Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ “ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ

12:24 AM Aug 31, 2023 | Team Udayavani |

ಮಂಗಳೂರು: ಚುನಾವಣೆ ಅಥವಾ ಮತ ಗಳಿಕೆಯ ಉದ್ದೇಶದಿಂದ ಕಾಂಗ್ರೆಸ್‌ ಸರಕಾರ ಗೃಹಲಕ್ಷ್ಮಿ ಅಥವಾ ಗ್ಯಾರಂಟಿ ಯೋಜನೆ ಘೋಷಿಸಿಲ್ಲ. ಬದಲಾಗಿ ಜನತೆ ಉತ್ತಮ ರೀತಿಯಲ್ಲಿ ಬದುಕು ಸಾಗಿಸಬೇಕು ಎಂಬ ದೂರದೃಷ್ಟಿ ಇದರಲ್ಲಿದೆ ಎಂದು ವಿಧಾನಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ ಹೇಳಿದರು.

Advertisement

ಕುದ್ಮಲ್ ರಂಗರಾವ್‌ ಪುರಭವನದಲ್ಲಿ ಬುಧವಾರ ಜಿಲ್ಲಾ ಮಟ್ಟದಲ್ಲಿ “ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಪ್ರಣಾಳಿಕೆಯಲ್ಲಿದ್ದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಾಧ್ಯವಿಲ್ಲ ಎಂದು ಹಲವು ಮಂದಿ ಅಭಿಪ್ರಾ ಯಪಟ್ಟಿದ್ದರು. ಆದರೆ ಘೋಷಿಸಿದ 5 ರಲ್ಲಿ ನಾಲ್ಕು ಗ್ಯಾರಂಟಿ ಜಾರಿಗೊಳಿಸಿದ್ದು, ಮತ್ತೊಂದು ಯೋಜನೆ ಶೀಘ್ರವೇ ಅನುಷ್ಠಾ ನಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದರೆ ರಾಜ್ಯ ಸರಕಾರಕ್ಕೆ ಆರ್ಥಿಕ ನಷ್ಟವಾಗಬಹುದು ಎಂಬ ಟೀಕೆ ಸಾಮಾನ್ಯ. ಆದರೆ ಈಗಾಗಲೇ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದ ತತ್ತರವಾಗಿರುವ ಜನರಿಗೆ ಸಿಗುವ ಈ ಗ್ಯಾರಂಟಿ ಯೋಜನೆಯ ಹಣವು ಕೈಯಿಂದ ಕೈಗಳಿಗೆ ಬದಲಾವಣೆಯಾಗುತ್ತಾ ಸಾಗಿ ಆರ್ಥಿಕ ಸದೃಢತೆಗೆ ಕಾರಣವಾಗಲಿದೆ. ಪ್ರತೀ ಜಿ.ಪಂ. ವ್ಯಾಪ್ತಿಯಲ್ಲೂ ಈ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದರು.

ರಾಜ್ಯ ಮಟ್ಟದಲ್ಲಿ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಿದ್ದು, ಕಾರ್ಯಕ್ರಮದ ನೇರ ಪ್ರಸಾರವನ್ನು ಬೃಹತ್‌ ಪರದೆಯ ಮೂಲಕ ಜಿಲ್ಲಾ ಮಟ್ಟದಲ್ಲಿಯೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಫ‌ಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

296 ಕಡೆ ವೀಕ್ಷಣೆಗೆ ಅವಕಾಶ
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಮಾತನಾಡಿ, ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ದ.ಕ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ.ಗಳು ಸೇರಿದಂತೆ 296 ಕಡೆಗಳಲ್ಲಿ ವೀಕ್ಷಣೆಯ ಸೌಲಭ್ಯವನ್ನು ಮಾಡಲಾಗಿದೆ. ಮಂಗಳೂರು ಪಾಲಿಕೆಯ 33 ಕಡೆಗಳಲ್ಲಿ ಟಿ.ವಿ., ಎಲ್‌ಇಡಿ ಪರದೆಯ ಮೂಲಕ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪ ಬೋವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್‌, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ದ.ಕ. ಜಿಲ್ಲೆಯಲ್ಲಿ ಈವರೆಗೆ 3,15,726 ಮಂದಿ ಗೃಹಲಕ್ಷ್ಮಿ ಯೋಜನೆ ಯಡಿ ಅರ್ಜಿ ಸಲ್ಲಿಸಿದ್ದು, 2,38,352 ಫ‌ಲಾನುಭವಿಗಳಿಗೆ 47,67,04,000 ರೂ. ಪಾವತಿ ಯಾಗಿದೆ. ಉಳಿಕೆ 77,374 ಫ‌ಲಾನು ಭವಿಗಳ ಮಾಹಿತಿ ಸೇವಾಸಿಂಧುವಿನಲ್ಲಿ ಅಪ್‌ಲೋಡ್‌ ಆಗಬೇಕಾಗಿದೆ.

