Advertisement

ದ.ಕ. ಜಿಲ್ಲೆಯಾದ್ಯಂತ ಉತ್ತಮ ಮಳೆ; ಇಂದು “ಆರೆಂಜ್‌ ಅಲರ್ಟ್‌’

11:37 PM May 18, 2022 | Team Udayavani |

ಮಂಗಳೂರು/ಉಡುಪಿ/ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮತ್ತೆ ಬಿರುಸು ಪಡೆದಿದ್ದು, ಬುಧವಾರ ದಿನವಿಡೀ ಹಲವು ಕಡೆ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

Advertisement

ಮಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಮಳೆ ಬಿರುಸು ಪಡೆದಿತ್ತು. ಅರಂತೋಡಿನ ಸೇವಾಜೆಯಲ್ಲಿ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ವೇಣೂರು ಚರ್ಚ್‌ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದ ಮರ ಬಿದ್ದು ವಿದ್ಯುತ್‌ ತಂತಿ ತುಂಡಾಗಿದೆ. ಸ್ವಲ್ಪ ಸಮಯ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸುಳ್ಯ ತಾಲೂಕಿನಾದ್ಯಂತ, ಬೆಳ್ತಂಗಡಿ, ಮಡಂತ್ಯಾರು, ಧರ್ಮಸ್ಥಳ, ಗುರು ವಾಯನಕೆರೆ, ಚಾರ್ಮಾಡಿ, ಬಂದಾರು, ನಾರಾವಿ, ವೇಣೂರು, ಮೂಡುಬಿದಿರೆ, ಬಂಟ್ವಾಳ, ಸರಪಾಡಿ, ಬಿ.ಸಿ.ರೋಡ್‌, ವಿಟ್ಲ, ಕನ್ಯಾನ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುರತ್ಕಲ್‌, ಉಳ್ಳಾಲ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಉಡುಪಿ ನಗರದ ಸುತ್ತಮುತ್ತ ಬುಧವಾರ ಸಣ್ಣದಾಗಿ ಬಿಟ್ಟುಬಿಟ್ಟು ಮಳೆಯಾಗಿದೆ. ಮಲ್ಪೆ, ಮಣಿಪಾಲ, ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಬೆಳಗ್ಗಿನಿಂದ ಜಿಟಿಜಿಟಿ ಮಳೆಯಾಗಿದ್ದು, ಮಧ್ಯಾಹ್ನ ಬಳಿಕ ಹಲವೆಡೆ ನಿರಂತರ ಮಳೆ ಸುರಿದಿದೆ. ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಸಾಮಾನ್ಯ ಮಳೆಯಾಗಿದೆ.

ಮಂಗಳೂರಿನಲ್ಲಿಳಿದ ವಿಮಾನ
ರಿಯಾದ್‌ನಿಂದ ಕೋಯಿಕ್ಕೋಡ್‌ಗೆ ತೆರಳುವ ವಿಮಾನ ಕೋಯಿಕ್ಕೋಡ್‌ನ‌ಲ್ಲಿ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬೆಳಗ್ಗೆ 7.26ಕ್ಕೆ ಅವತರಣ ಮಾಡಿತು. ಮಧ್ಯಾಹ್ನ 2.11ಕ್ಕೆ ತೆರಳಿದೆ.

