Advertisement

ಕೋವಿಡ್ 19 ವೈರಸ್ ನಿಂದ ಮಹಿಳೆ ಮೃತಪಟ್ಟ ಪ್ರಕರಣ: ಒಂದೇ ಮನೆಯ 9 ಮಂದಿಗೆ ಹೋಂ ಕ್ವಾರಂಟೈನ್‌

01:08 AM Apr 22, 2020 | Hari Prasad |

ಬೆಳ್ತಂಗಡಿ: ಬಂಟ್ವಾಳದಲ್ಲಿ ಕೋವಿಡ್ 19 ವೈರಸ್ ನಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಆರೈಕೆ ಮಾಡುತ್ತಿದ್ದ ವಾರ್ಡ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶುಶ್ರೂಷಕಿ ಸಂಪರ್ಕದಲ್ಲಿದ್ದ ಪುದುವೆಟ್ಟು ಗ್ರಾಮದ ಸಾಮೇದಕಲಪುವಿನ ಒಂದೇ ಮನೆಯ ಮಕ್ಕಳು ಸೇರಿದಂತೆ 9 ಮಂದಿಯನ್ನು ಎ. 21ರಂದು ನೆರಿಯ ಆಸ್ಪತ್ರೆಯ ವೈದ್ಯರ ತಂಡ ಮುನ್ನೆಚ್ಚರಿಕಾ ಕ್ರಮವಾಗಿ ಹೋಂಕ್ವಾರಂಟೈನ್‌‍ಗೆ ಒಳಪಡಿಸಿದೆ.

Advertisement

ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಆರೈಕೆ ಮಾಡಿದ್ದ ವಾರ್ಡ್‌ನಲ್ಲಿದ್ದ ನರ್ಸ್‌ ಒಬ್ಬರ ಗಂಡನ ಮನೆ ಪುದುವೆಟ್ಟಿನ ಸಾಮೇದಕಲಪಾಗಿದ್ದು, ಅವರು ಪತಿಯ ಮನೆಗೆ ಬಂದು ಹೋಗಿದ್ದರು. ಇದೀಗ ಸೋಂಕಿತ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ನರ್ಸ್‌ ಅವರನ್ನು ಬಂಟ್ವಾಳದಲ್ಲೇ ಹೋಂ ಕ್ವಾರಂಟೈನ್‌‍ಗೆ ಒಳಪಡಿಸಲಾಗಿದೆ.

ಇತ್ತ ನರ್ಸ್‌ ಬಂದು ಹೋದ ಪತಿಯ ಮನೆ ಪುದುವೆಟ್ಟಿನ ಸಾಮೇದಕಲಪುವಿನ ಒಂದೇ ಕುಟುಂಬದ 9 ತಿಂಗಳ ಮಗು, 3 ಮಂದಿ ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೋಂ ಕ್ವಾರಂಟೈನ್‌‍ಗೆ ಒಳಪಡಿಸಿದ್ದಾರೆ.

ತಾಲೂಕಿನಿಂದ ಈವರೆಗೆ ಸೋಂಕು ಶಂಕೆಯಲ್ಲಿ 84 ಮಂದಿಯ ಸ್ಯಾಂಪಲ್‌ ಹೋಗಿದ್ದು, ಎಲ್ಲ ವರದಿಗಳೂ ನೆಗೆಟಿವ್‌ ಬಂದಿವೆ. ಮಾ. 10ರಿಂದ 234 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದು ಇದರಲ್ಲಿ 230 ಮಂದಿಯ 28 ದಿನ ಪೂರ್ಣಗೊಂಡಿದೆ. 4 ಮಂದಿ ಉಳಿದುಕೊಂಡಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ತಿಳಿಸಿದ್ದಾರೆ.

ಸುಬ್ರಹ್ಮಣ್ಯದ ಸಂಬಂಧಿಕರ ಮನೆಗೆ ಮೈಸೂರು ಯುವಕ : ಮನೆಯ ಐವರಿಗೆ ಕ್ವಾರಂಟೈನ್‌!
ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಸಂಬಂಧಿಕರ ಮನೆಗೆ ಮೈಸೂರಿನ ಯುವಕನೋರ್ವ ಆಗಮಿಸಿದ ಕಾರಣ ಮನೆಮಂದಿಯನ್ನು ಕ್ವಾರಂಟೈನಲ್ಲಿರುವಂತೆ ಸೂಚಿಸಲಾಗಿದೆ. ಮೈಸೂರಿನಲ್ಲಿ ಉದ್ಯೋಗದಲ್ಲಿದ್ದ ಯುವಕ ಸುಳ್ಯದ ತನ್ನ ಮನೆಗೆ ಬಂದಿದ್ದು, ಅಲ್ಲಿಂದ ಸಂಬಂಧಿಕರ ಮನೆ ಇರುವ ಕುಕ್ಕೆಯ ಕಾಶಿಕಟ್ಟೆಗೆ ಆಗಮಿಸಿದ್ದರು.

