ಅಫಜಲಪುರ: ತಾಲೂಕಿನಲ್ಲಿ ಈಗಾಗಲೇ ಹೆಚ್ಚು ನೀರಾವರಿ ಪ್ರದೇಶವಾಗಿದ್ದರಿಂದ ಹೈನುಗಾರಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ವಿಸ್ತೀರ್ಣ ಚಟುವಟಿಕೆ ಯೋಜನೆ ಅಡಿ ಎಸ್.ಸಿ/ಎಸ್.ಟಿ ಪಂಗಡದ ರೈತ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದ್ದ ಆಧುನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆಯಿಂದ ಹೆಚ್ಚು ಲಾಭ ಪಡೆಯಬಹುದಾಗಿದ್ದು, ಹೈನುಗಾರಿಕೆ ಮಾಡುವ ಮೂಲಕ ಸಂಸಾರ ಸಾಗಿಸುತ್ತಿರುವ ಮಹಿಳೆಯರು ಬಹಳಷ್ಟು ಮಂದಿ ಇದ್ದಾರೆ. ಹೀಗಾಗಿ ತಾಲೂಕಿನಲ್ಲೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶ ಇಟ್ಟುಕೊಂಡಿದ್ದೇನೆ ಎಂದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ. ಕೋಟೆ ಮಾತನಾಡಿ, ಪಶುಭಾಗ್ಯ ಯೋಜನೆ ಅಡಿಯಲ್ಲಿ 2017-18ನೇ ಸಾಲಿನಲ್ಲಿ ಒಟ್ಟು 1500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ 90 ರೈತ ಮಹಿಳಾ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಬರುವ ದಿನಗಳಲ್ಲಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತದೆ ಎಂದು ಹೇಳಿದರು.
ಡಾ| ಮಲ್ಲಿಕಾರ್ಜುನ ಸಣದಾನಿ ತರಬೇತಿ ನೀಡಿದರು. ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಎಪಿಎಂಸಿ ಅದ್ಯಕ್ಷ ಶಂಕರಲಿಂಗ ಮೇತ್ರಿ, ಮುಖಂಡರಾದ ಶಿವಪುತ್ರಪ್ಪ ಕರೂರ, ಮಲ್ಲಿನಾಥ ಪಾಟೀಲ, ಶಿವು ನೂಲಾ, ದೇವೇಂದ್ರ ಜಮದಾರ, ಪಶು ವೈದ್ಯ ಪರೀಕ್ಷಕರಾದ ಗುಂಡೇರಾವ್ ಕರೂಟಿ, ಚಂದ್ರಕಾಂತ ನಾಯ್ಕೋಡಿ, ಸಾಯಬಣ್ಣ ಜಮದಾರ, ಸಿದ್ದು ದಿಕ್ಸಂಗಿ, ಭೀಮಾಶಂಕರ ಸಾಸನೇಕರ, ದಸ್ತಯ್ಯ ಗುತ್ತೇದಾರ, ಪಶುವೈದ್ಯರಾದ ಅನುಪಮಾ ಸೂರ್ಯ, ನಂದಕುಮಾರ ಮಠಪತಿ, ಸುರೇಶ ಅವಟಿ, ಪಶುವೈದ್ಯ ಸಹಾಯಕ ಗುರಣ್ಣ ಅಂಜುಟಗಿ ಹಾಗೂ ಇತರರು ಇದ್ದರು. ಸಾಯಬಣ್ಣ ಜಮಾದಾರ ಸ್ವಾಗತಿಸಿದರು, ಭೀಮಾಶಂಕರ ಜಮಾದಾರ ನಿರೂಪಿಸಿದರು, ರಜಾಕ್ ವಂದಿಸಿದರು.