Advertisement

Dakshina Kannada: ಪೊಲೀಸರಿಂದ “ಸ್ಪೀಡ್‌ ಡಿಟೆಕ್ಷನ್‌ ರಾಡಾರ್‌ ಗನ್‌’ ಪ್ರಯೋಗ

12:19 AM Jul 30, 2024 | Team Udayavani |

ಮಂಗಳೂರು: ಅಪಘಾತ ಗಳನ್ನು ತಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ವಾಹನಗಳ ವೇಗಮಿತಿ ಅಧಿಸೂಚನೆಯಂತೆ ದ.ಕ. ಜಿಲ್ಲಾ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಸೋಮವಾರ ಹಲವು
ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Advertisement

ರಾಡಾರ್‌ ಗನ್‌ ಬಳಕೆ
ವಾಹನಗಳ ವೇಗ ಪತ್ತೆ ಮಾಡುವುದಕ್ಕಾಗಿ ಜಿಲ್ಲಾ ಪೊಲೀಸರಿಗೆ 5 “ಮೊಬೈಲ್‌ ಸ್ಪೀಡ್‌ ಡಿಟೆಕ್ಷನ್‌ ರಾಡಾರ್‌ ಗನ್‌’ಗಳನ್ನು ಒದಗಿಸಲಾಗಿದೆ. ಇದನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಲಾಗಿದೆ. ಈ ರಾಡಾರ್‌ ಗನ್‌ ಕನಿಷ್ಠ 100 ಮೀಟರ್‌ ಅಂತರದಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುತ್ತದೆ.

ನಗರದಲ್ಲೂ ಆರಂಭ
ಮಂಗಳೂರು ನಗರ ಭಾಗ ಸಹಿತ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲೂ ಇಂಥ ಗನ್‌ಗಳನ್ನು ಬಳಸಿ ವಾಹನಗಳ ವೇಗವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವ ಕಾರ್ಯಾ ಚರಣೆಯನ್ನು ಆರಂಭಿಸಲಾಗಿದೆ. ಈಗಾಗಲೇ 10ಕ್ಕೂ ಅಧಿಕ ಪ್ರಕರಣ
ದಾಖಲಿಸಿಕೊಳ್ಳಲಾಗಿದೆ. ಕಮಿಷನ ರೆಟ್‌ ವ್ಯಾಪ್ತಿಗೆ ಇಂತಹ 3 ಗನ್‌ಗಳನ್ನು ಒದಗಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೀಡ್‌ ಡಿಟೆಕ್ಷನ್‌ ರಾಡಾರ್‌ ಗನ್‌ ಕೆಮರಾ: ಬಂಟ್ವಾಳ ಪೊಲೀಸರಿಂದ ಕಾರ್ಯಾಚರಣೆ
* 62 ಪ್ರಕರಣ ದಾಖಲು, 65 ಸಾ. ರೂ.ದಂಡ ವಸೂಲು
ಬಂಟ್ವಾಳ: ಮಿತಿ ಮೀರಿದ ವೇಗದಿಂದಲೇ ಶೇ. 99ರಷ್ಟು ಅಪಘಾತಗಳು ಉಂಟಾಗುತ್ತಿವೆ ಎಂಬ ವರದಿ ಬೆನ್ನಲ್ಲೇ ಪೊಲೀಸ್‌ ಇಲಾಖೆ ವಾಹನಗಳ ವೇಗ ನಿಯಂತ್ರಣಕ್ಕೆ ಸಿದ್ಧತೆ ನಡೆಸಿದ್ದು, ಸೋಮವಾರ ಬಂಟ್ವಾಳ ಸಂಚಾರ ಪೊಲೀಸರು ರಾ.ಹೆ.75ರ ತುಂಬೆ ರಾಮಲ್‌ಕಟ್ಟೆ ಭಾಗದಲ್ಲಿ ಹೊಸ ತಂತ್ರಜ್ಞಾನವಾಗಿರುವ ಸ್ಪೀಡ್‌ ಡಿಟೆಕ್ಷನ್‌ ರಾಡಾರ್‌ ಗನ್‌ ಕೆಮರಾ ಮೂಲಕ ವಾಹನಗಳ ವೇಗವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದರು.

ಬಂಟ್ವಾಳ ಸಂಚಾರ ಠಾಣೆ ಪಿಎಸ್‌ಐ ಸುತೇಶ್‌ ಕೆ.ಪಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೊದಲ ದಿನ 62 ಪ್ರಕರಣಗಳು ದಾಖಲಾಗಿದ್ದು, 65 ಸಾವಿರ ರೂ. ದಂಡ ವಸೂಲಿ ಆಗಿದೆ. ಮುಂದೆ ವಿವಿಧ ಭಾಗಗಳಲ್ಲಿ ಆಯಾಯ ರಸ್ತೆಯ ಗರಿಷ್ಠ ವೇಗದ ಮಿತಿಯ ಆಧಾರದಲ್ಲಿ ದಂಡ ವಸೂಲಿ ಕಾರ್ಯ ನಡೆಯಲಿದೆ.

Advertisement

ವೇಗ ಮಿತಿ ಫಲಕ ಇಲ್ಲ!
ಬಂಟ್ವಾಳ ಪೊಲೀಸರು ದಂಡ ವಿಧಿಸಿದ ಹೆದ್ದಾರಿ ಪ್ರದೇಶದಲ್ಲಿ ವೇಗದ ಮಿತಿ 50 ಕಿ.ಮೀ.ಆಗಿದ್ದು, ಆದರೆ ಬಹುತೇಕ ಫಲಕಗಳು ಕಿತ್ತು ಹೋಗಿದ್ದು, ಇರುವ ಫಲಕಗಳಲ್ಲಿ ಕೊಳೆ ತುಂಬಿ ಸರಿಯಾಗಿ ಕಾಣುವುದೇ ಇಲ್ಲ. ಫಲಕಗಳನ್ನು ಸರಿಯಾಗಿ ಪ್ರದರ್ಶಿಸದೆ ದಂಡ ವಸೂಲಿ ಮಾಡಿರುವುದು ಸರಿಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next