Advertisement

ವೈಶಾಖೋತ್ಸವದ ಸಂಭ್ರಮದಲ್ಲಿ ದಕ್ಷಿಣಕಾಶಿ ಕೊಟ್ಟಿಯೂರು

06:40 AM Jun 15, 2018 | |

ಬದಿಯಡ್ಕ: ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಉತ್ತರ ಕೇರಳದ ಶ್ರೀ ಕೊಟ್ಟಿಯೂರು ಮಹಾದೇವ ಕ್ಷೇತ್ರವು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಕೇರಳದ ಹೆಸರಾಂತ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. 

Advertisement

ಭಕ್ತ ಜನರಿಗೆ ಶಾಶ್ವತ ಸಮಾಧಾನ ಹಾಗೂ ಸುಖಾನುಭೂತಿಯನ್ನು ಕರುಣಿಸುವ ಯಾಗಭೂಮಿ ಈ ಕ್ಷೇತ್ರದಲ್ಲಿದೆ. ಸ್ವಯಂಭೂ ಚೈತನ್ಯರೂಪಿ ಶಿವನು ನೆಲೆಯಾಗಿರುವ, ಶ್ರೀ ಪಾರ್ವತೀ ಮಾತೆ ಕರುಣೆಯ ಹೊಳೆ ಹರಿಸುವ ಕೊಟ್ಟಿಯೂರು ಭಕ್ತರ ವಿಶ್ವಾಸವನ್ನು ಸದಾ ಸಂರಕ್ಷಿಸುತ್ತಾ ಬಂದಿದೆ. ವರ್ಷಂಪ್ರತಿ ನಡೆಯುವ ವೈಶಾಖ ಮಹೋತ್ಸವಕ್ಕೆ ಸಾಗರೋಪಾದಿಯಾಗಿ ಭಕ್ತರು ಆಗಮಿಸುವುದು ಕಂಡುಬರುತ್ತದೆ. 

ಕ್ಷೇತ್ರ ಪರಿಚಯ
ದಕ್ಷಯಾಗ ಚರಿತ್ರೆಯನ್ನು ಆಧಾರ ವಾಗಿಸಿರುವ ಐತಿಹ್ಯ ಈ ಕ್ಷೇತ್ರಕ್ಕಿದೆ. ಪ್ರಜಾಪತಿ ದಕ್ಷನು ಮಾಡಿದ ಅವಮಾನ ವನ್ನು ಸಹಿಸದೆ ದಾಕ್ಷಾಯಿಣಿಯು (ಪಾರ್ವತಿ ದೇವಿಯು) ಆಹುತಿಯಾದ ಯಜ್ಞ ಕುಂಡವು ಶ್ರೀ ಕ್ಷೇತ್ರದ ಮಹತ್ವವನ್ನು ಸಾರುತ್ತಿದೆ. 

ಪ್ರಕೃತಿರಮಣೀಯವಾದ ಭೂ ಪ್ರದೇಶದಲ್ಲಿರುವ ಕೊಟ್ಟಿಯೂರು ಕ್ಷೇತ್ರದ ಪೌರಾಣಿಕ ಹಿನ್ನೆಲೆಯಂತೆ ಈ ಕ್ಷೇತ್ರವು ದಕ್ಷನು ಯಾಗ ಮಾಡಿದ ಪುಣ್ಯಭೂಮಿಯೆಂದು ಜನಜನಿತವಾಗಿದೆ. ವೀರಭದ್ರನು ದಕ್ಷನ ಯಾಗವನ್ನು ಕೆಡಿಸಿ ಸರ್ವವನ್ನೂ ನೆಲಸಮ ಮಾಡಲು ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ನಶಿಸಿದ ಯಾಗಶಾಲೆಯನ್ನು ಪುನರ್‌ ನಿರ್ಮಿಸಿ ಜೀವದಾನ ಮಾಡಿದರು. ಮಾತ್ರವಲ್ಲದ ಶಿರಚ್ಛೇದನಗೊಂಡ ದಕ್ಷನಿಗೆ ಟಗರಿನ ತಲೆಯನ್ನು ಜೋಡಿಸಿ ಮರುಜೀವ ನೀಡಿದರು. ಆ ಬಳಿಕ ಸುಸೂತ್ರವಾಗಿ ಯಾಗ ನಡೆಯಿತು. ಮೊದಲಿಗೆ ಕೂಡಿಯಾರ್‌(ತ್ರಿಮೂರ್ತಿಗಳು ಒಟ್ಟು ಸೇರಿದ ಸ್ಥಳ) ಎಂದು ಕರೆಯಲ್ಪಡುತ್ತಿದ್ದ ಸ್ಥಳನಾಮವು ಕ್ರಮೇಣ ಕೊಟ್ಟಿಯೂರ್‌ ಎಂದು ಬದಲಾಯಿತು. 

