ಅಡ್ಮಿನ್- ರಂಗನಾಥ ಎನ್. ವಾಲ್ಮೀಕಿ
Advertisement
ಧಾರವಾಡ ಜಿಲ್ಲಾ ಕನ್ನಡ ಬಳಗವು ಜಿಲ್ಲೆ – ಹೈಸ್ಕೂಲ್‌ನ ಕನ್ನಡ ಶಿಕ್ಷಕರನ್ನು ಒಂದೆಡೆ ಸೇರಿಸಲು ವಾಟ್ಸಾಪ್ ಗುಂಪು ಮಾಡಿದೆ. ಇದರಲ್ಲಿ ಕನ್ನಡ ಭಾಷೆ, ಅದರ ಬೆಳವಣಿಗೆ ಬಗ್ಗೆ ಹಾಗೂ ಇಲಾಖಾ ಆದೇಶಗಳು ಹಂಚಿಕೆಯಾಗುತ್ತವೆ. ಅಪರೂಪಕ್ಕೆ ಶುಭಾಶಯ ಸಂದೇಶಗಳು ಓಡಾಡುವುದೂ ಉಂಟು. ಈ ಬಳಗ ಪ್ರಾರಂಭವಾಗಿ ಆರೇಳು ವರ್ಷವೇ ಕಳೆದಿದೆ. ಮೊನ್ನೆ ಒಂದು ದಿನ ಹೀಗಾಯ್ತು. ರಾತ್ರಿ ಊಟ ಮಾಡಿ ಈ ಗುಂಪನ್ನು ತೆಗೆದು ನೋಡಿದೆ ಮನಸ್ಸಿಗೆ ಬೇಸರ ಎನಿಸುವಂಥ ಸಂಭಾಷಣೆಗಳು ಹರಿದಾಡುತ್ತಿದ್ದವು. ಅಲ್ಲದೇ, ಕನ್ನಡ ಭಾಷೆಯನ್ನು ಅರೆದು ಕುಡಿದಿದ್ದ, ಅದರಿಂದಲೇ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಅನುಭವಿ ಶಿಕ್ಷಕರೊಬ್ಬರ ಮೊಬೈಲ್‌ನಿಂದ ಸಹ್ಯವಲ್ಲದ ಚಿತ್ರವೊಂದು ಪೋಸ್ಟ್ ಆಗಿತ್ತು. ಇವರ ಜ್ಞಾನಕ್ಕೆ ಬೆರಗಾಗಿದ್ದವರು ಕುಪಿತಕೊಂಡು ಅವರಿಗೆ ಬೇಸರವಾಗುವ ರೀತಿ ಸಂದೇಶಗಳನ್ನು ಹಾಕಿದರು. ಇಡೀ ಗುಂಪಿಗೆ ನಾನೇ ಅಡ್ಮಿನ್. ಹೀಗಾಗಿ, ಏನಿದು ವಿಚಾರ ಅಂತ ಅವರಿಗೇ ಕರೆ ಮಾಡಿ ಕೇಳಿದೆ. ಅವರಿಗೆ ಇದರ ಬಗ್ಗೆ ಏನೇನೂ ತಿಳಿದಿಲ್ಲ. ಅವರ ಖಾತೆಯಿಂದ ಆದ ಪೋಸ್ಟ್ ಉಂಟು ಮಾಡಿದ ಅವಾಂತರವನ್ನು ಕೇಳಿ ಕಂಗಾಲಾದಂತೆ ಕಂಡರು. ಆದರೆ, ನಿಜಾಂಶ ಬೇರೆಯೇ ಆಗಿತ್ತು.