ಸದ್ಯಕ್ಕೆ ಅಧಿಕಾರ ಹಿಡಿಯಬೇಕೆಂದು ಬಯಸುತ್ತಿರುವ ಮೂರೂ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿ ಗಳಿಗೆ ಕೇಳಿಬರುತ್ತಿರುವ ಉಚಿತ ಸಲಹೆ – “ಕ್ಷೇತ್ರ ನಿಮಗೇ, ಮೊದಲು ಸರ್ವೇಯಲ್ಲಿ ಗೆದ್ದು ಬನ್ನಿ’. ಉಭಯ ಜಿಲ್ಲೆಗಳಲ್ಲೂ ಚುನಾವಣೆ ಕಾವೇರು ತ್ತಿದೆ. ಟಿಕೆಟ್ ಆಕಾಂಕ್ಷಿಗಳ ಓಡಾಟ ಹೆಚ್ಚಾಗಿದೆ.
ಏತನ್ಮಧ್ಯೆ ಪಕ್ಷಗಳ ಆಂತರಿಕ ಸರ್ವೇಯೂ ಹೆಚ್ಚಾಗುತ್ತಿದೆ. ಬಿಜೆಪಿಯಿಂದ ಈಗಾಗಲೇ ಎರಡು ಸರ್ವೇಯ ವರದಿ ರಾಜ್ಯ ವರಿಷ್ಠರ ಕೈಸೇರಿದೆ. ಮೂರನೇ ಸರ್ವೇ ಚಾಲ್ತಿಯಲ್ಲಿದೆಯಂತೆ. ಕಾಂಗ್ರೆಸ್ ಕಥೆಯೂ ಇದೇ. ಎಲ್ಲರಿಗೂ ಈಗ ಗೆಲ್ಲುವ ಕುದುರೆಗಳು ಬೇಕು.
ಈ ಸಮೀಕ್ಷೆ ಎಲ್ಲಿಯವರೆಗೆ ನಡೆಯಬಹುದು? ಚುನಾವಣೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯಾಗುವವರೆಗೂ. ಬರೋಬ್ಬರಿ 30 ದಿನಗಳಿರಬಹುದು ಎಂದುಕೊಳ್ಳಿ. ಅಲ್ಲಿಯವರೆಗೂ ಈ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಹುಡುಕಾಟ ನಡೆಸುತ್ತಲೇ ಇರುತ್ತವೆ. ಅದರಲ್ಲೂ ಈ ಬಾರಿ ಅತಂತ್ರ ವಿಧಾನಸಭೆಯ ಗುಮಾನಿ ಹಾಗೂ ಗೆಲುವಿಗಾಗಿ ಫುಲ್ ಫೈಟ್ ಇರುವುದರಿಂದ ಮುಂದಿನ 30 ದಿನಗಳೊಳಗೆ ಇನ್ನೂ 3 ಸಮೀಕ್ಷೆಗಳು ನಡೆಯಬಹುದೆನ್ನಿ.
ಸಮೀಕ್ಷೆಯಿಂದ ಸಮೀಕ್ಷೆಗೆ ಟ್ರೆಂಡ್ ತಮ್ಮ ಪರವಾಗಿಸಿಕೊಂಡಿರಬೇಕೆಂದರೆ ಆಕಾಂಕ್ಷಿಗಳೆಲ್ಲ ದಿಲ್ಲಿ- ಬೆಂಗಳೂರು ಸುತ್ತುವುದು ಬಿಟ್ಟು ಕ್ಷೇತ್ರ ಸುತ್ತಾಡಬೇಕು. ಆಗ ಅಲ್ಲಿನ ಹವಾ ಅವರ ಪರವಾದರೆ ಸಮೀಕ್ಷೆಯ ಮೊಹರೂ ಬೀಳುತ್ತದೆ. ಆಗ ಪಕ್ಷಗಳ ಹೈಕಮಾಂಡ್ ಕುದುರೆಯ ಬೆನ್ನಿನ ಮೇಲೆ ಜೈ ಎನ್ನುವ ಸೀಲು ಹೊಡೆಯುತ್ತದೆ. ವರ್ಚಸ್ಸು, ಮಾಡಿದ ಕೆಲಸ, ಸಮುದಾಯ ಇತ್ಯಾದಿ ಲೆಕ್ಕಾಚಾರದ ಜತೆಗೆ ಕ್ಷೇತ್ರದಲ್ಲಿ ಟ್ರೆಂಡ್ ಹೇಗಿದೆ ಎಂಬುದೂ ಮುಖ್ಯ. ಕೊನೆಯ ಡೋಸ್ ಎಂದರೆ, ಸರ್ವೇಯಲ್ಲಿ ಗೆಲ್ಲಲು ಮೊದಲು ಕ್ಷೇತ್ರದ ಕಡೆ ಮುಖ ಮಾಡಿ, ಜನರ ಮನ ಗೆಲ್ಲಿ. ಆಮೇಲೆ ಚುನಾವಣೆಯನ್ನು ಗೆಲ್ಲಿ !