ಮಲೆಪ್ರದೇಶಲ್ಲಿ  ಕುರಿಚ್ಚೇನ್‌ ನಾಯಾಡಿ ಆದಿವಾಸಿ ಪಂಗಡದವನೊಬ್ಬನು ಕತ್ತಿಯನ್ನು ಹರಿತಗೊಳಿಸುತ್ತಿರುವಾಗ ತನ್ನ  ಕತ್ತಿಯನ್ನು ಹರಿತಗೊಳಿಸಲು ಕಲ್ಲೊಂದಕ್ಕೆ ಒರೆಸಿದಾಗ ರಕ್ತ ಹರಿಯ ತೊಡಗಿತು. ಈ ವಿಷಯವನ್ನು ಊರ ತಂತ್ರಿಶ್ರೇಷ್ಠರಿಗೆ ತಿಳಿಸಲಾಯಿತು. ಆ ಸ್ಥಳಕ್ಕಾಗಮಿಸಿದ ತಂತ್ರಿಗಳು ರಕ್ತ ಪ್ರವಾಹ ನಿಲ್ಲಿಸಲು ನೀರು ಹಾಗೂ ಹಾಲಿನಿಂದ ಎಷ್ಟೇ ಅಭಿಷೇಕ ಮಾಡಿದರೂ ಫ‌ಲ ಸಿಕ್ಕಲಿಲ್ಲ. ಕೊನೆಗೆ ಸೀಯಾಳದಿಂದ ಸತತವಾಗಿ ಅಭಿಷೇಕ ಮಾಡಿದಾಗ ಶಿವಲಿಂಗದಿಂದ ರಕ್ತ ಒಸರುವುದು ಸಂಪೂರ್ಣವಾಗಿ ನಿಂತು ಹೋಯಿತು. ಅಭಿಷೇಕ ಮಾಡಿದ ನೀರು, ಹಾಲು, ತುಪ್ಪ, ಎಳನೀರಿನಿಂದಾಗಿ ಲಿಂಗದ ಸುತ್ತಲೂ ಒಂದು ಸರೋವರ ನಿರ್ಮಾಣವಾಯಿತು. ವೈಶಾಖೋತ್ಸವದಲ್ಲಿ ಈಗಲೂ ಈ ಎಲ್ಲ ದ್ರವ್ಯಗಳ ಅಭಿಷೇಕ ಇಲ್ಲಿ ನಡೆಯುತ್ತದೆ. 

Advertisement

ತಾತ್ಕಾಲಿಕ ಯಾಗ ಶಾಲೆಗಳು
ಕ್ಷೇತ್ರ ಪರಿಸರದಲ್ಲಿ ಹುಲ್ಲು ಮತ್ತು ತೆಂಗು ಗರಿಯಿಂದ ನಿರ್ಮಿಸಿದ ಯಾಗಶಾಲೆಗಳನ್ನು ಕಾಣಬಹುದು. ಎರಡು ಮಾಡು ಇರುವ ಋಷಿಗಳ ಕುಟೀರದಂತಿರುವ ಈ ಯಾಗಶಾಲೆಗಳು ದಕ್ಷಯಜ್ಞದ ಕಾಲಘಟ್ಟದ ಸಂಕೇತ ಗಳಾಗಿವೆ. ಉತ್ಸವ ಕಾಲಕ್ಕೆ ಮಾತ್ರ ತಾತ್ಕಾಲಿಕವಾಗಿ ಈ ಕುಟೀರಗಳನ್ನು ನಿರ್ಮಿಸಲಾಗುತ್ತದೆ. 

