ಚೆರ್ಕಳ ಕೆ.ಕೆ.ಪುರಂ, ಬದಿಯಡ್ಕ, ಎದುರ್ತೋಡು, ಮಾನ್ಯ, ಧರ್ಮತ್ತಡ್ಕ, ಅಗಲ್ಪಾಡಿ, ಬೇಡಗ, ಕಾಂಞರತ್ತಿಂಗಾಲ್, ಪೆರಿಯ, ಬಳಾಲ್, ಕಲಿಂಚರ, ಪಾಣತ್ತೂರು, ರಾಜಪುರಂ ಕಲೊÂàಟ್ ಮೊದಲಾದಡೆ ಹರತಾಳ ಬೆಂಬಲಿಗರು ರಸ್ತೆ ಮತ್ತು ಬಸ್‌ಗಳನ್ನು ತಡೆದರು. ಅವರನ್ನು ಆ ಬಳಿಕ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು.
ಕಾಸರಗೋಡು: ದಲಿತ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಸಡಿಲಿಕೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಪ್ರತಿಭಟಿಸಿ ಕೆಲವು ದಿನಗಳ ಹಿಂದೆ ಭಾರತ್ ಬಂದ್‌ಗೆ ಕರೆಕೊಟ್ಟ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಗುಂಡೇಟಿಗೆ ಸಾವಿಗೀಡಾದ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು, ಸಾಮೂಹಿಕ ಹತ್ಯೆಯಾದ ಕುಟುಂಬಕ್ಕೆ ನಷ್ಟ ಪರಿಹಾರ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ದಲಿತ ಸಂಘಟನೆಗಳು ಕರೆ ನೀಡಿರುವ 12 ಗಂಟೆಗಳ ಹರತಾಳ ಭಾಗಿಕ ಪರಿಣಾಮ ಬೀರಿತು.
ಹರತಾಳಕ್ಕೆ ಕರೆ ನೀಡಿದರೂ ಎಂದಿನಂತೆ ರಾಜ್ಯ ಸಾರಿಗೆ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳು ಸೇವೆ ನಡೆಸಿದವು. ಅಂಗಡಿ ಮುಂಗಟ್ಟುಗಳು ತೆರೆದು ಕಾರ್ಯಾಚರಿಸಿದವು. ಸರಕಾರಿ ಕಚೇರಿಗಳ ನಿರ್ವಹಣೆಗೆ ಯಾವುದೇ ಅಡ್ಡಿಯಾಗಿಲ್ಲ. ಆದರೆ ಮಲೆ ನಾಡು ಪ್ರದೇಶದಲ್ಲಿ ಹರತಾಳ ಹೆಚ್ಚು ಪರಿಣಾಮ ಬೀರಿತು. ವಾಹನಗಳನ್ನು ಅಲ್ಲಲ್ಲಿ ತಡೆದ ಘಟನೆ ನಡೆಯಿತು. ಮಹಿಳೆಯರೂ, ಮಕ್ಕಳು ಸಹಿತ ರಸ್ತೆಯಲ್ಲಿ ಕುಳಿತು ವಾಹನಗಳನ್ನು ತಡೆದರು. ಈ ಪ್ರದೇಶಗಳಲ್ಲಿ ಅಂಗಡಿಗಳು ತೆರೆಯಲಿಲ್ಲ. ಮಲೆನಾಡು ಪ್ರದೇಶದ ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಬಹಳಷ್ಟು ಕಡಿಮೆಯಿತು. ರಸ್ತೆ ತಡೆ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತಡೆದ ವಾಹನಗಳನ್ನು ಮುಂದಕ್ಕೆ ಸಾಗಲು ಅನುವು ಮಾಡಿಕೊಟ್ಟರು. ಹರತಾಳದ ಪರಿಣಾಮವಾಗಿ ಪಾಣತ್ತೂರು- ಕಾಂಞಂಗಾಡ್ ರೂಟ್‌ನಲ್ಲಿ ಸಾರಿಗೆ ತಡೆದ ಹಿನ್ನೆಲೆಯಲ್ಲಿ ಜನಸಾಮಾನ್ಯರು ತೊಂದರೆಗೀಡಾದರು.
ಭೀಮನಡಿ-ನೀಲೇಶ್ವರ ರೂಟ್‌ನಲ್ಲೂ ಬಸ್ ಸಾರಿಗೆ ತಡೆಹಿಡಿಯಲಾಯಿತು. ವಾಹನಗಳನ್ನು ತಡೆಯುವ ವದಂತಿಯ ಹಿನ್ನೆಲೆಯಲ್ಲಿ ಬಹುತೇಕ ಜನರು ಮನೆಯಿಂದ ಹೊರಗೆ ಬಂದಿಲ್ಲ. ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಪರೀಕ್ಷೆಯ ಮೌಲ್ಯ ಮಾಪನಕ್ಕೆ ಅಡ್ಡಿಯಾಗಿಲ್ಲ.