Advertisement

ದಕ್ಷಿಣ ಕನ್ನಡ : ಸಾಕ್ಷರತೆ ಚಟುವಟಿಕೆಗೆ ಮತ್ತೆ ಚಾಲನೆ

10:16 AM Oct 20, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2009ರಿಂದ ಸ್ಥಗಿತಗೊಂಡಿದ್ದ ಸಾಕ್ಷರತಾ ಚಟುವಟಿಕೆಗೆ ಮತ್ತೆ ಚಾಲನೆ ನೀಡಲಾಗಿದೆ. ಅಕ್ಷರ ವಂಚಿತರ ಸಮೀಕ್ಷೆ ಆರಂಭಗೊಂಡಿದ್ದು, ಈ ವರ್ಷ ಒಟ್ಟು 11,236 ಮಂದಿಗೆ ಅಕ್ಷರಾಭ್ಯಾಸ ಪ್ರಾರಂಭಿಸಿ ಸಾಕ್ಷರರಾಗಿ ಪರಿವರ್ತಿಸುವ ಗುರಿ ನೀಡಲಾಗಿದೆ. 

Advertisement

ಸಾಕ್ಷರತಾ ಕಾರ್ಯಕ್ರಮದಡಿ ಚಾಲನೆಯಲ್ಲಿದ್ದ ಮುಂದುವರಿಕೆ ಶಿಕ್ಷಣವನ್ನು ಸರಕಾರದ ಆದೇಶದಂತೆ 2009ರ ಮಾರ್ಚ್‌ನಲ್ಲಿ ನಿಲ್ಲಿಸಲಾಗಿತ್ತು. ಆಂದೋಲನದ ಪ್ರೇರಕರು, ಸಂಯೋಜಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಸಮೀಕ್ಷೆ ನಡೆಸಿ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭಿಸಲು ಸರಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 6ರಿಂದ  90 ವರ್ಷದೊಳಗಿನ 2.15 ಲಕ್ಷ ಅಕ್ಷರ ವಂಚಿತರಿದ್ದಾರೆ. ಪ್ರಸ್ತುತ 15ರಿಂದ 50 ವರ್ಷ ವಯಸ್ಸಿನ ಅಕ್ಷರ ವಂಚಿತರ ಸಮೀಕ್ಷೆ ಆಗುತ್ತಿದ್ದು, ನಿರಕ್ಷರಿಗಳಿಗೆ ಬೋಧನೆ, ಮೌಲ್ಯ ಮಾಪನ ನಡೆಯಲಿದೆ. 

ಲೋಕ ಶಿಕ್ಷಣ ಇಲಾಖೆಯ ಮಾರ್ಗ ಸೂಚಿಯಂತೆ ಅಕ್ಷರ ವಂಚಿತರ ಪೂರ್ಣ ಕಲಿಕೆ ಪ್ರಕ್ರಿಯೆಗೆ ತಲಾ 300 ರೂ. ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಬೋಧಕರಿಗೆ ಓರ್ವ ಕಲಿಕಾರ್ಥಿಗೆ 90 ರೂ., ಸಂಭಾವನೆ, ಕಲಿಸುವ ಸ್ವಯಂಸೇವಾ ಸಂಸ್ಥೆಗೆ ತಲಾ 10 ರೂ., ಮೌಲ್ಯಮಾಪನ, ಪ್ರಮಾಣ ಪತ್ರ, ಕಲಿಕೆ- ಬೋಧನ ಸಾಮಗ್ರಿ ಮುಂತಾದ ವೆಚ್ಚಗಳು ಒಳಗೊಂಡಿವೆ. ಅಕ್ಷರ ಕಲಿಕೆ ಕಾರ್ಯವನ್ನು ಈ ಹಿಂದೆ ಸಾಕ್ಷರತಾ ಕಾರ್ಯದಲ್ಲಿ ತೊಡಗಿಸಿಕೊಂಡ ನೋಂದಾಯಿತ ಸ್ವಯಂಸೇವಾ ಸಂಘಗಳ ಮೂಲಕವೇ ನಡೆಸಬೇಕಾಗಿದೆ. ಜಿಲ್ಲೆಯ 11,236 ಮಂದಿಗೆ 33,71,000 ರೂ. ಅನುದಾನ ನಿಗದಿಪಡಿಸಲಾಗಿದೆ. ಆಸಕ್ತ ನೋಂದಾಯಿತ ಸ್ವಯಂಸೇವಾ ಸಂಘಗಳು ಜಿಲ್ಲಾ ವಯಸ್ಕರ ಶಿಕ್ಷಣ ಕಚೇರಿಯನ್ನು ಅ. 26ರ ಒಳಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಇಲಾಖೆ ಪ್ರಕಟನೆ ಹೊರಡಿಸಿದೆ. 

