ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮಂಗಳವಾರವೂ ಮುಂದುವರಿಯುವ ಸಾಧ್ಯತೆ ಇದೆ. ಈ ಕುರಿತಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರತೀದಿನ ತಲಾ 200 ಮಿ.ಮಿ. ಮಳೆಯಾಗುವ ಸಾಧ್ಯತೆಗಳ ಕುರಿತಾಗಿ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ
ಜಿಲ್ಲಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜು.23ರ ಮಂಗಳವಾರದಂದು ಒಂದು ದಿನದ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲೂ ತೀವ್ರ ಮಳೆಯಾಗುತ್ತಿರುವ ಕಾರಣದಿಂದ ಇಲ್ಲಿನ ಅಂಗನವಾಡಿ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ಒಂದು ದಿನದ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಬಿರುಸಿನ ಗಾಳಿಮಳೆಯ ಪರಿಣಾಮ
ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲೆರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರೊಫೆಷನಲ್ ಕಾಲೇಜುಗಳ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಂಗಳವಾರ ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಅಂಗನವಾಡಿಗಳಿಗೂ ಈ ರಜೆ ಅನ್ವಯವಾಗಿದೆ ಎಂದವರು ಹೇಳಿದರು.
ಇನ್ನುಳಿದಂತೆ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗಿದೆ.
– ನೀರು ಇರುವ ತಗ್ಗುಪ್ರದೇಶ, ಕೆರೆ, ನದಿ ತೀರ, ಸುಮದ್ರತೀರಕ್ಕೆ ಮಕ್ಕಳು ಹೋಗದಂತೆ ಜಾಗೃತೆ ವಹಿಸುವುದು.
– ಮೀನುಗಾರರಿಗೆ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ.
– ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೂ ಕಡ್ಡಾಯವಾಗಿ ಕೆಂದ್ರಸ್ಥಾನದಲ್ಲಿ ಇರತಕ್ಕದ್ದು.
– ಪ್ರವಾಸಿಗರು/ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಎಚ್ಚರವಹಿಸುವುದು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು:
24×7 ಕಂಟ್ರೋಲ್ ರೂಂ: 1077
ವಾಟ್ಸ್ಯಾಪ್ ಸಂಖ್ಯೆ: 9483908000