ಜಳಗಾಂವ್ : ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ವಕಾಡಿ ಗ್ರಾಮದಲ್ಲಿ ಮೇಲ್ಜಾತಿಯ ಸಿರಿವಂತ ಕೃಷಿ ಭೂಮಿ ಮಾಲಕರೋರ್ವರಿಗೆ ಸೇರಿದ ತೆರೆದ ಬಾವಿಯೊಂದರಲ್ಲಿ ಈಜಾಡಿದ ಮೂವರು ದಲಿತ ಬಾಲಕರನ್ನು ನಗ್ನಗೊಳಿಸಿ ಯದ್ವಾತದ್ವಾ ಹೊಡೆದು ಹಿಂಸಿಸಲಾದ ಘಟನೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
ದಲಿತರ ಮೇಲೆ ದೇಶಾದ್ಯಂತ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಆರ್‌ಎಸ್‌ಎಸ್ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರಕಾರವೇ ಕಾರಣ ಎಂದವರು ದೂರಿದ್ದಾರೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ನಾವು ಧ್ವನಿ ಎತ್ತದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ರಾಹುಲ್ ಗುಡುಗಿರದರು.
ರಾಹುಲ್ ಗಾಂಧಿ ತಮ್ಮ ಟ್ಟಿಟರ್ ಖಾತೆಗೆ ದಲಿತ ಬಾಲಕರ ಮೇಲೆ ಮೇಲ್ಜಾತಿಯವರಿಂದ ನಡೆದ ಹಿಂಸೆ, ದೌರ್ಜನ್ಯದ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್‌ನ ಉನ್ನತ ಮಟ್ಟದ ತಂಡವೊಂದು ಜಳಗಾಂವ್ ಜಿಲ್ಲೆಯಲ್ಲಿ ದೌರ್ಜನ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದೆ.
ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠವಳೆ ಅವರು ಈ ಘಟನೆಯನ್ನು ಖಂಡಿಸಿ ತಾನು ಆ ಗ್ರಾಮಕ್ಕೆ ಹೋಗಿ ಸಂತ್ರಸ್ತರು ಮತ್ತು ಅವರ ಕುಟುಂಬದವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
ಈ ನಡುವೆ ಪೊಲೀಸರು ದಲಿತ ಬಾಲಕರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಆಳುವ ಬಿಜೆಪಿ -ಶಿವಸೇನೆಗೆ ಈ ಘಟನೆಯಿಂದ ಮುಜುಗರ ಉಂಟಾಗಿದೆ.