Advertisement

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

12:41 AM Oct 03, 2023 | Team Udayavani |

ಮಂಗಳೂರು: ಅಹಿಂಸಾ ಚಳವಳಿ ಮೂಲಕ ದೇಶದ ಜನರನ್ನು ಒಗ್ಗೂಡಿಸಿ ಗುಲಾಮಗಿರಿಯಿಂದ ಹೊರತಂದ ಮಹಾತ್ಮ ಗಾಂಧಿ ಅವರ ಜೀವನದ ಅಧ್ಯಯನವೇ ಒಂದು ಪಾಠ ಶಾಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಜಿ.ಪಂ., ವಾರ್ತಾ ಇಲಾಖೆ, ಮಂಗಳೂರು ಪಾಲಿಕೆ, ಭಾರತ ಸೇವಾದಳದ ಆಶ್ರಯದಲ್ಲಿ ರಾಜಾಜಿ ಪಾರ್ಕ್‌ನಲ್ಲಿ ಆಯೋಜಿಸ ಲಾದ ಗಾಂಧಿ ಜಯಂತಿ ಸಂದರ್ಭ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಗಾಂಧಿ ಎಂದರೆ ಒಂದು ಚಿಂತನೆ ಹಾಗೂ ವಿಚಾರಧಾರೆ. ದೇಶದಲ್ಲಿ ರಾಮ ರಾಜ್ಯದ ಕನಸು ಕಂಡಿದ್ದ ಮಹಾತ್ಮಗಾಂಧಿ ದುಶ್ಚಟಗಳಿಂದ ದೇಶವನ್ನು ಮುಕ್ತಗೊಳಿಸುವ ಆಶಯ ಹೊಂದಿದ್ದರು. ರಾಷ್ಟ್ರದ ಉನ್ನತಿಯ ಕಲ್ಪನೆಯೊಂದಿಗೆ ಸ್ವದೇಶಿ ಪರಿಕಲ್ಪನೆಗೆ ಒತ್ತು ನೀಡಿದ್ದರು. ಸ್ವಚ್ಛತೆಯ ಮೂಲಕ ಆರೋಗ್ಯಕರ ರಾಷ್ಟ್ರ ನಿರ್ಮಾಣವನ್ನು ತಮ್ಮ ನಡವಳಿಕೆ ಮೂಲಕ ಪ್ರತಿಪಾದಿಸಿದವರು ಗಾಂಧೀಜಿ ಎಂದ ಅವರು, ಲಾಲ್‌ಬಹಾದ್ದೂರ್‌ ಶಾಸ್ತ್ರಿಅವರು ಜೈ ಜವಾನ್‌ ಜೈ ಕಿಸಾನ್‌ ಎಂದು ಹೇಳುವ ಮೂಲಕ ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ್ದರು. ಪ್ರಸಕ್ತ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಪರಿಕಲ್ಪನೆಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಶಾಂತಿಯ ಮೂಲಕ ಚಳವಳಿ ನಡೆಸಬಹುದು ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟಿದ್ದಾರೆ. ಸರಳತೆ, ಸತ್ಯದ ಮಾರ್ಗದಲ್ಲಿ ಭಯದ ಅಗತ್ಯವಿಲ್ಲ ಎಂಬುದನ್ನು ಅವರು ರುಜುವಾತು ಮಾಡಿದ್ದಾರೆ ಎಂದರು.

ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಎಡಿಸಿ ಡಾ| ಸಂತೋಷ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಜಿ.ಪಂ. ಸಿಇಒ ಡಾ| ಆನಂದ್‌, ಎಸ್‌ಪಿ ರಿಷ್ಯಂತ್‌, ಪಾಲಿಕೆ ಆಯುಕ್ತ ಆನಂದ್‌, ಸೇವಾದಳದ ಪ್ರಮುಖರಾದ ಟಿ.ಕೆ. ಸುಧೀರ್‌, ಪ್ರಭಾಕರ ಶ್ರೀಯಾನ್‌ ಉಪಸ್ಥಿತರಿದ್ದರು.ಸೇವಾದಳದ ಬಶೀರ್‌ ಬೈಕಂಪಾಡಿ ಸ್ವಾಗತಿಸಿದರು. ವಾರ್ತಾಧಿಕಾರಿ ರವಿರಾಜ್‌ ವಂದಿಸಿದರು.

“ಗಾಂಧೀಜಿಯವರ ತತ್ತ್ವಾದರ್ಶ ಪಾಲಿಸೋಣ’
ಉಡುಪಿ: ಗಾಂಧೀಜಿಯವರ ವಿಚಾರ, ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸ ಬೇಕು ಎಂದು ಶಾಸಕ ಯಶ್‌ಪಾಲ್‌ ಎ. ಸುವರ್ಣ ಹೇಳಿದರು.

ಅಜ್ಜರಕಾಡು ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ವತಿಯಿಂದ ಸೋಮವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಗಾಂಧಿ ಜಯಂತಿಯಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಉಡುಪಿ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಇದಕ್ಕೆ ಪೌರಕಾರ್ಮಿಕರ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಉಡುಪಿ ನಗರ ಸ್ವತ್ಛ ನಗರವಾಗುವುದರ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಎಂದರು.

ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರು ಭೇಟಿ ನೀಡಿದ ಸ್ಥಳಗಳಲ್ಲಿ ಸ್ವತಃ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಸಾರ್ವಜನಿಕರು ಮೊದಲು ತಮ್ಮ ಮನೆಯ ಕಸವನ್ನು ನಾನು ಸ್ವಚ್ಛಗೊಳಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಪ್ರಶಸ್ತಿ ಪತ್ರ ವಿತರಣೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ಪ್ರೌಢಶಾಲಾ ವಿಭಾಗ, ಪ.ಪೂ. ಶಿಕ್ಷಣ ವಿಭಾಗ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ 3 ವಿಭಾಗಗಳಲ್ಲಿ ಆಯೋಜಿಸಲಾದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗದ ರಕ್ಷಿತಾ, ಶ್ರೇಯಾ ಹಾಗೂ ರಶ್ಮಿ, ಪ.ಪೂ. ಶಿಕ್ಷಣ ವಿಭಾಗದ ದಿವ್ಯಾ, ಸೌಜನ್ಯಾ ಹಾಗೂ ದಕ್ಷಾ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ಸ್ವಪ್ನಾ ಶೇಟ್‌, ಹರ್ಷಿತಾ ಯು. ಶೆಟ್ಟಿ ಹಾಗೂ ಅನುಷಾ ಕೆ. ಪೂಜಾರಿ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.

ನಗರಸಭೆ ಹಾಗೂ ಬ್ಯಾಂಕ್‌ ಆಫ್ ಬರೋಡಾ ವತಿಯಿಂದ ಸಾರ್ವಜನಿಕರಿಗೆ ಕೈಚೀಲಗಳನ್ನು ಉಚಿತ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಡಿಡಿಪಿಐ ಗಣಪತಿ ಕೆ., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಬಿ., ನಗರಸಭೆ ಪೌರಾಯುಕ್ತ ರಾಯಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ., ರಶ್ಮಿ ಭಟ್‌, ಜಯಂತಿ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next