ಬೀಜಿಂಗ್/ಹೊಸದಿಲ್ಲಿ: ಟಿಬೆಟಿಯನ್ ಧರ್ಮಗುರು ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಬುಧವಾರದಿಂದ 9 ದಿನಗಳ ಭೇಟಿ ಆರಂಭಿಸಿರುವುದು ಚೀನದ ಕೋಪಕ್ಕೆ ಕಾರಣವಾಗಿದೆ. ಈ ಭೇಟಿಯಿಂದ ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧಕ್ಕೆ ಭಾರೀ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಗುಟುರು ಹಾಕಿದೆ. ಆದರೆ ಚೀನದ ಕೋಪಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ ಸರಕಾರ ಲಾಮಾರ ಭೇಟಿ ರಾಜಕೀಯ ಅಲ್ಲ. ಕೇವಲ ಧಾರ್ಮಿಕ ಎಂದು ತಿರುಗೇಟು ನೀಡಿದೆ. ಈ ಮೂಲಕ ಏಷ್ಯಾದ ಎರಡು ದಿಗ್ಗಜಗಳ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದೆ. ಇದೇ ವೇಳೆ ಭಾರತ ತಮ್ಮನ್ನು ಚೀನ ವಿರುದ್ಧ ಎತ್ತಿಕಟ್ಟಿಲ್ಲ ಎಂದು ದಲೈಲಾಮಾ ಹೇಳಿದ್ದಾರೆ.
ರಾಯಭಾರಿಗೆ ಪ್ರತಿಭಟನೆ: ಭಾರತದ ಅರುಣಾಚಲ ಪ್ರದೇಶದ ಬೊಂಬ್ಡಿಲಾದಲ್ಲಿ ದಲೈಲಾಮಾ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಂತೆಯೇ ಹೊಸದಿಲ್ಲಿ ಮತ್ತು ಬೀಜಿಂಗ್‌ನಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಹಲವು ಹೇಳಿಕೆ ಸಮರಗಳು ನಡೆದಿವೆ. ಟಿಬೆಟಿಯನ್ ಧರ್ಮಗುರು ಭೇಟಿಯಿಂದ ಕೋಪೋದ್ರಿಕ್ತಗೊಂಡಿರುವ ಚೀನ ಸರಕಾರ ಭಾರತದ ಜತೆಗಿನ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ದಲೈಲಾಮಾ ಬಗ್ಗೆ ಚೀನ ಹೊಂದಿರುವ ಕಳವಳವನ್ನು ಭಾರತ ಗಮನಿಸಿಯೇ ಇಲ್ಲ.
ಟಿಬೆಟಿಯನ್ ಧರ್ಮಗುರು ಅವರು ಭಾರತ ಮತ್ತು ಚೀನ ಗಡಿ ಪ್ರದೇಶದಲ್ಲಿನ ವಿವಾದಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದರಿಂದಾಗಿ ಟಿಬೆಟ್‌ಗೆ ಸಂಬಂಧಿಸಿದಂತೆ ಭಾರತ ಹೊಂದಿರುವ ನಿಲುವುಗಳಿಗೆ ತಿರುಗು ಬಾಣವಾಗಲಿದೆ ಎಂದು ಚೀನದ ವಿದೇಶಾಂಗ ಇಲಾಖೆ ವಕ್ತಾರೆ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದಾಗಿ ನವದಿಲ್ಲಿಗೆ ಏನೂ ಲಾಭವಾಗಲಾರದು ಎಂದಿದ್ದಾರೆ ಅವರು. ದಲೈಲಾಮಾ ಭೇಟಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿ ದರು. ದೇಶದ ಗಡಿ ರಕ್ಷಣೆಗಾಗಿ ಯಾವುದೇ ಕ್ರಮ ಕೈಗೊಳ್ಳಲೂ ಸಿದ್ಧವೆಂದು ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದ್ದಾರೆ. ಇದರ ಜತೆಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಹೇಳಿಕೆಗೂ ಅವರು ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚೀನ ವಿದೇಶಾಂಗ ಇಲಾಖೆ ವಕ್ತಾರೆ ಮಾತನಾಡಿದ ಬಳಿಕ ಬೀಜಿಂಗ್‌ನಲ್ಲಿ ಭಾರತದ ರಾಯಭಾರಿ ಯಾಗಿರುವ ವಿಜಯ್ ಗೋಖಲೆ ಅವರನ್ನು ಕರೆಯಿಸಿಕೊಂಡು ಪ್ರಬಲ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮ ಮಾತ್ರ: ಚೀನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ ಬಾಗ್ಲೆ ದಲೈಲಾಮಾ ಅವರದ್ದು ಧಾರ್ಮಿಕ ಭೇಟಿಯಾಗಿದೆ. ಈ ಹಿಂದೆ ಕೂಡ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರು ಭಾರತದ ಗಡಿ ಪ್ರದೇಶದಲ್ಲಿ ಮಾತ್ರ ಸಂಚರಿಸುತ್ತಿದ್ದಾರೆ. ಈ ಭೇಟಿ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ. ಅದಕ್ಕೆ ರಾಜಕೀಯ ಬಣ್ಣ ಬೇಕಾಗಿಲ್ಲ ಎಂದಿದ್ದಾರೆ.
