ಬೆಂಗಳೂರು: ಡೈರಿ ಪ್ರಕರಣದಿಂದಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಆಗಿರುವ “ಡ್ಯಾಮೇಜ್ ಕಂಟ್ರೋಲ್’ ಮಾಡಲು ಜನಪ್ರಿಯ ಮುಂಗಡ ಪತ್ರ ಮಂಡಿಸಿ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ “ಇಮೇಜ್’ ತಂದು ಕೊಡುವ ರಾಜಕೀಯ ತಂತ್ರಗಾರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ.
ಹೈ ಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಲಾಗಿದೆ ಎನ್ನುವ ಡೈರಿ ಪ್ರಕರಣವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ಧಾಳಿ ನಡೆಸುತ್ತಿರುವ ಬಿಜೆಪಿಗೆ ರಾಜಕೀಯವಾಗಿ ತಿರುಗೇಟು ನೀಡುವ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನ ಮುಂಗಡ ಪತ್ರದಲ್ಲಿ ಪ್ರಕಟಿಸುವ ಮೂಲಕ ಪ್ರತಿಪಕ್ಷಗಳ ಬಾಯಿಯನ್ನೇ ಮುಚ್ಚಿಸುವ ಸಾಹಸಕ್ಕೆ ಮುಖ್ಯಮಂತ್ರಿ ಕೈ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂತ್ರಿ ಪರಿಷತ್ ಸಭೆ ನಡೆಸಿದ ಸಿಎಂ ಜನಪ್ರಿಯ ಬಜೆಟ್ ಮಂಡನೆ ಬಗ್ಗೆಯೇ ಸಹೋದ್ಯೋಗಿಗಳ ಜೊತೆ ಸಮಾಲೋಚನೆ ನಡೆಸಿ ಪ್ರತಿಯೊಬ್ಬ ಸಚಿವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಸಿಎಂ ಸೂಚನೆಯಂತೆ ಹಿರಿಯ ಸಚಿವರಾದ ಡಿ.ಕೆ. ಶಿವಕುಮಾರ್, ದೇಶಪಾಂಡೆ, ಮಹದೇವಪ್ಪ, ಎಂ.ಬಿ. ಪಾಟೀಲ್ ಹಾಗೂ ಯುವ ಸಚಿವರಾದ ಕೃಷ್ಣ ಬೈರೇಗೌಡ, ಸೀತಾರಾಂ, ಪ್ರಿಯಾಂಕ್ ಖರ್ಗೆ ಸಭೆ ಸೇರಿ ಬಜೆಟ್‌ನಲ್ಲಿ ಘೋಷಿಸಬಹುದಾದಂತ 15 ಪ್ರಮುಖ ಯೋಜನೆಗಳ ಬಗ್ಗೆ ಚರ್ಚಿಸಿದರು.
ರೈತರ ಸಾಲ ಮನ್ನಾ, ಅಮ್ಮಾ ಕ್ಯಾಂಟೀನ್ ಮಾದರಿಯ ಉಪಹಾರ ಗೃಹ ಆರಂಭ, ಬಿಪಿಎಲ್ ಕಾರ್ಡ್‌ದಾರರಿಗೆ
ಉಚಿತ ಅಡುಗೆ ಅನಿಲ ಸಿಲೆಂಡರ್ ನೀಡುವಂತಹ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಕುರಿತು ಚರ್ಚೆ ಮಾಡಿದ್ದಾರೆನ್ನಲಾಗಿದೆ.
ಸರ್ಕಾರದ ಜನಪ್ರಿಯತೆಗೆ ಸಲಹೆ: ಕೇವಲ ಜನಪ್ರಿಯ ಬಜೆಟ್ ಮಂಡನೆ ಮಾತ್ರ ಸರ್ಕಾರದ ಇಮೇಜ್ ಹೆಚ್ಚಿಸಲು ಸಾಲದು. 4 ವರ್ಷದಲ್ಲಿ ಸರ್ಕಾರ ಜನತೆಗೆ ನೀಡಿದ ಕೊಡುಗೆಗಳನ್ನು, ಜನಪರ ಯೋಜನೆಗಳನ್ನು ಜನತೆಗೆ ತಿಳಿಸುವ ಕೆಲಸ ಆಗಬೇಕು. ವಿಶೇಷವಾಗಿ ಸಚಿವರು, ಪಕ್ಷದ ಶಾಸಕರು ಈ ನಿಟ್ಟಿನಲ್ಲಿ ಸರ್ಕಾರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಶ್ರಮಿಸಬೇಕೆಂದು ಸಭೆಯಲ್ಲಿ ಕೆಲವು ಸಚಿವರು ಸಲಹೆ ನೀಡಿದ್ದಾರೆ. ಡೈರಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಸಚಿವರುಗಳದ್ದೆಂದು ಹೇಳಲಾದ ಇನಿಷಿಯಲ್‌ಗಳುಳ್ಳ ಹೆಸರುಗಳು ಮಾಧ್ಯಮದಲ್ಲಿ ರಾರಾಜಿಸುತ್ತಿದ್ದರೂ ಸಂಬಂಧ ಪಟ್ಟ ಸಚಿವರು ಅದನ್ನು ವಿರೋಧಿಸದೇ, ಮಾಧ್ಯಮಗಳಲ್ಲಿ ತಮ್ಮ ಹೆಸರು ಪ್ರಸ್ತಾಪವಾಗುವುದನ್ನು ತಡೆಯಲು ಪ್ರಯತ್ನ ಪಡದೇ ಇರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತು ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಡಿಕೆಶಿ, ಎಂ.ಬಿ.ಪಾಟೀಲ್ ಗೌಪ್ಯ ಮಾತುಕತೆ
ಬೆಂಗಳೂರು: ಮಂತ್ರಿ ಪರಿಷತ್ ಸಭೆ ನಂತರ ಕೆಲವು ಸಚಿವರು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾμ ಬೋರ್ಡ್‌ನಲ್ಲಿ ತುರ್ತು ಸಭೆ ನಡೆಸಿದ್ದು ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಸುಮಾರು 2 ಗಂಟೆ ನಡೆದ ಸಭೆ ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಬದಲಾಯಿಸಿ, ಆ ಸ್ಥಾನಕ್ಕೆ ಡಿಕೆಶಿ ಅವರನ್ನು ನೇಮಿಸಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಭೆ ನಡೆಸಲಾಯಿತು ಎಂದು ಹೇಳಲಾಗಿದೆ. ಆದರೆ, ಸಭೆ ನಂತರ ಮಾತನಾಡಿದ ಸಚಿವ ಆರ್.ವಿ. ದೇಶಪಾಂಡೆ, ಎಲ್ಲ ಸ್ನೇಹಿತರಿಗೂ ಎಂ.ಬಿ. ಪಾಟೀಲ್ ದೋಸೆ ಕೊಡಿಸಲು ಕರೆದಿದ್ದರು. ನಾನೂ ದೋಸೆ ತಿಂದೆ, ಕೆಲವರು ವಡೆ ತಿಂದರು. ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಸತ್ಯಕ್ಕೆ ದೂರ ಎಂದರು.