ನೆನಪಿನಂಗಳದಲ್ಲಿ ಮೊಗೆದಷ್ಟು ಇದೆ ನನ್ನಪ್ಪ ನೀಡಿದ ಸಣ್ಣ ಪುಟ್ಟ ಖುಷಿಗಳ ದಿಬ್ಬಣ. ನಾನು ಸೈಕಲ್ ಪೆಡಲ್ ತುಳಿದದ್ದೇ ಇಪ್ಪತ್ತರ ಹರೆಯದಲ್ಲಿ. ಚಿಕ್ಕವಳಿದ್ದಾಗ ಸೈಕಲ್ ಸವಾರಿ ಇಲ್ಲದಿದ್ದರೇನಂತೆ, ಅಪ್ಪನ ಹೆಗಲ ಮೇಲೆ ಕುಳಿತು ನವರಾತ್ರಿ ದೇವಿ ನೋಡಲು ಹೋದ ಆ ಸಿಹಿ ಕ್ಷಣವಿನ್ನೂ ಸ್ಮೃತಿಪಟಲದಲ್ಲಿದೆ. ಅಷ್ಟಕ್ಕೂ ನಾನೆಂದೂ ಸೈಕಲ್ ತುಳಿಯಬೇಕೆಂದು ಬಯಸಿದೆನೋ, ಆಗ ನನ್ನ ಐವತ್ತರ ಅಪ್ಪ, ಈ ಇಪ್ಪತ್ತರ ಕೋಣನಿಗೆ ಸೈಕಲ್ ಕಲಿಸಿಯೇ ಬಿಟ್ಟರು.
ಚಿಕ್ಕ ಮಗುವಿದ್ದಾಗಿನಿಂದ ಇಂದಿನವರೆಗೂ ತಾವು ಉಣ್ಣುವಾಗ ಒಂದು ತುತ್ತಾದರೂ ತಿನ್ನಿಸುವ ನನ್ನಪ್ಪನೇ ನನ್ನ ನಳಪಾಕ ಪ್ರಯೋಗಕ್ಕೆ ಮೊದಲ ಬಲಿಪಶು! ಅಮ್ಮ ಮನೆಯಲ್ಲಿ ಇಲ್ಲದ ಆ ಒಂದು ತಿಂಗಳು ನಾ ಮಾಡಿದ ಉಪ್ಪಿಲ್ಲದ, ಖಾರ ಹುಳಿಯ ಗೌಜೇ ಇಲ್ಲದ ಆ ಸಪ್ಪೆ ಅಡುಗೆಯನ್ನು ತುಟಿ ಪಿಟಕ್ ಎನ್ನದೇ ಪ್ರೀತಿಯಿಂದ ಚಪ್ಪರಿಸಿ ತಿಂದದ್ದು, ಆ ನಾಲಗೆ ಸಹಿಸಿದ್ದು, ಗಂಟಲಿಗೆ ತುರುಕಿಸಿಕೊಂಡದ್ದು ತನ್ನ ಮಗಳು ಮಾಡಿದ ಅಡುಗೆ ಎಂಬ ಮಮತೆಯಿಂದ. “ಪುಟ್ಟ” ಅಡುಗೆ ರುಚಿಯಾಯಿತು ಎಂದಾಡುವ ಆ ಒಂದು ಸುಳ್ಳು, ತನ್ನ ಮಗಳ ಮುಖದಲ್ಲಿ ಕಿರುನಗೆ ಮೂಡಿಸುತ್ತದೆಯೆಂಬ ಒಂದೇ ಕಾರಣಕ್ಕೆ, ಅಪ್ಪ ಪದೇ ಪದೇ ಹೇಳುತ್ತಿದ್ದ ಆ ಸುಳ್ಳೇ ನಿಜಕ್ಕೂ ರುಚಿಯಾಗಿತ್ತು..