ಶ್ರೀ ಕ್ಷೇತ್ರದಲ್ಲಿ ಹಿಂದಿನಿಂದಲೇ ಕೆಲವು ಪಂಗಡವರಿಗೆ ವಿಶೇಷ ಪ್ರಾತಿನಿಧ್ಯ  ನೀಡಲಾಗಿದೆ. ವೃಷಭ ಮಾಸದ ಸ್ವಾತಿ ನಕ್ಷತ್ರದಂದು ಎರುವಟ್ಟಿ ಕ್ಷೇತ್ರದಿಂದ ವೀರಭದ್ರನು ದಕ್ಷನ ತಲೆಯನ್ನು ಛೆೇದಿಸಿದ ಖಡ್ಗವೆಂಬ ಸಂಕಲ್ಪದಲ್ಲಿ ವಾಳ್‌ ಖಡ್ಗದ ಆಗಮನವಾಗುತ್ತದೆ. ಮುನ್ನೂರಾಠಾನ್‌ ಹಾಗೂ ಐನೂರಾಠಾನ್‌ ದೈವಕಲಾವಿದರು ವೀರಭದ್ರನ ವೇಷ ಧರಿಸಿ ಸಾಗುತ್ತಾರೆ. ಅಭಿಷೇಕದ ತುಪ್ಪವನ್ನು ತರುವ ಕುಟುಂಬಸ್ಥರು 27 ದಿನಗಳ ವ್ರತವನ್ನಾಚರಿಸಬೇಕು. ಸ್ಥಾನಿಕರು ದೀಪದ ಬತ್ತಿ ಬಟ್ಟೆ, ಕೊಶವನರು ಕಲಶವನ್ನು, ಕಮ್ಮಾರರು ಎಳನೀರು ಕೆತ್ತುವ ಹೊಸ ಕತ್ತಿಯನ್ನು ಘೋಷಯಾತ್ರೆಯಲ್ಲಿ ತರವುದು ರೂಢಿ. 

ಪ್ರಧಾನ ಸೇವೆಗಳು
ತುಪ್ಪಾಭಿಷೇಕ (ನೆಯ್ನಾಟ), ಸೀಯಾಳ ಅಭಿಷೇಕ (ಇಳನೀರಾಟ್ಟಂ), ಹಾಲಭಿಷೇಕ, ಪುಷ್ಪಾಂಜಲಿ ಮುಂತಾದ ಹಲವಾರು ಸೇವೆಗಳನ್ನು ಈ ಮಾಸದಲ್ಲಿ ದೇವರಿಗೆ ಸಮರ್ಪಿಸಲಾಗುತ್ತದೆ. ಅದರಲ್ಲೂ ಸೀಯಾಳಾಭಿಷೇಕ ವಿಶೇಷವಾದ ರೀತಿಯಲ್ಲಿ ನಡೆಯುತ್ತದೆ. ತೀಯ ಸಮೂಹದ ಪುರುಷರು ತಂದೊಪ್ಪಿಸುವ ಎಳನೀರನ್ನು ಕಮ್ಮಾರರ ಕತ್ತಿಯಲ್ಲಿ ಕೆತ್ತಿ ಬೆಳ್ಳಿಯ ಪಾತ್ರೆಯಲ್ಲಿ ತುಂಬಲಾಗುತ್ತದೆ. ತಂತ್ರಿಗಳು ಚಿನ್ನದ ಕೊಡದಲ್ಲಿ ಸ್ವಯಂಭೂಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಸೀಯಾಳವನ್ನು ಭಕ್ತ ಜನರೆಡೆಗೆ ಎಸೆಯಲಾಗುತ್ತದೆ. ಇಂತಹ ಸೀಯಾಳಗಳು ತಮ್ಮ ಮೈಮೇಲೆ ಬೀಳುವುದೇ ಭಾಗ್ಯ ಎಂಬುದು ಭಕ್ತರ ವಿಶ್ವಾಸ. 

