Advertisement

Dakshina Kannada; ರೈತರ ಮನೆಯಿಂದಲೇ ಹಾಲು ಸಂಗ್ರಹ!

12:20 AM Jan 28, 2024 | Team Udayavani |

ಮಂಗಳೂರು: ಹೈನುಗಾರಿಕೆ ನಿರ್ವಹಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಲಭ್ಯ ಹಾಲನ್ನು ಡಿಪೋಗೆ ಸರಬರಾಜು ಮಾಡುವುದೂ ಸವಾಲಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಮನೆ ಬಾಗಿಲಿನಿಂದಲೇ ಹಾಲು ಸಂಗ್ರಹಿಸುವ ಕಾರ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮುಂದಾಗಿದೆ.

Advertisement

ಹಳ್ಳಿಗಳಲ್ಲಿ ಹೈನುಗಾರಿಕೆಗೆ ಅವಕಾಶಗಳಿದ್ದರೂ ಡಿಪೋಗೆ ಹಾಲು ಕೊಂಡೊಯ್ಯಲು ವ್ಯವಸ್ಥೆ ಇಲ್ಲ. ಹತ್ತಾರು ಕಿ.ಮೀ. ದೂರದಲ್ಲಿ ಡಿಪೋಗಳಿರುವ ಕಾರಣ ರೈತರು ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿ ಕೊಳ್ಳಲು ನಿರುತ್ಸಾಹ ತೋರು ತ್ತಿದ್ದಾರೆ. ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಈ ಸಂಕಷ್ಟ ಅರಿತುಕೊಂಡ ಒಕ್ಕೂಟ ಮನೆ ಬಾಗಿಲಿಂದಲೇ ಹಾಲು ಸಂಗ್ರಹಿಸುವ ಉಪಕ್ರಮವೊಂದನ್ನು ಸಂಘಗಳ ಮೂಲಕವೇ ಆರಂಭಿಸಿದೆ.

ಪ್ರಾಯೋಗಿಕ ಆರಂಭ ಯಶಸ್ವಿ
ದ.ಕ. ಜಿಲ್ಲೆಯ ವಾಮದಪದವು ಹಾಗೂ ಉಡುಪಿ ಜಿಲ್ಲೆಯ ಕಿರಿಮಂಜೇಶ್ವರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು ಯಶಸ್ಸು ಸಿಕ್ಕಿದೆ. ಈ ಭಾಗಗಳಲ್ಲಿ ಹಾಲು ಸಂಗ್ರಹ ಹೆಚ್ಚಳವಾಗಿದೆ. ಜತೆಗೆ ಹೊಸ ಸದಸ್ಯರು ಸೇರ್ಪಡೆಯಾಗುತ್ತಿದ್ದಾರೆ. ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದ ಹಿನ್ನೆಲೆಯಲ್ಲಿ ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಕ್ಕೂಟ ಸರ್ವೇ ನಡೆಸಿದೆ. ಮನೆ ಬಾಗಿಲಿನಿಂದ ಹಾಲು ಸಂಗ್ರಹಕ್ಕೆ ಹೆಚ್ಚಿನ ರೈತರಿಂದ ಆಗ್ರಹ ಕೇಳಿಬರುತ್ತಿದ್ದು, ಹಂತ ಹಂತವಾಗಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಆಯಾ ಹಾಲು ಉತ್ಪಾದಕ ಸಂಘಗಳೇ ವಾಹನವನ್ನು ಖರೀದಿಸಿ ಹಾಲು ಖರೀದಿಸುವಂತೆ ಒಕ್ಕೂಟ ಪ್ರೋತ್ಸಾಹ ನೀಡುತ್ತಿದೆ ಎಂದು ಒಕ್ಕೂಟದ ಪ್ರಮುಖರು ತಿಳಿಸಿದ್ದಾರೆ.

ವ್ಯವಸ್ಥೆ ಹೇಗೆ?
ಹಾಲು ಸಂಗ್ರಹ ವಾಹನ ಎಲ್ಲ ವ್ಯವಸ್ಥೆಗಳನ್ನು ಹೊಂದಿದೆ. ಮಾಪನ ಯಂತ್ರ, ಗುಣಮಟ್ಟ ತಪಾಸಣೆಗೆ ಈಎಂಟಿ ಹಾಗೂ ಪಾತ್ರೆಗಳನ್ನು ಸಮರ್ಪಕವಾಗಿ ಇರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆ 2 ಬಾರಿ ವಾಹನಗಳಲ್ಲಿ ಸಂಗ್ರಹಿಸಿ ಸಂಘದ ಮುಖ್ಯ ಕಚೇರಿಗೆ ತಂದು ಅಲ್ಲಿಂದ ರವಾನಿಸಲಾಗುತ್ತದೆ. ವರ್ಷದ ಹಿಂದೆ ವಾಮದಪದವಿನಲ್ಲಿ ಈ ವ್ಯವಸ್ಥೆ ಆರಂಭಗೊಂಡಿದ್ದು, ನಿತ್ಯ 800 ಲೀ. ಸಂಗ್ರಹಿಸಲಾಗುತ್ತಿದೆ. ಕಿರಿಮಂಜೇಶ್ವರದಲ್ಲಿ ತಿಂಗಳ ಹಿಂದೆ ಸಂಗ್ರಹಕ್ಕೆ ಮುಂದಾಗಿದ್ದು ನಿತ್ಯ620 ಲೀ. ಸಂಗ್ರಹಿಸಲಾಗುತ್ತಿದೆ. ಆರಂಭದಿಂದ ಇಂದಿನ ಪ್ರಮಾಣ ಗಮನಿಸಿದಾಗ ಹೆಚ್ಚಳವಾಗಿದೆ ಎಂದು ಸಂಘದವರ ಮಾತು.

ಮನೆ ಬಾಗಿಲಿನಿಂದ ಹಾಲು ಸಂಗ್ರಹಿಸುವುದರಿಂದ ರೈತರಿಗೆ ಅನುಕೂಲವಾಗಿದ್ದು, ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಹಾಲು ಸಂಗ್ರಹ ಪ್ರಮಾಣವೂ ವೃದ್ಧಿಯಾಗಿದೆ. ಹತ್ತಾರು ಕಿ.ಮೀ. ಪ್ರಯಾಣಿಸಿ ಡಿಪೋಗೆ ಹಾಲು ಹಾಕಬೇಕಾದ ಅನಿವಾರ್ಯ ಈಗ ನಿವಾರಣೆಯಾಗಿದೆ.
– ಸುಬ್ಬಣ್ಣ ಶೆಟ್ಟಿ , ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ

Advertisement

ರೈತರ ಬಳಿಗೆ ತೆರಳಿ ಸಂಗ್ರಹಿಸುವುದರಿಂದ ಹಾಲಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಜತೆಗೆ ಹೆಚ್ಚು ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಒಂದೂವರೆ ಲಕ್ಷ ಲೀ. ಹಾಲು ಕೊರತೆಯಿದ್ದು, ಅದನ್ನು ಸರಿದೂಗಿಸಲು ಇದೊಂದು ಉತ್ತಮ ಮಾರ್ಗೋಪಾಯ. ಮುಂದಿನ ದಿನಗಳಲ್ಲಿ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು.
– ಸುಚರಿತ ಶೆಟ್ಟಿ , ಅಧ್ಯಕ್ಷರು, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next