Advertisement

ಇದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿತ್ತು. ವಿಷಯ ತಿಳಿದ ಸ್ಥಳೀಯಾಡಳಿತ ವಿಚಾರಣೆ ನಡೆಸಿ ಆಗಮಿಸಿದ ಯುವಕ ಹಾಗೂ ಉಳಿದುಕೊಂಡಿರುವ ಮನೆ ಮಂದಿ ಎಲ್ಲರಿಗೂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿ, ಸಾರ್ವಜನಿಕವಾಗಿ ತಿರುಗಾಡದಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಲೈನ್‌ಮನ್‌ಗೂ ಕ್ವಾರಂಟೈನ್‌
ಹರಿಹರ ಪಳ್ಳತ್ತಡ್ಕ ವ್ಯಾಪ್ತಿಯ ಲೈನ್‌ಮನ್‌ ಓರ್ವರು ತನ್ನ ಊರು ಮೈಸೂರಿಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಲು ಮರಳಿದ್ದರು. ವಿಚಾರ ತಿಳಿದ ಸ್ಥಳೀಯರು ಆತಂಕದಿಂದ ಪಂಚಾಯತ್‌ ಗಮನಕ್ಕೆ ತಂದರು. ಬಳಿಕ ಲೈನ್‌ಮನ್‌ ಅವರನ್ನೂ ಸುಬ್ರಹ್ಮಣ್ಯದ ದೇವಸ್ಥಾನದ ವಸತಿ ಗೃಹದಲ್ಲಿ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಯಿತು.

ಡಿಸಿ ಕಚೇರಿ ಸಿಬಂದಿಗೆ ಕ್ವಾರಂಟೈನ್‌
ಕೊರೊನಾದಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ದೂರದ ಸಂಬಂಧಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಸಿಬಂದಿಯನ್ನು ಮಹಿಳೆ ದಾಖಲಾಗಿದ್ದ ಆಸ್ಪತ್ರೆಗೆ ಹೋಗಿದ್ದರು ಎಂಬ ಕಾರಣಕ್ಕೆ ಕ್ವಾರಂಟೈನ್‌ ಇಡಲಾಗಿದೆ. ಆ ಸಿಬಂದಿಯು ಎ. 18ರಂದು ವೆನ್ಲಾಕ್‌ ಆಸ್ಪತ್ರೆಗೆ ತೆರಳಿ ಮೃತ ಮಹಿಳೆ ಪುತ್ರನನ್ನು ದೂರದಿಂದಲೇ ಭೇಟಿ ಮಾಡಿ ಆಕೆಯ ಯೋಗಕ್ಷೇಮ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಇದೀಗ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಿಬಂದಿಯನ್ನು ಕ್ವಾರಂಟೈನ್‌ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಮಾಡಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು, ನಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಸಿಬಂದಿಯೊಬ್ಬರು ವೆನ್ಲಾಕ್‌ ಆಸ್ಪತ್ರೆಗೆ ಭೇಟಿ ನೀಡಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಈಗ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾವಚಿತ್ರ ಪ್ರಸಾರ: ಪ್ರಕರಣ ದಾಖಲು
ಕೋವಿಡ್ 19 ವೈರಸ್ ಸೋಂಕು ದೃಢಪಟ್ಟು ಮೃತಪಟ್ಟ ಬಂಟ್ವಾಳ ಕಸ್ಬಾ ಗ್ರಾಮದ ಮಹಿಳೆ ಹಾಗೂ ಅವರ ಗಂಡನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ವಿಲಿಯಂ ಪಿಂಟೋ ಹಾಗೂ ಮತ್ತೋರ್ವ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

116 ವಾಹನಗಳು ಮುಟ್ಟುಗೋಲು
ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 116 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಮಂಗಳವಾರ ಮುಟ್ಟುಗೋಲು ಹಾಕಿದ್ದಾರೆ.
ಈ ಪೈಕಿ 89 ದ್ವಿಚಕ್ರ ವಾಹನ, 9 ತ್ರಿಚಕ್ರ ವಾಹನ ಹಾಗೂ 18 ನಾಲ್ಕು ಚಕ್ರಗಳ ವಾಹನಗಳಾಗಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next