ಧಾರವಾಡ: ಗರಗದ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗರಗದಲ್ಲಿ ಹಾಲು ಕರೆಯುವ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಯಾಗಿದ್ದ ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಮಾತನಾಡಿ, ಪ್ರತಿಯೊಬ್ಬರಿಗೂ ಹೈನುಗಾರಿಕೆ ಉಪಜೀವನದ ಆಧಾರ ಸ್ಥಂಭವಾಗಿದೆ. ಇದನ್ನು ಕೃಷಿ ಜತೆಗೆ ಉಪಕಸುಬಾಗಿ ಮಾಡಿಕೊಂಡು ಜೀವನದ ಆರ್ಥಿಕತೆ ವೃದ್ಧಿಸಿಕೊಳ್ಳಬೇಕು ಎಂದರು.
ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ|ಉಮೇಶ ಕೊಂಡಿ, ಪಶುವೈದ್ಯ ಸೇವಾ ಇಲಾಖೆಯ ಗರಗದ ಪಶು ವೈದ್ಯಾಧಿಕಾರಿ ಡಾ|ರಮೇಶ ಹೆಬ್ಬಳ್ಳಿ ಮಾತನಾಡಿದರು.
ಸಹಾಯಕ ನಿರ್ದೇಶಕ ಡಾ|ಶ್ರೀಕಾಂತ ಅರಗಂಜಿ, ತಾಪಂ ಸದಸ್ಯೆ ಪಾರ್ವತಿ ದಂಡಿನ, ಡಾ|ಎಚ್. ಆರ್. ಬಾಲನಗೌಡ್ರ, ಡಾ|ಆನಂದ ತಡೆಪ್ಪನವರ, ಡಾ|ಪ್ರಕಾಶ ಬೆನ್ನೂರ, ಡಾ|ಅಪ್ತಾಭ ಯಲ್ಲಾಪೂರ, ಡಾ|ತಿಪ್ಪಣ್ಣ ರಾಂಪೂರೆ, ಡಾ|ಶಂಭು ಬೆನ್ನೂರ, ಡಾ|ಶರಣಬಸವ ಸಜ್ಜನ, ಡಾ|ಕೃಷ್ಣಾಜಿ ರಾಠೊಡ್, ಕುಂತಿನಾಥ ಇಜಾರಿ, ಶಿವಲಿಂಗ ಕಾಶಿರ್ದಾ, ನಿಂಗಪ್ಪ ಶೀಗಿಹಳ್ಳಿ, ಮಾರ್ತಾಂಡಪ್ಪ ಕತ್ತಿ, ಲಕ್ಷ್ಮೀ ಕಾಶಿಗಾರ, ಶಿವಾನಂದ ರಾಮಣ್ಣವರ, ಶ್ರೀದೇವಿ ಬೆಳವಡಿ, ಎಸ್.ಎಮ್.ದೊಡಮನಿ, ಪಾಶ್ವನಾಥ ಹೊಸಮನಿ ಇದ್ದರು.
ಸ್ಪರ್ಧೆಯ ಫಲಿತಾಂಶ: ಆಕಳು ಮತ್ತು ಎಮ್ಮೆಗಳ ಹಾಲು ಹಿಂಡುವ ಸ್ಪರ್ಧೆಗೆ ಗರಗ, ಹಂಗರಕಿ ,ತಡಕೋಡ ,ಕಬ್ಬೇನೂರ, ಶಿಂಗನಹಳ್ಳಿ, ಧಾರವಾಡ ಶಹರ ಮಾಧನಭಾವಿ, ಕೋಟೂರ, ಮಂಗಳಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಹೈನುಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೆಚ್.ಎಫ್.ಮತ್ತು ಜರ್ಸಿ ಆಕಳುಗಳು ಹಾಗೂ ಮುರಾ ಮತ್ತು ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಜರುಗಿದವು.ಹಾಲು ಹಿಂಡಲು ಅವುಗಳ ಮಾಲೀಕರಿಗೆ ನಿಗದಿತ ನಿಮಿಷಗಳ ಕಾಲಾವಕಾಶ ನೀಡಲಾಯಿತು.
