Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದ ಬಂಟ್ವಾಳದ 50 ವರ್ಷದ ಮಹಿಳೆಗೆ ತದನಂತರದಲ್ಲಿ ಕೋವಿಡ್ ಸೋಂಕು ಹರಡಿ ಬಳಿಕ ಮೃತಪಟ್ಟಿದ್ದರು. ಆನಂತರ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ವೃದ್ಧೆಯರು, ಆಸ್ಪತ್ರೆಯ ಸಿಬಂದಿಗೆ ಮತ್ತು ಅವರ ಸಂಪರ್ಕದಿಂದ ಸೇರಿದಂತೆ ಒಟ್ಟು 17 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ.
ರವಿವಾರ ಒಟ್ಟು 190 ಮಂದಿಯ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ರವಿವಾರ 88 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 184 ವರದಿಗಳು ಬರಲು ಬಾಕಿ ಇವೆ. ಎನ್‌ಐಟಿಕೆಯಲ್ಲಿ ಒಟ್ಟು 32 ಮಂದಿ, ಇಎಸ್‌ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
Related Articles
ಕೋವಿಡ್ ದೃಢಪಟ್ಟು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋಳೂರಿನ 58 ವರ್ಷದ ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 15 ಕೋವಿಡ್ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಲಶೇಖರದ 80 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಉಳಿದ 13 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Advertisement
ಮೂಲ ಪತ್ತೆ ತನಿಖಾ ವರದಿ ರವಿವಾರ ಸಿಗಬೇಕಿತ್ತು. ಆದರೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ದ್ವಿತೀಯ ಹಂತದ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಬರಲು ಇನ್ನೂ ಎರಡು ದಿನ ಬೇಕಾಗಬಹುದು. ಆ ಬಳಿಕ ತನಿಖಾ ಸಮಿತಿ ಮತ್ತು ಅಧಿಕಾರಿಗಳು ಇನ್ನೊಂದು ಸುತ್ತಿನ ಸಭೆ ಸೇರಿ ಚರ್ಚಿಸಿ ಬಳಿಕ ಪರೀಕ್ಷಾ ವರದಿಯನ್ನೂ ಗಣನೆಗೆ ತೆಗೆದುಕೊಂಡು ಕೋವಿಡ್ ಹರಡುವಿಕೆ ಮೂಲದ ಬಗ್ಗೆ ವರದಿ ಸಲ್ಲಿಸಲಿದ್ದಾರೆ.– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು