ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಸಾಧಾರಣ ಮಳೆ ಹಾಗೂ ನೆರಿಯಾ, ಮುಂಡಾಜೆ, ಚಾರ್ಮಾಡಿ ಸಹಿತ ಇತರ ಕೆಲವು ಕಡೆ ಗುಡುಗು ಮತ್ತು ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಬೆಳ್ತಂಗಡಿ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಕಳೆದ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಉಜಿರೆ ಓಡಲ ಪಾದೆಮನೆಯ ಉಮೇಶ್ ಪೂಜಾರಿ ಅವರ ತೋಟಕ್ಕೆ ಮರಬಿದ್ದು, ಅಡಿಕೆ ಮರಗಳಿಗೆ ಹಾನಿಯಾಗಿದೆ. ಸುಮಾರು 8-9 ಅಡಿಕೆ ಮರ, 2 ತೆಂಗಿನ ಮರದ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದೆ.
ವಿಟ್ಲ, ಮಾಣಿ ಸಹಿತ ವಿವಿಧೆಡೆ ಮಳೆ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಮಾಣಿ ಗ್ರಾಮದ ಸರಕಾರಿ ಶಾಲೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದೆ.
ಇದನ್ನೂ ಓದಿ:ಭಾರತದ 16 ಮಂದಿ ಮೀನುಗಾರರನ್ನು ವಾಪಸ್ ಕರೆಯಿಸಿಕೊಳ್ಳಲು ಭಾರತ ಬದ್ಧ: ಕೇಂದ್ರ
ಜಿಲ್ಲೆಯ ಉಳಿದ ಭಾಗಗಳಲ್ಲಿ ಮಳೆ ಬಂದ ಬಗ್ಗೆ ವರದಿಯಾಗಿಲ್ಲ.ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ದಿನದ ಉಷ್ಣಾಂಶವು ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿತು.ಮುಂದಿನ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.