ಅಷ್ಟಕ್ಕೂ ಅಪ್ಪನ ಕೊಂಗಾಟವೆಷ್ಟು ಚಂದವೋ, ಅಂದಿನ ಬೆನ್ನು ಬಿಸಿ ಮಾಡುವ ಪೆಟ್ಟು, ಇಂದಿನ ಕಿವಿ ತಂಪು ಮಾಡುವ ಬೈಗುಳವೂ ಅಷ್ಟೇ ಚೆಂದ. ಶಾಲಾ ವಾರ್ಷಿಕೋತ್ಸವದಲ್ಲಿ ನಾನ್ ಕುಣಿದು ಕುಪ್ಪಳಿಸಿದ್ದನ್ನು ಕಂಡವರಲ್ಲಿ ನನ್ನಪ್ಪ. ಬೇರೆಯವರನ್ನು ಕಂಡಾಗ ಒಮ್ಮೊಮ್ಮೆ ಅನ್ನಿಸಿದ್ದುಂಟು, ನನ್ನಪ್ಪ ಯಾಕೆ ಹೀಗೆ? ಆದರೆ ಅಂದು ಉತ್ತರ ಸಿಗದ ಈ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.
ನಾವು ಚಾಪೆಯಿಂದೇಳುವ ಮುನ್ನವೇ ಮನೆಬಿಟ್ಟು, ರಾತ್ರಿ ಚಾಪೆಗೊರಗುವ ಹೊತ್ತಿಗೆ ಮನೆಗೆ ಬರುತ್ತಿದ್ದ ಆ ಶ್ರಮಿಕ ಜೀವಕ್ಕೆ ಹೆಂಡತಿ, ಮೂರು ಮಕ್ಕಳ ಹೊಟ್ಟೆ ತುಂಬುವ ಚಿಂತೆ ಬಿಟ್ಟರೆ ಬೇರೆಲ್ಲಿಯ ಆಲೋಚನೆ? ನಾವೇನನ್ನು ಓದುತ್ತಿದ್ದೇವೆಂದು ಹೇಳಲೂ ಬಾರದ ನನ್ನಪ್ಪನಿಗೆ, ನಮ್ಮಿಷ್ಟದಂತೆಯೇ ಓದಿಸುವುದು, ಆ ಓದಿಗಾಗಿ ಮಾಡಿದ ಸಾಲ ತುಂಬುವುದೊಂದೇ ಪ್ರಪಂಚ.
ಹೀಗಿದ್ದೂ, ಬದುಕಲ್ಲಿ ಖುಷಿಗೆ ಕಿಂಚಿತ್ತೂ ಕೊರತೆಯಿಲ್ಲದಂತೆ ಸಾಕಿದ ನನ್ನಪ್ಪ ಬಣ್ಣ, ಬಣ್ಣದ ಫ್ಯಾಶನೇಬಲ್ ಬಟ್ಟೆಗಳನ್ನೋ, ಟ್ರೆಂಡಿ ಸ್ಮಾರ್ಟ್ ಫೋನ್, ಐ ಫೋನ್, ಟೂ ವೀಲರ್ ಗಳನ್ನೋ ಕೊಡಿಸಿದವರಲ್ಲ. ಬದಲಾಗಿ ಈ ಎಲ್ಲಾ ಭೋಗಿಕ ವಸ್ತುಗಳಿಲ್ಲದೆಯೂ ನೆಮ್ಮದಿಯ ಬದುಕ ಕಟ್ಟಿಕೊಳ್ಳುವ ಕಲೆಯನ್ನು ಕಲಿಸಿದವರು ಹೌದು. ಅವರು ನನ್ನ ಪಾಲಿಗೆ ಎಟಿಎಂ ಮಷಿನ್ ಅಲ್ಲ, ಕಾಳಜಿಯ ಚಿಲುಮೆ. ಆತ ನನಗಾಗಿ ಬೆವರಿಳಿಸಿದ್ದು, ದಣಿದಿದ್ದು, ಸಹಿಸಿದ್ದು, ನನ್ನ ಹಸಿದ ಹೊಟ್ಟೆಯ ತಣಿಸಿದ್ದು, ನಾ ತಪ್ಪಿದಾಗ ಮುನಿಸಿದ್ದು, ನನ್ನ ಖುಷಿಯ ಪಾಲುದಾರನಾಗಿದ್ದು, ನನ್ನ ನೋವಿಗೆ ಮರುಗಿದ್ದು, ತನ್ಮೂಲಕ ನನ್ನ ಬದುಕ ರೂಪಿಸುವಲ್ಲಿ ಶ್ರಮಿಸಿದ ನನ್ನಪ್ಪನ ಪ್ರೀತಿಯನ್ನು ಪದಗಳಲ್ಲಿ ಕಟ್ಟಿಕೊಡುವಲ್ಲಿ ನಾ ಅಬಲೆ…
ಅಮೃತಾ, ಕುಂದಾಪುರ