ಮಂಗಳೂರು: ಮಾರ್ಚ್ 22ರಿಂದ ಭಾರತ ಲಾಕ್ ಡೌನ್ ಸ್ಥಿತಿ ಘೋಷಣೆಯಾದ ಬಳಿಕದಿಂದ ಅವಿಭಜಿತ ಜಿಲ್ಲೆಯಲ್ಲೂ ಕರ್ಫ್ಯೂ ಸ್ಥಿತಿ ಇರುವ ಹಿನ್ನಲೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ಪ್ರತೀದಿನ ಒಂದು ಲಕ್ಷ ಲೀಟರ್ ಹಾಲು ಮಾರಾಟ ಕಡಿಮೆಯಾಗಿದೆ. ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಾರ್ಚ್ 28ರಿಂದ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಪೂರೈಕೆಯನ್ನೂ ಸ್ಥಗಿತಗೊಳಿಸಿ ಸಂಪೂರ್ಣ ಬಂದ್ ಪರಿಸ್ಥಿತಿ ಘೋಷಿಸಿದೆ.
ಈ ಹಿನ್ನಲೆಯಲ್ಲಿ ಮಾರ್ಚ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಂದಿನಿ ಹಾಲಿನ ಬೂತ್ ಗಳು ಗ್ರಾಹಕರಿಗೆ ಸೇವೆ ನೀಡಲು ಸಾಧ್ಯವಾಗದೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತದೆ.
ಈ ಕಾರಣದಿಂದ ಪ್ರಸ್ತುತ ಪರಿಸ್ಥಿತಿಯನ್ನು ಸರಿದೂಗಿಸುವ ಅನಿವಾರ್ಯತೆಯಿಂದ
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಾರ್ಚ್ 29 ಮತ್ತು ಮಾರ್ಚ್ 30 ರಂದು ಬೆಳಿಗ್ಗೆ ಹಾಗೂ ಸಾಯಂಕಾಲದ ಎರಡೂ ಸರದಿಗಳಲ್ಲಿ ಉಭಯ ಜಿಲ್ಲೆಗಳ ಹಾಲು ಉತ್ಪಾದಕರಿಂದ ಹಾಲು ಖರೀದಿಸುವುದನ್ನು ಸ‍್ಥಗಿತಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಮಾರ್ಚ್ 31ರ ಬೆಳಗ್ಗಿನ ಸರದಿಯಿಂದ ಗುಣಮಟ್ಟದ ಹಾಲು ಸಂಗ್ರಹಣೆ ಪುನರಾರಂಭಗೊಳ್ಳಲಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಹೈನು ಬಾಂಧವರು ಒಕ್ಕೂಟದ ಈ ನಿರ್ಧಾರವನ್ನು ಬೆಂಬಲಿಸುವ ಮೂಲಕ ಸಹಕರಿಸಬೇಕು ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ರವಿರಾಜ ಹೆಗ್ಡೆ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗಿದ್ದರೂ ಮಾರ್ಚ್ 29ರಿಂದ ನಿಗದಿತ ವೇಳೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿರುತ್ತದೆ.
ಹೆಚ್ಚುವರಿ ಹಾಲನ್ನು ಪರಿವರ್ತನಾ ಘಟಕಗಳಿಗೆ ಕಳುಹಿಸಲಾಗಿದೆ ಆದರೆ ಅಲ್ಲೂ ಹಾಲಿನ ಶೇಖರಣಾ ಪ್ರಮಾಣ ಅಧಿಕವಾಗಿರುವುದರಿಂದ ತಕ್ಷಣಕ್ಕೆ ಪರಿವರ್ತನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಎಲ್ಲಾ ಕಾರಣಗಳಿಂದ ಉಭಯ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಹಾಲು ಉತ್ಪಾದಕರಿಂದ ಹಾಲನ್ನು ಖರೀದಿಸುವುದನ್ನು ನಿಲ್ಲಸಲೇಬೇಕಾಗಿರುವ ಅನಿವಾರ್ಯ ಪರಿಸ್ಥಿತಿ ಒದಗಿಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.