2011ರ ಜನಗಣತಿಯಂತೆ
2.15 ಲಕ್ಷ ಅಕ್ಷರ ವಂಚಿತರು

2011ರ ಜನಗಣತಿಯಲ್ಲಿ ಜಿಲ್ಲೆಯ ಒಟ್ಟು 20,89,649 ಜನಸಂಖ್ಯೆಯಲ್ಲಿ 6ರಿಂದ 90 ವರ್ಷದೊಳಗಿನ ಒಟ್ಟು 2,15,029 ಮಂದಿ ಅಕ್ಷರ ವಂಚಿತರಿದ್ದರು. ಗ್ರಾಮಾಂತರ ಪ್ರದೇಶದಲ್ಲಿ 1,44,171, ನಗರದಲ್ಲಿ 70,858 ಮಂದಿ ಇದ್ದರು. ಮಂಗಳೂರು ತಾಲೂಕಿನ ಒಟ್ಟು 9,94,602 ಜನಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿ 52,194 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 24,311 ಸೇರಿ 76,505 ಅಕ್ಷರ ವಂಚಿತರನ್ನು ಗುರುತಿಸಲಾಗಿತ್ತು. ಬಂಟ್ವಾಳ- 47,001, ಬೆಳ್ತಂಗಡಿ- 38,018, ಪುತ್ತೂರು- 36,085, ಸುಳ್ಯ- 17,420 ಮಂದಿ ಕಂಡುಬಂದಿದ್ದರು.

15ರಿಂದ 50 ವರ್ಷದೊಳಗಿನ ಅಕ್ಷರ ವಂಚಿತರ ಸಮೀಕ್ಷೆ ಆರಂಭಗೊಂಡಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದಲ್ಲಿ 2011ರಲ್ಲಿ 1,800 ಅಕ್ಷರ ವಂಚಿತರು ಕಂಡುಬಂದಿದ್ದರೆ ಈಗಿನ ಸಮೀಕ್ಷೆಯಲ್ಲಿ 380 ಮಂದಿ ಅಕ್ಷರ ವಂಚಿತರು ಇರುವುದು ಪತ್ತೆಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

ಜಿಲ್ಲೆಯಲ್ಲಿ ಸಾಕ್ಷರತಾ ಚಟುವಟಿಕೆ ಮತ್ತೆ ಆರಂಭಗೊಂಡಿದೆ. 15ರಿಂದ 50 ವರ್ಷ ವಯೋಮಾನದ ಅಕ್ಷರ ವಂಚಿತರ ಸಮೀಕ್ಷೆ, ಬೋಧನೆ, ಮೌಲ್ಯಮಾಪನ ನಡೆಯಲಿದ್ದು, ಆಸಕ್ತ ನೋಂದಾಯಿತ ಸ್ವಯಂ ಸೇವಾ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸುಧಾಕರ್‌ ಕೆ., ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲೋಕ ಶಿಕ್ಷಣ ನಿರ್ದೇಶನಾಲಯದ ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರ “ಬಾಳಿಗೆ ಬೆಳಕು’ ಪಠ್ಯಪುಸ್ತಕ ಸಿದ್ಧಪಡಿಸಿದೆ. ಸಾಮಾನ್ಯವಾಗಿ ಶಾಲೆಯಲ್ಲಿ “ಅಕ್ಷರ- ಶಬ್ದ- ವಾಕ್ಯ’ ಕಲಿಕೆಯ ಕ್ರಮವಾಗಿರುತ್ತದೆ. ಆದರೆ ಸಾಕ್ಷರತಾ ಯೋಜನೆಯಲ್ಲಿ ಇದು ತಿರುವು ಮುರುವು ಆಗಿರುತ್ತದೆ. ಆರು ತಿಂಗಳು ಕಲಿಕೆ ಅವಧಿಯಲ್ಲಿ ದಿನಕ್ಕೆ 2 ಗಂಟೆ ಕಲಿಸಲಾಗುತ್ತದೆ. ಓದು, ಬರೆಹ ಹಾಗೂ ಲೆಕ್ಕಾಚಾರ ಎಂದು ವಿಂಗಡಿಸಲಾಗಿದ್ದು, ಪ್ರತಿಯೊಂದಕ್ಕೂ ತಲಾ 50ರಂತೆ ಒಟ್ಟು 150 ಅಂಕಗಳಿರುತ್ತವೆ. ಶೇ.40 ಅಂಕ ಗಳಿಸಿದರೆ ಉತ್ತೀರ್ಣ ಎಂದು ಪರಿಗಣಿಸಲಾಗುತ್ತದೆ. 

ಕೇಶವ ಕುಂದರ್‌ 

Advertisement

Udayavani is now on Telegram. Click here to join our channel and stay updated with the latest news.

Next