ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನೇ ಅವಲಂಬಿಸಿರುವ ರೈತರ ಕುಟುಂಬಗಳಿಗೆ ಹೈನುಗಾರಿಕೆ ಲಾಭದಾಯಕ ಉಪ ಕಸುಬು ಆಗಿರುವುದರಿಂದ ರೈತರು ಕೃಷಿಗೆ ಪೂರಕವಾಗಿರುವ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಿಕೊಂಡು ಆರ್ಥಿಕತೆಯಲ್ಲಿ ಸದೃಢತೆ ಸಾಧಿಸಬೇಕೆಂದು ವರುಣ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಗಗೇìಶ್ವರಿ ಗ್ರಾಮದಲ್ಲಿ ಬುಧವಾರ ಸಂಜೆ ನೂತನ ಹಾಲು ಉತ್ಪಾದಕರ
ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ಪ್ರಗತಿಯನ್ನು ಸಾಧಿಸಲಿಕ್ಕೆ ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರ ಖಾತೆಗೆ ನೇರವಾಗಿ ಲೀಟರ್ ಹಾಲಿಗೆ 5 ರೂಗಳ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಹೈನುಗಾರಿಕೆಯನ್ನು ಉತ್ತಮಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಎರಡು ಚುನಾವಣೆಗಳಲ್ಲೂ ವರುಣ ಕ್ಷೇತ್ರದ ಜನರು ಕೈ ಹಿಡಿದು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರಿಂದ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿರುವ ಪ್ರತಿಯೊಂದು ಹಳ್ಳಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು 1000 ಕೋಟಿ ರೂಗಳ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಮೈಮುಲ್ ವ್ಯವಸ್ಥಾಪಕ ಮಲ್ಲಿಕಾರ್ಜುನಸ್ವಾಮಿ, ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗದ ಸನ್ನಿವೇಶದಲ್ಲಿ ಹೈನು ಗಾರಿಕೆಯಲ್ಲಿ ಉತ್ಪಾದಿಸಿದ ಗುಣಮಟ್ಟದ ಹಾಲಿಗೆ ಬೆಲೆ ಯಾವಾಗಲೂ ಸ್ಥಿರವಾಗಿರುವುದರಿಂದ ಹೈನುಗಾರಿಕೆ ರೈತರ ಬಾಳಿಗೆ ಬೆಳಕಾಗಿದೆ. ರಾಜ್ಯ ಸರ್ಕಾರದ ಯೋಜನೆ ಗಳಾದ ಕ್ಷೀರಭಾಗ್ಯ ಹಾಗೂ ಕ್ಷೀರಧಾರೆ ಗ್ರಾಮೀಣ ರೈತರು ಮತ್ತು ರೈತ ಮಕ್ಕಳ ಕಲ್ಯಾಣಕ್ಕೆ ಉಪಯುಕ್ತವಾಗಿದೆ. ಗುಣಮಟ್ಟದ ಹಾಲಿನ ಉತ್ಪಾದನೆಗೆ ಅಗತ್ಯ ನೆರವನ್ನು ಮೈಮುಲ್‌ನಿಂದ ನಿರಂತರವಾಗಿ ರೈತರಿಗೆ ನೀಡಲಾಗುತ್ತಿದೆ ಎಂದರು.
ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ಜಿಪಂ ಮಾಜಿ ಸದಸ್ಯರಾದ ರತ್ನಮ್ಮ ಗೋಪಾಲ ರಾಜು, ಕೆ.ಮಹದೇವ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವಣ್ಣ, ಕುರುಬರ ಸಂಘದ ಅಧ್ಯಕ್ಷ ಟಿ.ಎಸ್.ಪ್ರಶಾಂತ್‌ಬಾಬು, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯ ರಾಮಲಿಂಗು, ಹಾಲು ಉತ್ಪಾ ದಕರ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಮಹದೇವು, ನಿರ್ದೇಶಕ ರಾದ ಗಗ್ಗರಿ ಬಸವರಾಜು, ಇರ್ಷದ್ ಅಹಮ್ಮದ್, ಹಾಳೇಗೌಡ, ಜಾಕಿರ್ ಹುಸೇನ್, ಮಹಮ್ಮದ್ ಯೂಷಫ್, ಜಿ.ಎನ್.ಗೋಪಾಲ ರಾಜು ಇದ್ದರು.