ಚೀನದ ವಿರೋಧವೇಕೆ?
ಅರುಣಾಚಲ ಪ್ರದೇಶದ ಕೆಲ ಭಾಗ ದಕ್ಷಿಣ ಟಿಬೆಟ್‌ನದ್ದು ಎನ್ನುವುದು ಚೀನದ ವಾದ. ಆದರೆ ಅದನ್ನು ಕೇಂದ್ರ ಸರಕಾರ ಒಪ್ಪುತ್ತಿಲ್ಲ. ದಲೈಲಾಮಾ ತವಾಂಗ್ ಪ್ರದೇಶಕ್ಕೂ ಭೇಟಿ ನೀಡಿದ್ದಾರೆ. ಅದು 6ನೇ ದಲೈಲಾಮಾರ ಹುಟ್ಟಿದ ಸ್ಥಳಕೂಡ ಅದುವೇ ಆಗಿದೆ. ದಲೈಲಾಮಾರನ್ನು ಚೀನ ಪ್ರತ್ಯೇಕತಾವಾದಿ ನಾಯಕ ಎಂದು ದೂರುತ್ತಿದೆ. ಏ.8-10ರ ವರೆಗೆ ತವಾಂಗ್‌ನಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ದಲೈಲಾಮಾ.
ಅಮೆರಿಕದಲ್ಲಿ ಚೀನ ಅಧ್ಯಕ್ಷ
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಫ್ಲೋರಿಡಾದಲ್ಲಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗಲಿದ್ದಾರೆ. ದಕ್ಷಿಣ ಏಷ್ಯಾ ರಾಜಕೀಯ ಬೆಳವಣಿಗೆ ವಿಶೇಷವಾಗಿ ದಲೈಲಾಮಾ ವಿವಾದ ಕೂಡ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಭಾರತ ಬಳಕೆ ಮಾಡಿಲ್ಲ
ಅರುಣಾಚಲ ಪ್ರದೇಶದ ಬೊಂಬ್ಡಿಲಾ ದಲ್ಲಿ ಮಾತನಾಡಿದ ಟಿಬೆಟಿಯನ್ನರ ಧರ್ಮಗುರು, ಚೀನಕ್ಕೆ ವಿರುದ್ಧವಾಗಿ ಭಾರತ ತಮ್ಮನ್ನು ಬಳಕೆ ಮಾಡಿಲ್ಲ ಎಂದಿದ್ದಾರೆ. ಟಿಬೆಟ್‌ಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಮಾನ್ಯತೆ ನೀಡಬೇ ಕೆಂದಿದ್ದಾರೆ. “ನಾನು ಪ್ರಾಚೀನ ಭಾರತದ ಚಿಂತನೆಗಳ ಪ್ರಚಾರಕ. ಅಹಿಂಸೆ, ಶಾಂತಿ, ಸೌಹಾರ್ದಗಳ ಬಗ್ಗೆ ಎಲ್ಲ ಕಡೆ ಮಾತನಾಡುತ್ತೇನೆ. ಹೆಚ್ಚಿನ ಚೀನೀಯರು ಭಾರತವನ್ನು ಪ್ರೀತಿಸುತ್ತಾರೆ. ಸಂಕುಚಿತ ಮನೋಭಾವನೆ ಇರುವವರು ಸಹಿಸುವುದಿಲ್ಲ ಎಂದಿದ್ದಾರೆ.