ರಂಗೋಲಿ ಬಿಡಿಸಿ ಸಂಭ್ರಮಿಸಿದ ಮಹಿಳೆಯರು
ಉಡುಪಿ: ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನೆ ಬುಧವಾರ ಕಿನ್ನಿಮೂಲ್ಕಿ ಮಿಷನ್‌ ಕಾಂಪೌಂಡ್‌ನ‌ ಬಾಸೆಲ್‌ ಮಿಷನರಿಸ್‌ ಮೆಮೋರಿಯಲ್‌ ಆಡಿಟೋರಿಯಂನಲ್ಲಿ ನಡೆಯಿತು.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಆಡಿಟೋರಿಯಂ ಒಳಭಾಗದ ವೇದಿಕೆಯಲ್ಲಿ ದೊಡ್ಡ ಸ್ಕ್ರೀನ್‌ ವ್ಯವಸ್ಥೆಯನ್ನು ಜಿಲ್ಲಾಡಳಿತ ದಿಂದ ಮಾಡಲಾಗಿತ್ತು.

ಶಾಸಕ ಯಶ್‌ಪಾಲ್‌ ಎ. ಸುವರ್ಣ¬, ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಅಪರ ಜಿಲ್ಲಾಧಿಕಾರಿ ಮಮತಾದೇವಿ, ನಗರಸಭಾ ಸದಸ್ಯರಾದ ರಮೇಶ್‌ ಕಾಂಚನ್‌, ಅಮೃತಾ ಕೃಷ್ಣಮೂರ್ತಿ, ಶ್ರೀಕೃಷ್ಣ ರಾವ್‌ ಕೊಡಂಚ, ವಿಜಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಡಿಟೋರಿಯಂ ಮುಂಭಾಗದಲ್ಲಿ ಹೂವಿನ ಅಲಂಕಾರದ ಜತೆಗೆ ರಂಗೋಲಿ ಬಿಡಿಸಲಾಗಿತ್ತು. ವಿವಿಧ ಭಾಗದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಆಗಮಿಸಿದ್ದರು.

ಜಿಲ್ಲೆಯ 2,56,850 ಫ‌ಲಾನುಭವಿಗಳಲ್ಲಿ 2,08,695 ಮಂದಿ ಈಗಾಗಲೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. 2 ಸಾವಿರ ರೂ. ನಗದು ಸೌಲಭ್ಯವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಚಾಲನೆ ನೀಡಲಾಯಿತು. ವಿವಿಧೆಡೆ ನೇರ ಪ್ರಸಾರ ವೀಕ್ಷಿಸಲು ಅನುವಾಗುವಂತೆ ಪ್ರತೀ ವಾರ್ಡ್‌, ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ ನಡೆಯಿತು. 155 ಗ್ರಾ.ಪಂ. ಕೇಂದ್ರ ಸ್ಥಾನ, ನಗರ ಸ್ಥಳೀಯ ಸಂಸ್ಥೆಯ 52 ವಾರ್ಡ್‌, 6 ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರ ಸಹಿತ 214 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಘಾಟನೆ ನೇರ ಪ್ರಸಾರ ವೀಕ್ಷಿಸಲಾಗಿತ್ತು. ಮಹಿಳೆಯರು ಮನೆ, ಸಂಸ್ಥೆಯ ಮುಂದೆ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next