ಕಾಳಗಿ: ಕೃಷಿಯಲ್ಲಿ ಹೈನುಗಾರಿಕೆ ಒಂದು ಭಾಗವಾಗಿದ್ದು, ರೈತನ ಮಿತ್ರನಾಗಿ ಕಾರ್ಯ ಮಾಡುವುದರ ಜೊತೆಗೆ ಉತ್ತಮ ಆದಾಯ ತಂದು ಕೊಡುತ್ತದೆ ಎಂದು ರಾಜಾಪುರ ಗ್ರಾಮದ ಪ್ರಗತಿಪರ ರೈತ ಸುಧಾಕಾರ ಪಾಟೀಲ ಹೇಳಿದರು.
ರಾಜೀವ ಗಾಂಧಿ ಚೈತನ್ಯ ಯೋಜನೆ ತರಬೇತಿ ಫಲಾನುಭವಿಗಳು ರಾಜಾಪುರ ಗ್ರಾಮದ ರೈತ ಸುಧಾಕಾರ ಪಾಟೀಲ ಅವರ ಹೈನುಗಾರಿಕೆ ಕೇಂದ್ರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಹೈನುಗಾರಿಕೆ ಮಾಡುವುದರಿಂದ ಅತಿವೃಷ್ಟಿ, ಅನಾವೃಷ್ಟಿಯಂತ ಸಮಯದಲ್ಲಿ ರೈತನ ಜೀವನಕ್ಕೆ ಆಧಾರವಾಗುತ್ತದೆ.
2000-01ರಲ್ಲಿ ಕಾಳಗಿ ಪಶುವೈದ್ಯ ಡಾ| ಅಣ್ಣರಾವ್ ಪಾಟೀಲ ಮಾರ್ಗದರ್ಶನದಲ್ಲಿ ದೇವಣಿ ತಳಿಯ ಆರು ಹಸುಗಳೊಂದಿಗೆ ಹೈನುಗಾರಿಕೆ ಆರಂಭಿಸಿದ್ದು, ಇಂದು 60ಕ್ಕೂ ಹೆಚ್ಚಿನ ಹಸುಗಳನ್ನು ಹೊಂದಿದ್ದೇನೆ. ದೇವಣಿ ಹಸುವಿನ ತುಪ್ಪಕ್ಕೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆಯಿದ್ದು, ತುಪ್ಪ ಆದಾಯದ ಮೂಲವಾಗಿದೆ ಎಂದರು.
ಈ ಭಾಗದಲ್ಲಿ ಕೃಷಿಗೆ ದೇವಣಿ ಎತ್ತುಗಳ ಬೇಡಿಕೆಯಿದೆ. ಇಲ್ಲಿಯವರೆಗೆ 30ಹೋರಿ, 20ಹಸುಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಪಡೆದುಕೊಂಡಿದ್ದೇನೆ. ದೇವಣಿ ಹಸುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದರಿಂದ ಸಾಕಾಣಿಕೆ ವೆಚ್ಚ ಕಡಿಮೆ ಇದ್ದು, ಹೆಚ್ಚಿನ ಬಂಡವಾಳ ಬೇಕಿಲ್ಲ.
ಈ ಹಸುಗೆ ಮೇವು ಕಡಿಮೆ ಬೇಕಾಗುತ್ತದೆ. ಸರಿಯಾದ ಪಾಲನೆ ಪೋಷಣೆ ಮಾಡಿದರೆ ಒಂದು ಹಸುವಿಗೆ 3ರಿಂದ 5 ಲೀಟರ್ ಹಾಲು ದೊರೆಯುತ್ತದೆ ಎಂದು ವಿವರಿಸಿದರು. ಹೈನುಗಾರಿಕೆ ಪ್ರಾರಂಭ ಮಾಡಿದಾಗಿನಿಂದ ಕೃಷಿಯಲ್ಲಿ ರಾಸಾಯಿನಕ ಗೊಬ್ಬರ ಕೈಬಿಟ್ಟು ಹಸುವಿನ ಸೆಗಣಿ ಗೊಬ್ಬರ ಬಳಸುತ್ತಿದ್ದೇನೆ.
ಇದರಿಂದ ಕಡಿಮೆ ಮಳೆಯಾದರೂ ಹೆಚ್ಚಿನ ಇಳುವರಿ ಜೊತೆಗೆ ಪೌಷ್ಟಿಕಾಂಶ ಬೆಳೆ ಪಡೆಯುತ್ತಿದ್ದೇನೆ. ಕೃಷಿ ಜೊತೆಜೊತೆಗೆ ಹೈನುಗಾರಿಕೆ ಮಾಡುವುದರಿಂದ ಆದಾಯದ ಜೊತೆಗೆ ಕೃಷಿಯಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು. ಪಶುವೈದ್ಯ ಡಾ| ಅಣ್ಣರಾವ್ ಪಾಟೀಲ ಮಾತನಾಡಿ,
-ಕಿಟ್ ಸರ್ಡ ಸಂಸ್ಥೆ ಈ ಭಾಗದ 200ಕ್ಕೂ ಹೆಚ್ಚಿನ ಯುವ ರೈತರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ತರಬೇತಿ ನೀಡಿದೆ ಎಂದು ನುಡಿದರು. ಕಿಟ್‌ಸರ್ಡ ಸಂಸ್ಥೆಯ ಅವಿನಾಶ ಸಿಂಧೆ ಮಾತನಾಡಿದರು. ಯುವ ರೈತರಾದ ಭೋಗೇಶ, ಶಂಕರ, ರಾಜಕುಮಾರ, ಶ್ರೀಸೈಲ, ಅಂಬಿಕಾ, ಕಾವೇರಿ, ಸುರೇಖಾ ಹಾಗೂ 43 ಫಲಾನುಭವಿಗಳು ಹಾಜರಿದ್ದರು.