Advertisement

ಕೋವಿಡ್ :ಸಂಭಾವ್ಯ 3ನೇ ಅಲೆ ಎದುರಿಸಲು ದ.ಕ. ಜಿಲ್ಲಾಡಳಿತ ಸರ್ವ ಸನ್ನದ್ಧ:ಡಾ|ರಾಜೇಂದ್ರ ಕೆ.ವಿ

06:27 PM Aug 11, 2021 | Team Udayavani |

ಮಂಗಳೂರು: ಕೊರೊನಾ ಸೋಂಕಿನ ಸಂಭಾವ್ಯ 3ನೇ ಅಲೆಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ತಿಳಿಸಿದರು.

Advertisement

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಭಾವ್ಯ ಕೊರೊನಾ 3 ನೇ ಅಲೆಗೆ ಸಂಬಂಧಿಸಿ ದ.ಕ. ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಕೊರೊನಾ 3ನೇ ಅಲೆಯು ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದ. ಕ. ಜಿಲ್ಲೆಯ 86 ಮಂದಿ ಮಕ್ಕಳ ತಜ್ಞರೊಂದಿಗೆ ನಿರಂತರ ಸಭೆಗಳನ್ನು ನಡೆಸಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಇದೇವೇಳೆ ಜಿಲ್ಲಾಸ್ಪತ್ರೆಯಾದ ವೆನ್ಲಾಕ್ ನಲ್ಲಿ 32 ಬೆಡ್‌ಗಳ ಹೈಟೆಕ್‌ ಐಸಿಯು ಸಿದ್ಧಗೊಂಡಿದ್ದು, ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಉದ್ಘಾಟಿಸಲಿದ್ದಾರೆ ಎಂದರು.

ಜಿಲ್ಲಾಡಳಿತವು ಹೊಸತಾಗಿ ಖರೀದಿಸಿದ ವೆಂಟಿಲೇಟರ್‌ಗಳ ಪೈಕಿ ಶೇ.90ರಷ್ಟು ವೆಂಟಿಲೇಟರ್‌ಗಳನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗಿನ ಎಲ್ಲಾ ವಯೋಮಿತಿಯವರಿಗೂ ಬಳಕೆ ಮಾಡಬಹುದಾಗಿದೆ. ಹೈಟೆಕ್‌ ಬೆಡ್‌ಗಳ ಐಸಿಯುವಿನಲ್ಲಿ ಶೆ.50 ರಷ್ಟನ್ನು ಮಕ್ಕಳಿಗಾಗಿ ಕಾದಿರಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ :ಅವಳಿ ಸಹೋದರಿಯರ ಅನನ್ಯ ಸಾಧನೆ; ನೋವಲ್ಲೂ ಪರೀಕ್ಷೆ ಬರೆದು ಶಾಲೆಗೆ ಪ್ರಥಮ

Advertisement

ದಸರಾವರೆಗೆ ಸಾರ್ವಜನಿಕ ಸೇರುವಿಕೆಗೆ ಅವಕಾಶವಿಲ್ಲ:
ಮುಂಬರುವ ದಸರಾ ಹಬ್ಬದವರೆಗೆ ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಹಬ್ಬ ಹರಿದಿನಗಳ ಆಚರಣೆಗೆ ಅವಕಾಶವಿರುವುದಿಲ್ಲ ಎಂದರು.