ಪ್ರತಿ ಜಾನುವಾರುಗಳ ಹಾಲು ಹಿಂಡುವ ಸ್ಪರ್ಧೆ ಮೇಲ್ವಿಚಾರಣೆಗೆ ಓರ್ವ ಪಶು ವೈದ್ಯಾಧಿಕಾರಿ, ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿಂಗನಹಳ್ಳಿಯ ಮೈನುದ್ದೀನ ಮಾಳಗಿ ಅವರಿಗೆ ಶಾಸಕ ಅಮೃತ ದೇಸಾಯಿ 10 ಸಾವಿರ ರೂ. ನೀಡಿದರೆ, ದ್ವಿತೀಯ ಸ್ಥಾನ ಪಡೆದ ನೀರಲಕಟ್ಟಿಯ ಛಶ್ವರ ಗಾಳಿಗೆ ಅಶೋಕ ದೇಸಾಯಿ ಅವರು 8 ಸಾವಿರ ರೂ., ತೃತೀಯ ಸ್ಥಾನ ಪಡೆದ ಶಿಂಗನಹಳ್ಳಿಯ ಸುಶಾಂತ ಪಾಟೀಲ ಅವರಿಗೆ ಸಮಾಜಸೇವಕ ಮಹಾದೇವ ದಂಡಿನ ಅವರು 7 ಸಾವಿರ ರೂ. ನೀಡಿದರು.
4ನೇ ಸ್ಥಾನ ಪಡೆದ ಕವಲಗೇರಿಯ ಮಲ್ಲನಗೌಡ ಪಾಟೀಲರಿಗೆ 6 ಸಾವಿರ ರೂ., 5ನೇ ಸ್ಥಾನ ಪಡೆದ ನೀರಲಕಟ್ಟಿಯ ಅಜೀತ ಅಂಕಲಗಿಗೆ 5 ಸಾವಿರ ರೂ., 6ನೇ ಸ್ಥಾನ ಪಡೆದ ಹಂಗರಕಿಯ ನಿಂಗಪ್ಪ ಶಿಗೀಹಳ್ಳಿಗೆ 4 ಸಾವಿರ ರೂ., 7ನೇ ಸ್ಥಾನ ಪಡೆದ ಕವಲಗೇರಿಯ ಗಂಗಪ್ಪ ಸುಂಕಣ್ಣವರಗೆ 3 ಸಾವಿರ ರೂ., 8ನೇ ಸ್ಥಾನ ಪಡೆದ ಹಂಗರಕಿಯ ವೀರನಗೌಡ ಬಾಡಿಯವರಗೆ 2 ಸಾವಿರ ರೂ. ನೀಡಿ, ಪ್ರೋತ್ಸಾಹಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ 24 ಜನ ಜಾನುವಾರು ಮಾಲೀಕರಿಗೆ ಸಮಾಧಾನಕರ ಬಹುಮಾನವಾಗಿ ಒಂದು ಹಿಂಡಿ ಚೀಲ, ಒಂದು ಕ್ಯಾಲ್ಸಿಯಂ ಡಬ್ಬಿ ಹಾಗೂ ಇತರೆ ಉಪಕರಣ ನೀಡಲಾಯಿತು.ಇದಲ್ಲದೇ ಕರುಗಳ ಪ್ರದರ್ಶನ ಏರ್ಪಡಿಸಿ ಉತ್ತಮ ಕರುಗಳಿಗೆ ಪ್ರಶಸ್ತಿ ನೀಡಲಾಯಿತು.
ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಹಾಲು ಒಕ್ಕೂಟ, ಹಾಗೂ ಎಪಿಎಂಸಿ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.