Advertisement

ಅಪ್ಪನ ಗೈರು ಕಾಡದೇ ಜೀವನದ ತಿರುವಾಯಿತು

09:48 PM Feb 07, 2020 | mahesh |

ನಾನು 3ನೇ ತರಗತಿಯಲ್ಲಿ ಕಲಿಯುತ್ತಿರಬೇಕಾದರೆ ಅಪ್ಪ ನಮ್ಮನ್ನು (ಅಮ್ಮ, ನಾನು, ತಂಗಿ) ಬಿಟ್ಟಿದ್ದರು. ಅಪ್ಪನ ಮನೆಯಿಂದ ಬಲವಂತವಾಗಿ ಹೊರಗೆ ಕಳುಹಿಸಲಾಗಿತ್ತು. ಅಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಸಾಕಷ್ಟು ಅನುಭವಿಸಿದ್ದೆವು. ಅಲ್ಲಿ ನಮಗೆ ಜಾಗ ಇಲ್ಲ, ಪ್ರೀತಿ ಇಲ್ಲ ಎಂದ ಮೇಲೆ ನಾನು, ಅಮ್ಮ ಮತ್ತು ತಂಗಿ ನಮ್ಮ ಅಜ್ಜಿ ಮನೆಗೆ (ತಾಯಿ ಮನೆಗೆ) ಬಂದೆವು. ನಾನು ಅಂದು 3ನೇ ತರಗತಿಯಲ್ಲಿದ್ದೆ. ತಂಗಿ ಇನ್ನೂ ಅಂಗನವಾಡಿಗೆ ಹೋಗುತ್ತಿದ್ದಳು. ಮನೆಯಲ್ಲಿ ಮೊದಲೇ ಬಡತನವಿದ್ದ ಕಾರಣ ಮನೆಯ ಖರ್ಚು ಹಾಗೂ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದು ಕಷ್ಟವಾಗಿತ್ತು. ಆದರೂ ಮನೆಯಲ್ಲಿ ಅಸಾಧ್ಯದ ಮಾತು ಬರಲಿಲ್ಲ. 5ನೇ ತರಗತಿಯ ವರೆಗೆ ಸರಕಾರಿ ಶಾಲೆಯಲ್ಲಿ ಓದಿದೆ. ಬಳಿಕ 6ನೇ ತರಗತಿ ಬಳಿಕ ರಜಾ ಅವಧಿಯಲ್ಲಿ ಊರಿನಲ್ಲಿ ಸಣ್ಣಪುಟ್ಟ ಕೂಲಿ ಕೆಲಸಕ್ಕೆ ಹೋಗುತ್ತಿದೆ. ಇದರಿಂದ ದಿನಕ್ಕೆ 20 ರೂ.ನಂತೆ ಸಂಪಾದಿಸುತ್ತಿದ್ದೆ.

Advertisement

ಸುಮಾರು 2 ತಿಂಗಳ ರಜೆಯಲ್ಲಿ ನಾನು ಕೆಲಸಕ್ಕೆ ಹೋಗಿಯೇ ಸಂಪಾದನೆ ಮಾಡಿ ನನ್ನ ಹಾಗೂ ತಂಗಿಯ ಶಾಲಾ ಖರ್ಚುಗಳನ್ನು ಭರಿಸುತ್ತಿದ್ದೆ. ಇದು ನಾನು ಪದವಿ ಓದುವ ವರೆಗೂ ಮುಂದುವರಿದಿತ್ತು. ನಾನೇ ದುಡಿದು ಸಂಪಾದಿಸಿದ ಹಣದಲ್ಲಿ ಓದಬೇಕಾದರೆ ಅದರ ಮಹತ್ವದ ಅರಿವಾಗುತ್ತಿತ್ತು. ಪ್ರತಿ ವರ್ಷವೂ ನನ್ನ ಶ್ರಮಕ್ಕೆ ತಕ್ಕ ನ್ಯಾಯವನ್ನು ಒದಗಿಸಬೇಕಾದ ಶೈಕ್ಷಣಿಕ ಹೊಣೆಗಾರಿಕೆಯಿಂದ ಕಾಲೇಜಿಗೆ ಹೋಗುತ್ತಿದ್ದೆ. ಇದರಿಂದ ನನ್ನ ಜೀವನದಲ್ಲಿ ಆರ್ಥಿಕ ಶಿಸ್ತಿನ ಜತೆಗೆ ಮನೆಯವರ ಕಷ್ಟದ ಅರಿವೂ ಆಗುತ್ತಿತ್ತು. ನಾವೇ ದುಡಿದು ಸಂಪಾದಿಸಿ ಕಲಿಯುವುದಕ್ಕೂ ಮನೆಯವರು ಸಂಪಾದಿಸಿದ್ದ ಹಣದಲ್ಲಿ ಶಿಕ್ಷಣ ಪೂರೈಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದನ್ನು ನಾನು ಅಂದು ಅರಿತುಕೊಂಡೆ. ನನ್ನ ಜೀವನದಲ್ಲಿ ತಂದೆಯ ಅನುಪಸ್ಥಿತಿ ಎಂದೂ ಕಾಡಲೇ ಇಲ್ಲ. ತಂದೆಯ ಸ್ಥಾನವನ್ನು ಅಮ್ಮ ಚೆನ್ನಾಗಿ ನಿರ್ವಹಿಸಿದ್ದಳು. ತಂದೆಯ ಅನುಪಸ್ಥಿತಿ ಜೀವನದಲ್ಲಿ ಬಹುದೊಡ್ಡ ತಿರುವನ್ನು ತಂದುಕೊಟ್ಟಿದೆ. ಅವೆಲ್ಲ ದರಿಂದ ಇಂದು ನಾನು ಕನಸಿನ ಉದ್ಯೋಗದಲ್ಲಿ ಇದ್ದೇನೆ.

- ಶ್ರೀಶ, ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next