Advertisement

ಇಂದು “ಆರೆಂಜ್‌ ಅಲರ್ಟ್‌’
ಕಾಸರಗೋಡು ಸೇರಿಂದಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ಮೇ 19ರಂದು ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ. ಈ ವೇಳೆ ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಸಮುದ್ರದ ಅಬ್ಬರದ ಜತೆ ಗಾಳಿಯ ವೇಗ ಹೆಚ್ಚು ಇರಲಿದೆ. ಮೇ 20ರಂದು ಕರಾವಳಿಯಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 5 ದಿನಗಳ ಕಾಲ ವ್ಯಾಪಕ ಮಳೆ ಸಾಧ್ಯತೆ ಇದ್ದು ನದಿ ತೀರ, ಭೂಕುಸಿತ ಸಾಧ್ಯತೆಯ ಮಲೆನಾಡು ಪ್ರದೇಶಗಳಲ್ಲಿ ವಾಸಿಸುವವರು ಜಾಗ್ರತೆ ವಹಿಸಬೇಕೆಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಸುಳ್ಯ: ದಿನವಿಡೀ ಮಳೆ
ಸುಳ್ಯ: ತಾಲೂಕಿನಾದ್ಯಂತ ಬುಧವಾರ ದಿನವಿಡೀ ಉತ್ತಮ ಮಳೆಯಾಗಿದೆ. ಸುಳ್ಯ, ಬೆಳ್ಳಾರೆ, ಐವರ್ನಾಡು, ಗುತ್ತಿಗಾರು, ಅರಂತೋಡು, ಸಂಪಾಜೆ, ಕಲ್ಲುಗುಂಡಿ, ಮರ್ಕಂಜ, ಸುಬ್ರಹ್ಮಣ್ಯ, ಬಳ್ಪ, ಹರಿಹರ ಬಿಳಿನೆಲೆ ವ್ಯಾಪ್ತಿಯಲ್ಲೂ ಮಳೆಯಾಗಿದೆ. ರಾತ್ರಿಯ ಮಳೆಗೆ ಸುಳ್ಯ ತಾಲೂಕಿನ ಮರ್ಕಂಜ ಎಲಿಮಲೆ ರಸ್ತೆಯ ಸೇವಾಜೆಯಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ನಿರ್ಮಿಸಿದ್ದ ಬದಲಿ ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ಸುಳ್ಯ ಗಾಂಧಿನಗರ ಶಾಲಾ ಆವರಣದಲ್ಲಿದ್ದ ತೆಂಗಿನಮರವೊಂದು ಮುರಿದುಬಿದ್ದಿದೆ.

ರಸ್ತೆಗೆ ಬಿದ್ದ ವಿದ್ಯುತ್‌ ಕಂಬ
ವಿಟ್ಲ: ಮಂಗಳವಾರ ರಾತ್ರಿ ಸುರಿದ ಮಳೆಗೆ ವಿಟ್ಲ-ಕಲ್ಲಡ್ಕ-ಮಂಗಳೂರು ರಸ್ತೆಯಲ್ಲಿ ವಿದ್ಯುತ್‌ ಕಂಬ ರಸ್ತೆಗೆ ಬಿದ್ದ ಪರಿಣಾಮ ಬುಧವಾರ ಬೆಳಗ್ಗೆ 9.30ರ ತನಕ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಂಬ ಬಿದ್ದಿದ್ದು, ಕಂಬದೊಂದಿಗೆ ದೀವಿ ಹಲಸು ಮರದ ದೊಡ್ಡ ಗಾತ್ರದ ಕೊಂಬೆ ಬಿದ್ದಿತ್ತು. ಬೆಳಗಿನ ಜಾವದಲ್ಲಿ ಬರುವ ಎಲ್ಲ ವಾಹನಗಳು ಅಗಲ ಕಿರಿದಾದ ಪಳಿಕೆ ರಸ್ತೆಯನ್ನು ಬಳಸಿ ಬೊಬ್ಬೆಕೇರಿ ಸಂಪರ್ಕ ರಸ್ತೆ ಮೂಲಕ ಸಂಚರಿಸಿದವು. ಎರಡೂ ಬದಿಗಳಲ್ಲಿ ವಾಹನಗಳು ಸಂಚರಿಸಿ ತಾಸುಗಟ್ಟಲೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಕೊಡಗು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆೆಯಾಗುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿರುವುದಲ್ಲದೆ ಕೃಷಿ ಚಟುವಟಿಕೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಮಂಗಳವಾರ ರಾತ್ರಿ ಮಡಿಕೇರಿ, ತಲಕಾವೇರಿ ಕ್ಷೇತ್ರ ಭಾಗಮಂಡಲ, ನಾಪೋಕ್ಲು, ಶಾಂತಳ್ಳಿ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕಿರು ತೊರೆಗಳು ಉಕ್ಕಿ ಹರಿದಿವೆ. ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ತೊಡಕುಂಟಾಯಿತು.

ಚಾಲಕರ ಪರದಾಟ
ಕವಿದ ಮೋಡ, ಸುರಿಯುವ ಮಳೆಯೊಂದಿಗೆ, ರಾತ್ರಿ ಮತ್ತು ಬೆಳಗ್ಗಿನ ಅವಧಿಯಲ್ಲಿ ದಟ್ಟವಾಗಿರುವ ಮಂಜಿನಿಂದ ರಸ್ತೆಗಳು ಸ್ಪಷ್ಟವಾಗಿ ಕಾಣದೆ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿದ್ಯುತ್‌ ವ್ಯತ್ಯಯ
ನಿರಂತರ ಮಳೆಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಎದುರಾಗಿದೆ. ವಿದ್ಯುತ್‌ ಮಾರ್ಗದಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದಿರುವುದರಿಂದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮಡಿಕೇರಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್‌ ಇಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next