ಮುಕ್ತಾಯ
ವೃಷಭ ಮಾಸದ ಮಘಾ ನಕ್ಷತ್ರದಂದು ದಾಕ್ಷಾಯಿಣಿಯು ಯೋಗಾಗ್ನಿಯಲ್ಲಿ ದೇಹ ತ್ಯಾಗ ಮಾಡಿದಳು ಎಂಬುದಕ್ಕೆ ಪೂರಕವಾಗಿ ಅಂದಿನಿಂದ ಉತ್ಸವದ ಅಂತ್ಯದ ವರೆಗೆ ಮಹಿಳೆಯರಿಗೆ ಈ ಕ್ಷೇತ್ರಕ್ಕೆ ಪ್ರವೇಶವಿಲ್ಲ. ಕೊನೆಯ ದಿನ ಸ್ವಯಂಭೂ ಲಿಂಗಕ್ಕೆ ಅಷ್ಟಬಂಧ ದ್ರವ್ಯಗಳನ್ನು ಮತ್ತು ಚಂದನವನ್ನು ಹಾಕಿ ಕಲಶವನ್ನು ಕವುಚಿಟ್ಟು ಮಾಡುವ ನಿಗೂಢ ಪೂಜೆಯನ್ನು ಭಕ್ತರು ನೋಡಬಾರದೆಂಬ ನಿಬಂಧನೆಯಿದೆ.  ಕೊನೆಯಲ್ಲಿ ಕುರಿಚ್ಚನ್‌ ಸಮುದಾಯದ ನೂರಾರು ಮಂದಿ ಈ ಯಾಗಶಾಲೆಯನ್ನು ಹಾಳುಗೆಡವುದರೊಂದಿಗೆ ಒಂದು ವರ್ಷದ ವೈಶಾಖ ಮಹೋತ್ಸವವು ಕೊನೆಯಾಗುತ್ತದೆ. ಮುಂದಿನ ವೈಶಾಖೋತ್ಸವದ ತನಕ ಈ ತಿರುವಾಂಜಿ ಪ್ರದೇಶಕ್ಕೆ ಯಾರೂ ಪ್ರವೇಶಿಸುವಂತಿಲ್ಲ.

ಕಣ್ಣೂರು ಜಿಲ್ಲೆಯಲ್ಲಿದೆ
ಶ್ರೀ ಮಹಾದೇವ ಕ್ಷೇತ್ರದಲ್ಲಿ ವೈಶಾಖ ಮಹೋತ್ಸವ ಅಥವಾ ವಸಂತೋತ್ಸವವು ಮೇ ತಿಂಗಳ 27ರಂದು ಪ್ರಾರಂಭವಾಗಿದ್ದು ಜೂನ್‌ 22ರಂದು ಕೊನೆಗೊಳ್ಳುವುದು. ವರ್ಷದಲ್ಲಿ ವೈಶಾಖ ಮಾಸದ ಒಂದು ತಿಂಗಳು ಮಾತ್ರ ತೆರೆದು ಭಕ್ತರಿಗೆ ಅಭಯ ನೀಡುವ ಈ ಸ್ವಯಂಭೂ ಸಾನಿಧ್ಯವು ಕೇರಳದ ಕಣ್ಣೂರಿನ ಬಾವಾಲಿ ನದಿಯ ದಡದಲ್ಲಿ ಪ್ರಕೃತಿಯ ಮಡಿಲಲ್ಲಿ ಶೋಭಿಸುತ್ತಿದೆ.  

ಜೂನ್‌ ತಿಂಗಳ 17ನೇ ತಾರೀಕಿನ ವರೆಗೆ ಮಾತ್ರವೇ ಮಹಿಳೆಯರಿಗೆ ಈ ಕ್ಷೇತ್ರಕ್ಕೆ ಪ್ರವೇಶ ಮಾಡಬಹುದಾಗಿದೆ. ಅನಂತರ ಉತ್ಸವದ ಕೊನೆಯ ದಿನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. 

ತುಪ್ಪಾಭಿಷೇಕ, ಹಾಲಿನ ಅಭಿಷೇಕ, ಹಾಗೂ ಸೀಯಾಳಾಭಿಷೇಕ ಇಲ್ಲಿನ ಪ್ರಧಾನ ಸೇವೆಗಳಾಗಿವೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶದಿಂದ ಸಾಗರೋಪಾದಿಯಲ್ಲಿ ಪರಮಶಿವನ ದರುಶನ ಪಡೆಯಲು ಭಕ್ತರು ಆಗಮಿಸುತ್ತಿದ್ದು ಅಗತ್ಯದ ಎಲ್ಲ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. 

– ಅಖೀಲೇಶ್‌ ನಗುಮುಗಂ 

Advertisement

Udayavani is now on Telegram. Click here to join our channel and stay updated with the latest news.

Next