜನಿಕರಿಗೆ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು. ಆದಿವಾಸಿಗಳಿಗೆ ನೀಡಿರುವ ಜಮೀನು ದರಸ್ತುಗೊಳಿಸಿ, ಆ ವರ್ಗದ ಮಂದಿ ಬದುಕು ಕಟ್ಟಿಕೊಳ್ಳಲು ತಾಲೂಕು ಆಡಳಿತ ಕೈಜೋಡಿಸಬೇಕು, ಅರಣ್ಯ ದಿಂದ ಹೊರ ಹಾಕಿದ ಆದಿವಾಸಿಗಳಿಗೆ ಆಶ್ರಯ ನೀಡಬೇಕಾದ ಸರಕಾರ ಬೀದಿಯಲ್ಲಿ ಬಿಟ್ಟಿರುವುದು ನೋವಿನ ಸಂಗತಿ ಎಂದು ಕಿಡಿಕಾರಿದರು.
ಕಂದಾಯ ಇಲಾಖೆ ಇತ್ತೀಚೆಗೆ ಮನೆ ಬಾಗಿಲಿಗೆ ಸೇವೆ ಎಂಬ ಕಾರ್ಯಕ್ರಮದಡಿ ಭೂ ಮಾಲಿಕರಿಗೆ ನೀಡುತ್ತಿರುವ ದಾಖಲೆಯಲ್ಲಿ ಕೆಲವು ದಾಖಲೆಗಳನ್ನು ನೀಡುತ್ತಿಲ್ಲ. ಸರಳವಾಗಿ ಸಿಗುವ ದಾಖಲೆಗಳನ್ನು ಮಾತ್ರ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಗಿರಿಜನ ಮುಖಂಡರಾದ ಜೋಯಪ್ಪ, ಪಿ.ಕೆ.ರಾಮು, ವಿಶ್ರಾಂತ ಪ್ರೊ.ಗೋವಿಂದಯ್ಯ, ಬಂಗವಾದಿ ನಾರಾಯಣಪ್ಪ, ಹೊಸೂರು ಕುಮಾರ್, ಎಚ್.ಡಿ.ರಮೇಶ್, ಟಿ.ಈರಯ್ಯ, ನಾಗೇಂದ್ರ, ಚಿಣ್ಣಪ್ಪ, ವಿಜಯಕುಮಾರ್‌ಸೇರಿದಂತೆ ಮುಖಂಡರು ಭಾಗವಹಿಸಿದ್ದರು.