ಬೆಂಗಳೂರು: ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಜೂನ್ 29ರಿಂದ ಜುಲೈ 1ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಅರಬ್ಬೀ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದ್ದು, ಈ ಪ್ರಭಾವದಿಂದ ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲ ಸ್ಥಳಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಜೂನ್ 29, 30 ಹಾಗೂ ಜುಲೈ 1ರಂದು ಗುಡುಗು ಸಹಿತ ವ್ಯಾಪಕ ಮಳೆ ನಿರೀಕ್ಷಿಸಲಾಗಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್ 30 ಮತ್ತು ಜುಲೈ 1ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ :ರಾಜ್ಯದ 14 ಸಾವಿರ ಅಂಗನವಾಡಿಗಳು ಕತ್ತಲಲ್ಲಿ, 13 ಸಾವಿರ ಅಂಗನವಾಡಿಗಳಲ್ಲಿ ಶೌಚಾಲಯವೇ ಇಲ್ಲ
ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿದ್ದು, ಶನಿವಾರ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಾತ್ರ ಮಳೆಯಾಗಿದೆ. ಉಡುಪಿಯ ಕೋಟ, ಉತ್ತರ ಕನ್ನಡದ ಗೋಕರ್ಣದಲ್ಲಿ ತಲಾ 5 ಸೆಂ.ಮಿ, ಕಾರವಾರ ಮತ್ತು ಆಗುಂಬೆ ತಲಾ 4 ಸೆಂ.ಮೀ, ಶಿರಸಿ ಹಾಗೂ ಹೊನ್ನಾವರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಉಳಿದಂತೆ, ಉತ್ತರ ಕನ್ನಡದ ಕದ್ರಾ, ಸಿದ್ದಾಪುರ, ಉಡುಪಿಯ ಕುಂದಾಪುರ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಲಾ 2 ಸೆಂ.ಮೀ, ಉತ್ತರ ಕನ್ನಡದ ಮಂಚಿಕೆರೆ, ಉಡುಪಿಯ ಕೊಲ್ಲೂರು, ಕಾರ್ಕಳ, ಸಿದ್ದಾಪುರ, ಮಂಗಳೂರು, ವಿಟ್ಲಾ, ಮಾಣಿ, ಧರ್ಮಸ್ಥಳ, ಶಿರಾಲಿ, ಬೆಳಗಾವಿಯ ಯಾದವಾಡ, ಯಾದಗಿರಿಯ ಕೆಂಭಾವಿ, ಕವಡಿಮಟ್ಟಿ, ಮಲನೂರ್, ಶೃಂಗೇರಿ ಹಾಗೂ ವಿಜಯಪುರದ ತಾಳಿಕೋಟೆಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.