Advertisement

ಸರಕಾರದಿಂದ ಪರಿಹಾರ ಹೆಚ್ಚಳ: ಪೂರ್ಣ ಹಾನಿಯಾದ ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ 5ಲ.ರೂ. ನೆರವು

02:54 PM Sep 29, 2022 | Team Udayavani |

ಮಂಗಳೂರು : ಸರಕಾರವು ನೀಡಿರುವ ಭರವಸೆಯಂತೆ ಈ ಬಾರಿಯ ಅತಿವೃಷ್ಟಿಯಿಂದ ಕಂಗೆಟ್ಟವರಿಗೆ ಹೆಚ್ಚಿನ ಪರಿಹಾರ (ಗರಿಷ್ಠ 5 ಲಕ್ಷ ರೂ.) ಒದಗಿಸಿದ ಆದೇಶ ಹೊರಡಿಸಿದ್ದು, ಪರಿಹಾರ ವಿತರಣೆಗೆ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮನೆ ಹಾನಿ ಆಗಿರುವಲ್ಲಿ ಜಿಲ್ಲಾಡಳಿತದಿಂದ ಜಿಪಿಎಸ್‌ ಸರ್ವೇ ನಡೆಸಿ ಸರಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ.
ಎನ್‌ಡಿಆರ್‌ಎಫ್‌ ಮಾರ್ಗ ಸೂಚಿಯನ್ವಯ ಪರಿಹಾರದ ಮೊತ್ತ ತೀರಾ ಕಡಿಮೆಯಿದ್ದ ಕಾರಣ ಮೊತ್ತವನ್ನು ಹೆಚ್ಚಿಸುವುದಾಗಿ ಸರಕಾರ ಹೇಳಿತ್ತು. ಜೂನ್‌ – ಜುಲೈಯಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಮನೆಹಾನಿಯನ್ನು ವೀಕ್ಷಿಸಲು ಆಗಮಿಸಿದ್ದ ಸಚಿವ ಆರ್‌. ಅಶೋಕ್‌ ಅವರು ಮನೆ ಕುಸಿತ, ಜೀವಹಾನಿ, ಇತ್ಯಾದಿಗಳಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಆದೇಶಿಸುವುದಾಗಿ ಭರವಸೆ ನೀಡಿದ್ದರು.

Advertisement

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆಹಾನಿ, ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿದ್ದರೆ ನೀಡುವ ಪರಿಹಾರವನ್ನು ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಿದೆ. ಜೂನ್‌ 1ರಿಂದ ಸೆಪ್ಟಂಬರ್‌ 30ರ ವರೆಗೆ ಅತಿವೃಷ್ಟಿ, ಪ್ರವಾಹದಿಂದ ಆಗಿರುವ ಹಾನಿಗೆ ಆದೇಶ ಅನ್ವಯವಾಗುತ್ತದೆ.

ನೆರೆ ಸಂತ್ರಸ್ತರ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳಿಗೆ 10 ಸಾವಿರ ರೂ. ಮೊತ್ತ ತುರ್ತು ಪರಿಹಾರವನ್ನು ಜಮೆ ಮಾಡುವುದು, ಸಂತ್ರಸ್ತರಿಗೆ ಪರಿಹಾರ ವಿತರಿಸಿರುವ ಕುಟುಂಬದವರು ವೆಚ್ಚದ ಲೆಕ್ಕಗಳನ್ನು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತದೆ ಹಾಗೂ ವೆಚ್ಚದ ಬಳಕೆ ಪ್ರಮಾಣಪತ್ರವನ್ನೂ ಕಡ್ಡಾಯವಾಗಿ ಸರಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ನೇರ ಜಮೆ
ಮನೆ ಕಳೆದುಕೊಂಡಂತಹ ಸಂತ್ರಸ್ತರಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಅಭಿವೃದ್ಧಿಪಡಿಸಲಾದ ತಂತ್ರಾಂಶದ ಮೂಲಕ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ರೀತಿ ಮನೆ ಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದವರಿಗೆ ಆರಂಭಿಕ ಮೊತ್ತವಾದ 95,100 ರೂ.ಗಳನ್ನು (ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ವಯ) ವಿತರಿಸಲಾಗಿದೆ ಹಾಗೂ ಉಳಿದ ಮೊತ್ತವನ್ನು ರಾಜೀವ್‌ ಗಾಂಧಿ ನಿಗಮದಿಂದ ಪಾವತಿಸಲಾಗುವುದು. ಮನೆ ಪುನರ್‌ನಿರ್ಮಾಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚುವರಿ ಮೊತ್ತವನ್ನು ಭರಿಸಲಾಗುವುದು.
ಜಿಲ್ಲೆಯಲ್ಲಿ ಈ ಮಳೆಗಾಲದಲ್ಲಿ 43 ಮನೆ ಪೂರ್ಣ ಹಾನಿ, 199 ಮನೆಗಳು ಗಂಭೀರ ಹಾನಿ ಹಾಗೂ 524 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಮನೆ ಹಾನಿಗೆ ಪರಿಹಾರ ಏರಿಕೆಗೆ ಸರಕಾರದಿಂದ ಆದೇಶ ಬಂದಿದ್ದು, ಪ್ರಾರಂಭಿಕ ಮೊತ್ತವನ್ನು ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ನೀಡಲಾಗಿದೆ. ಉಳಿದ ಮೊತ್ತವನ್ನು ಮನೆ ನಿರ್ಮಾಣದ ವೇಳೆ ಹಂತ ಹಂತವಾಗಿ ನೇರವಾಗಿ ಪಾವತಿಸಲಾಗುವುದು. ಪೂರಕ ಪ್ರಸ್ತಾವನೆ ಜಿಲ್ಲೆಯಿಂದ 15 ದಿನಗಳ ಮೊದಲು ಸರಕಾರಕ್ಕೆ ಹೋಗಿದೆ.
– ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ, ದ.ಕ.

Advertisement

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next