Advertisement

Rain: ಸಕಲೇಶಪುರದಲ್ಲಿ 10 ದಿನದಿಂದ ನಿತ್ಯ ಮಳೆ

03:05 PM May 26, 2024 | Team Udayavani |

ಸಕಲೇಶಪುರ: ಕಳೆದ 10 ದಿನಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಕೃಷಿ ಕೆಲಸಗಳಲ್ಲಿ ಚುರುಕು ತಂದರೆ, ಕಟ್ಟಡ ಕಾಮಗಾರಿಯಂತಹ ಕೆಲಸಗಳಿಗೆ ಅಡ್ಡಿಯುಂಟಾಗಿದೆ.

Advertisement

ಮಲೆನಾಡಿನಲ್ಲಿ ಸಾಮಾನ್ಯವಾಗಿ ಜೂನ್‌ ಮೊದಲ ವಾರ ಮುಂಗಾರು ಪ್ರವೇಶವಾಗಿ ಮಳೆ ಸುರಿಯುವುದು ವಾಡಿಕೆಯಾಗಿದೆ. ಆದರೆ, ಈ ಬಾರಿ ಹವಮಾನ ವೈಪರೀತ್ಯದಿಂದ ಮೇ 2ನೇ ವಾರದಿಂದಲೇ ಮಳೆ ಆರಂಭವಾಗಿದೆ. ಇದು ಕೃಷಿಕರಿಗೆ ಖುಷಿ ತಂದರೆ, ಇತರ ಕೆಲಸಗಳಿಗೆ ಅಡ್ಡಿಯುಂಟಾಗಿದೆ. ಕಾಫಿ ತೋಟಗಳಲ್ಲಿ ಗಿಡಕಸಿಸಿ, ಮರಕಸಿ, ಗೊಬ್ಬರ ಹಾಕುವ ಕೆಲಸಗಳು ನಡೆಯುತ್ತಿದ್ದು, ಇನ್ನು ಮಳೆಯಿಂದಾಗಿ ಕಟ್ಟಡ ಕಾಮಗಾರಿಗಳಿಗೆ ಬಹಳ ಅಡ್ಡಿಯುಂಟಾಗಿದೆ.

ಇನ್ನು ಮಳೆಯಿಂದ ಜೆಸಿಬಿಗಳಿಗೆ ಕೆಲಸವಿಲ್ಲದೆ ನಿಲ್ಲಿಸುವಂತಾಗಿದೆ. ಜೆಸಿಬಿ ಮಾಲಿಕರು ಬಾಡಿಗೆಯಿಲ್ಲದೆ ಕಂಗಾಲಾಗಿದ್ದಾರೆ. ಮರಳು ಸಾಗಾಣಿಕೆ ಮಾಡುವವರು ಹೊಳೆ ದಡಕ್ಕೆ ಹೋಗಿ ಮರಳನ್ನು ತರಲಾರದೆ ಪರದಾಡುತ್ತಿದ್ದಾರೆ. ಗದ್ದೆಗಳಲ್ಲಿ ಇಟ್ಟಿಗೆ ಉತ್ಪಾದನೆ ಮಾಡಿರುವವರು ಇಟ್ಟಿಗೆ ಹೊರತರಲಾರದೆ ಅಪಾರ ನಷ್ಟ ಅನುಭವಿಸುವಂತಾಗಿದೆ.

ಸಿದ್ಧತೆಗೆ ಅವಕಾಶ ನೀಡದ ಮಳೆ: ಮಲೆನಾಡಿನಲ್ಲಿ ಮಳೆಗಾಲ ಆರಂಭದ ಮೊದಲು ಮಳೆಗಾಲಕ್ಕಾಗಿ ಜನ ಸಿದ್ಧತೆ ಮಾಡಿಕೊಳ್ಳುವುದು ವಾಡಿಕೆಯಾಗಿದೆ. ಆದರೆ, ಈ ಬಾರಿ ಸುರಿಯುತ್ತಿರುವ ಮಳೆ ಮಳೆಗಾಲಕ್ಕಾಗಿ ಜನರಿಗೆ ಸಿದ್ಧತೆ ಮಾಡಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಮಲೆನಾಡಿನ ಹೆಂಚಿನ ಮನೆಗಳು ಮಳೆಗಾಲದಲ್ಲಿ ಸೋರುವುದು ಸಾಮಾನ್ಯವಾಗಿದೆ. ಇಂತಹ ಮನೆಗಳಿಗೆ ಹೆಂಚನ್ನು ಸರಿಪಡಿಸುವುದು, ಟಾರ್ಪಲ್‌ಗ‌ಳನ್ನು ಹಾಕುವುದು ಸಾಮಾನ್ಯ. ಆದರೆ, ಈ ವರ್ಷ ಇಂತಹ ಸಿದ್ಧತೆ ಮಾಡಿಕೊಳ್ಳಲು ಅವಕಾಶ ಸಿಗದ ಕಾರಣ ಹಲವು ಮನೆಗಳು ಮಳೆಯಿಂದ ಸೋರುತ್ತಿದೆ.

