ಸುರತ್ಕಲ್: ಮಕ್ಕಳ ಆರೋಗ್ಯದ ದೃಷ್ಟಿಯಿಂದ ರೋಗನಿರೋಧಕ ಶಕ್ತಿ ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಲಸಿಕೆ ಹಾಕಿಸಿಕೊಳ್ಳುವುದು ಅತ್ಯಂತ ಅವಶ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುರತ್ಕಲ್‌ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಯುಕ್ತ ಆಶ್ರಯದಲ್ಲಿ ಕೃಷ್ಣಾಪುರ ಐದನೇ ಬ್ಲಾಕಿನಲ್ಲಿರುವ ಯುವಕ ಮಂಡಲ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಜಿಲ್ಲಾ ಮಟ್ಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸಾಮೂಹಿಕವಾಗಿ ರೋಗ ನಿರೋಧಕ ಶಕ್ತಿ ಇರಬೇಕು. ಆಗ ಸೋಂಕು ಹರಡಲು ಸಾಧ್ಯವಿಲ್ಲ. ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ರೋಗ ನಿರೋಧಕ ಶಕ್ತಿಯಿಂದ ಮಗುವಿನ ಬೆಳವಣಿಗೆ ಸದೃಢವಾಗಿ ಆಗುತ್ತದೆ ಮತ್ತು ತಾನಾಗಿಯೇ ಬೌದ್ಧಿಕ ಮಟ್ಟ, ಬುದ್ಧಿ ಶಕ್ತಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಮಗು ಕೂಡ ಲಸಿಕೆಯಿಂದ ವಂಚಿತವಾಗಬಾರದು. ಆರೋಗ್ಯ ಇಲಾಖೆಯ ಜತೆಗೆ ನಾಗರಿಕರು ಕೂಡ ಸೇರಿ ಭವಿಷ್ಯದ ಮಕ್ಕಳನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ ಎಂದರು.
ಆದ್ಯತೆಯಲ್ಲಿ ಲಸಿಕೆ ನೀಡಿ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಯಾವುದೇ ಮಗುವೂ ಲಸಿಕೆಯಿಂದ ವಂಚಿತವಾಗಬಾರದು. ಆರೋಗ್ಯ ಇಲಾಖೆಯ ಸಿಬಂದಿ ಪ್ರತೀ ಮಗುವನ್ನು ಗುರುತಿಸಿ ಲಸಿಕೆ ಹಾಕಲು ನೆರವಾಗುತ್ತಾರೆ. ಪೋಷಕರು ಕೂಡ ಆದ್ಯತೆಯಲ್ಲಿ ಮಕ್ಕಳಿಗೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್ ಕುಮಾರ್, ಡಾ| ರಾಜೇಶ್ ಡಾ| ಸುಜಯ್, ಮಂಗಳೂರು ಮನಪಾ ಸದಸ್ಯರಾದ ಲಕ್ಷ್ಮೀ ಶೇಖರ ದೇವಾಡಿಗ, ಶ್ವೇತಾ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ದೇವಾಡಿಗ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ: ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ: ಹೆಗ್ಡೆ
ಉಡುಪಿ: ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಗರ್ಭಿಣಿಯರು ಮತ್ತು 0-5 ವರ್ಷದೊಳಗಿನ ಮಕ್ಕಳಿಗೆ ಎಲ್ಲ ಅಗತ್ಯ ಲಸಿಕೆಗಳನ್ನು ನಿಗದಿತ ಅವಧಿಯೊಳಗೆ ತಪ್ಪದೇ ನೀಡುವ ಅಗತ್ಯವಿದೆ. ಮಕ್ಕಳನ್ನು ಯಾವುದೇ ರೋಗಗಳು ಕಾಡದಂತೆ ಆರೋಗ್ಯಯುತ ಬೆಳವಣಿಗೆ ಹೊಂದಲು ನಿಗದಿತ ಅವಧಿಯೊಳಗೆ ಅಗತ್ಯವಿರುವ ಎಲ್ಲ ಲಸಿಕೆಗಳನ್ನು ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಸೋಮವಾರ ನಡೆದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಜಿತ ದ.ಕ. ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಹೊಂದಿದ್ದು, ಇಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಇದೆ. ಪೋಲಿಯೋ ನಿರ್ಮೂಲನೆ ರೀತಿಯಲ್ಲಿ ದಡಾರ, ರೂಬೆಲ್ಲಾ ಸಹಿತ ಮಕ್ಕಳನ್ನು ಕಾಡುವ ರೋಗಳನ್ನು ಸಂಪೂರ್ಣ ನಿರ್ಮೂಲನೆಗೊಳಿಸಬೇಕಿದೆ ಎಂದು ತಿಳಿಸಿದರು.
ಎಲ್ಲರ ಜವಾಬ್ದಾರಿ
ಜಿಲ್ಲೆಯಲ್ಲಿ ಯಾವುದೇ ಅರ್ಹ ಗರ್ಭಿಣಿ ಮತ್ತು ಮಗು ಲಸಿಕೆಯಿಂದ ವಂಚಿತವಾಗದಂತೆ ಎಲ್ಲರಿಗೂ ಲಸಿಕೆ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಾಗರಿಕ ಸಮಾಜದಲ್ಲಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ನಗರಸಭೆ ಸದಸ್ಯೆ ಮಾನಸಾ ಪೈ, ಜಿಲ್ಲಾ ಸರ್ಜನ್ ಡಾ| ಸುದೇಶ್ ಕುಮಾರ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ನಾಗಭೂಷಣ ಉಡುಪ ಸ್ವಾಗತಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ದೀಪಾ ಭಂಡಾರಿ ವಂದಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಎಂ.ಜಿ. ರಾಮ ನಿರೂಪಿಸಿದರು.
294 ಲಸಿಕಾ ಕೇಂದ್ರಗಳು
ಜಿಲ್ಲೆಯ 294 ಕೇಂದ್ರಗಳಲ್ಲಿ 708 ಗರ್ಭಿಣಿಯರು ಮತ್ತು 0-2 ವರ್ಷದೊ ಳಗಿನ 3,188 ಮಕ್ಕಳಿಗೆ, 2-5 ವರ್ಷ ದೊಳಗಿನ ಲಸಿಕೆ ವಂಚಿತ 16 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.