ಬೆಂಗಳೂರು: ಕೇಂದ್ರ ಸರ್ಕಾರದಲ್ಲಿ ದಲಿತರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಇತ್ತೀಚೆಗೆ ರಚನೆಯಾದ ಕೇಂದ್ರ ಸಚಿವ ಸಂಪುಟದ ಬಗ್ಗೆ ಟ್ಟಿಟ್ ಮೂಲಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.
ಅವರಿಗೆ ಅಭಿನಂದನೆಗಳು. ಹೀಗಿದ್ದರೂ, ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಬೇರೇನಿದೆ ಎಂದು ಪ್ರಶ್ನಿಸಿದ್ದರು.
ಅವರ ಟ್ವೀಟ್‌ಗೆ ಕರ್ನಾಟಕ ಬಿಜೆಪಿ ತಿರುಗೇಟು ನೀಡಿದ್ದು, ಟ್ವೀಟ್‌ರಾಮಯ್ಯ ದಲಿತರ ಬಗ್ಗೆ ಟ್ವಿಟ್ಟರ್‌ನಲ್ಲಿ ಅಭಿಮಾನ ತೋರುವ ಬದಲು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದೆ.
ಬಿಜೆಪಿ ಟ್ವೀಟ್‌ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಖರ್ಗೆ ಮುಖ್ಯಮಂತ್ರಿಯಾಗುವ ಬಗ್ಗೆ ನನ್ನದೇನೂ ತಕರಾರಿಲ್ಲ. 2013ರಲ್ಲಿ ಶಾಸಕಾಂಗ ಸಭೆಯಲ್ಲಿ ಎಲ್ಲರೂ ಸೇರಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಖರ್ಗೆ, ಪರಮೇಶ್ವರ್ ಯಾರೇ ಮುಖ್ಯಮಂತ್ರಿಯಾದರೂ ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.