ವಿವಿಧ ವಸ್ತುಗಳಿಗೆ ಬೇಡಿಕೆ ಹೆಚ್ಚಳ: ಟಾರ್ಪಲ್‌, ಛತ್ರಿ, ರೈನ್‌ಕೋಟ್‌ಗಳಿಗೆ ವ್ಯಾಪಕ ಬೇಡಿಕೆ ಬಂದಿದ್ದು, ಪ್ಲಾಸ್ಟಿಕ್‌ ಅಂಗಡಿಗಳಿಗೆ ಉತ್ತಮ ವ್ಯಾಪಾರವಾಗುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಸಹಜ ವಾತಾವರಣಕ್ಕೆ ಹಿಂತಿರುಗಿದ್ದು, ಇದರಿಂದ ಪ್ರಕೃತಿ ಪ್ರಿಯರು ಮಲೆನಾಡಿನತ್ತ ಹೆಜ್ಜೆಯಿಡುತ್ತಿರುವುದರಿಂದ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳಿಗೆ ಉತ್ತಮ ವ್ಯವಹಾರ ಉಂಟಾಗಿ ಮಾಲೀಕರಿಗೆ ಸಂತೋಷ ತಂದಿದೆ.

Advertisement

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಪ್ರವಾಸಿ ತಾಣಗಳಾದ ಮೂಕನಮನೆ ಜಲಪಾತ, ಮಂಜ್ರಾಬಾದ್‌ ಕೋಟೆ, ಬಿಸ್ಲೆ ಘಾಟ್‌, ಬೆಟ್ಟದ ಬೈರವೇಶ್ವರ ದೇವಸ್ಥಾನ ಸೇರಿದಂತೆ ಇತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಬರುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ರೈನ್‌ಕೋಟ್‌ ಹಾಕಿಕೊಂಡು ಸುರಿಯುವ ಮಳೆಯಲ್ಲೇ ಎಮ್ಮೆ, ದನ, ಕರುಗಳನ್ನು ಮೇಯಿಸುವ ದೃಶ್ಯ ತಾಲೂಕಿನ ಕಂಡು ಬರುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ಜಲಮೂಲಗಳು ಭರ್ತಿಯಾಗಿದ್ದು, ಜಲಪಾತಗಳಲ್ಲಿ ನೀರು ಉಕ್ಕಿ ಹರಿಯಲು ಆರಂಭವಾಗಿದೆ.

ಒಟ್ಟಾರೆಯಾಗಿ ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಿಸಿಲಿನ ವಾತಾವರಣ ಹೋಗಿ ತಂಪಾದ ವಾತಾವರಣ ಮೂಡಿದ್ದು, ಜನರಲ್ಲಿ ಸಂತೋಷ ತಂದಿದೆ.

ದಿನವಿಡೀ ಮೋಡ ಕವಿದ ವಾತಾವರಣ:

ಬಂಗಾಳ ಕೊಲ್ಲಿಯಲ್ಲಿ ಶೀಘ್ರದಲ್ಲಿ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದ ಈ ವಾರ ಪೂರ್ಣ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇದಾದ ನಂತರ ಮೇ 31ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿ, ರಾಜ್ಯ ಪ್ರವೇಶ ಮಾಡಲಿದೆ ಎಂದು ಹವಮಾನ ತಜ್ಞರು ಹೇಳಿದ್ದಾರೆ. ಇದರಿಂದ ಸದ್ಯಕ್ಕೆ ಮಳೆ ಬಿಡುವುದು ಅನುಮಾನವಾಗಿದೆ. ಶುಕ್ರವಾರ ರಾತ್ರಿ ಮಳೆ ಸುರಿದಿದ್ದು, ಶನಿವಾರ ದಿನವಿಡೀ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಳೆ ಸುರಿಯುವ ನಿರೀಕ್ಷೆಯಿದೆ.

ಸುಧೀರ್‌.ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next