ನಾಗರ ಪಂಚಮಿಯ ದಿನದಂದು ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶ ಇಲ್ಲ. ಸಾಂಪ್ರದಾಯಿಕವಾಗಿ ದೇವಸ್ಥಾನಗಳ ಅರ್ಚಕರಿಂದ ನಡೆಯುವ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ನಾಗಬನ ಹಾಗೂ ಕುಟುಂಬದ ಮನೆಗಳಲ್ಲಿ ಆಚರಿಸಲಾಗುವ ಪೂಜೆಗಳನ್ನು ಕೊರೊನಾ ಮಾರ್ಗಸೂಚಿಯೊಂದಿಗೆ ಯಾವುದೇ ರೀತಿಯಲ್ಲಿ ಜನ ಸಂದಣಿಗೆ ಆಸ್ಪದವಾಗದಂತೆ ಜಾಗೃತಿಯೊಂದಿಗೆ ಸ್ಥಳೀಯ ಆಡಳಿಳಿತದ ಪಿಡಿಒ ಮತ್ತಿತರ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆಯೂ ಸರಳ
ಸ್ವಾತಂತ್ರ್ಯ ದಿನಾಚರಣೆಯನ್ನು ಕೂಡಾ ನಿಗದಿತ ಸಿಬಂದಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ನಡೆಸಲಾಗುತ್ತದೆ. ಕೃಷ್ಣ ಜನ್ಮಾಷ್ಠಮಿ, ಗಣೇಶ ಹಬ್ಬದ ಸಂದರ್ಭದಲ್ಲಿಯೂ ಸಾರ್ವಜನಿಕವಾಗಿ ಚಪ್ಪರ, ಶಾಮಿಯಾನ ಹಾಕಿಕೊಂಡು, ಮೆರವಣಿಗೆಯೊಂದಿಗೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡದಿರಲು ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಕೊರೊನಾ ನಿರೋಧಕ ಲಸಿಕೆ ನೀಡಿಕೆಗೆ ಹೆಚ್ಚು ಆದ್ಯತೆ ನೀಡಿ ಜಿಲ್ಲಾಡಳಿತ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಗೆ ಪೂರೈಕೆ ಆಗುತ್ತಿರುವ ಲಸಿಕೆಯ ಪ್ರಮಾಣದಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಹೆಚ್ಚಿನ ಡೋಸ್‌ ಪೂರೈಕೆಯಾದಲ್ಲಿ ಸದ್ಯದ ಬೇಡಿಕೆಯನ್ನು ಸರಿದೂರಿಸಲು ಸಾಧ್ಯವಾಗುವುದು. ಮುಖ್ಯಮಂತ್ರಿಯವರು ಕೂಡಾ ಗಡಿ ಜಿಲ್ಲೆಗಳಿಗೆ ಲಸಿಕೆ ಪೂರೈಕೆಗೆ ಆದ್ಯತೆ ನೀಡುವ ಭರವಸೆ ನೀಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯ ಗಮನ ಸೆಳೆಯುತ್ತಿದ್ದಾರೆ ಎಂದರು.

ಶಾಲೆ- ಕಾಲೇಜು ಆರಂಭ ವಿಳಂಬ ಸಾಧ್ಯತೆ
ಶಾಲಾ ಕಾಲೇಜುಗಳಗಳಲ್ಲಿ ತರಗತಿ ಆರಂಭದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ಮಾಹಿತಿ ನೀಡಿದ್ದಾರೆ. ಆದರೆ ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭವಾದರೂ ದ.ಕ. ಸೇರಿದಂತೆ ಕೊರೊನಾ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ವಿಜಯ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

ಆ.15ರಿಂದ ಮತ್ತೆ ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಬಂದಿಲ್ಲ
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದು ನಿಜ. ಆದರೆ ಅತ್ಯಂತ ಸುಸಜ್ಜಿತ ಆಧುನಿಕ ಆಸ್ಪತ್ರೆ ಸಹಿತ ಆರೋಗ್ಯ ಮೂಲ ಸೌಲಭ್ಯಗಳು, ಕೊರೊನಾ ಹೆಚ್ಚಿರುವ ಕಾಸರಗೋಡು ಸೇರಿದಂತೆ ಕೇರಳದ ಜತೆ ದ.ಕ. ಜಿಲ್ಲೆ ಗಡಿ ಹಂಚಿಕೊಂಡಿರುವುದರಿಂದ ಸಹಜವಾಗಿ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಆದರೆ ಜಿಲ್ಲೆಯಲ್ಲಿ ದಿನಂಪ್ರತಿ ಕೊರೊನಾ ಟೆಸ್ಟ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮಂಗಳವಾರ ಒಂದೇ ದಿನ 9900 ಮಂದಿಗೆ ಟೆಸ್ಟ್‌ ಮಾಡಲಾಗಿದೆ. ಅದೇನಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಆ. 15ರಿಂದ ಮತ್ತೆ ಲಾಕ್‌ಡೌನ್‌ ಮಾಡುವಂತಹ ಪರಿಸ್ಥಿತಿ ಇಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next