Advertisement

ಧಾಬಾಸ್‌ ಪೇಟೆ

03:13 PM Nov 04, 2017 | |

ಊಟದ ವಿಷಯಕ್ಕೆ ಬಂದಾಗ ಉತ್ತರಭಾರತದಲ್ಲಿ ಒಂದು ಮಾತು ಹೇಳುತ್ತಾರೆ. “ಊಟ ಮಾಡಿದರೆ ಪಂಜಾಬಿಗಳ ಹಾಗೆ ಮಾಡಬೇಕು’ ಅಂತ. ಹಾಗೆಂದರೆ ಹಸಿದಿದ್ದಾಗ ಯಾವುದೇ ಮುಲಾಜೇ ಇಲ್ಲದೆ, ಡಯೆಟ್ಟು, ಸಂಕೋಚ ಎಲ್ಲವನ್ನೂ ಬದಿಗಿಟ್ಟು ಪಟ್ಟಾಗಿ ಉಂಡುಬಿಡಬೇಕು ಎಂದರ್ಥ. ಅದರಲ್ಲೂ ಪಂಜಾಬಿ ಧಾಬಾ ಇದೆಯಲ್ಲ; ಅಲ್ಲಿ ಸಿಗುವ ಊಟದ ರುಚಿಯನ್ನು ಸವಿದವರೇ ಬಲ್ಲರು.

Advertisement

ಹೈವೇಗಳಲ್ಲಿ ಪ್ರಯಾಣಿಸುವಾಗ ಅಲ್ಲಲ್ಲಿ ಇಣುಕುವ ಧಾಬಾಗಳ ಖಾಯಂ ಗಿರಾಕಿಗಳು ಲಾರಿ ಡ್ರೈವರ್‌ಗಳೇ ಆದರೂ ಬಹುತೇಕ ಪ್ರವಾಸಿಗರು ತಮ್ಮ ತಮ್ಮ ವಾಹನಗಳಲ್ಲಿ ಪ್ರಯಾಣಿಸುವಾಗ ಇಲ್ಲಿಗೆ ಒಂದು ವಿಸಿಟ್‌ ಕೊಟ್ಟೇ ತಮ್ಮ ಪಯಣವನ್ನು ಮುಂದುವರಿಸುತ್ತಾರೆ. ಹಾಗೆಂದು, ಧಾಬಾಗಳಿಗೆ ಹೋಗಲು ಹೈವೇಗಳಿಗೆ ಹೋಗಬೇಕೆಂದಿಲ್ಲ. ಬೆಂಗಳೂರಿನಲ್ಲೇ ಅನೇಕ ಧಾಬಾಗಳಿವೆ. ಅವುಗಳಲ್ಲಿ ಆಯ್ದ ಐದು ಇಲ್ಲಿವೆ.

1. ಗ್ಯಾನಿ ದಾ ಧಾಬಾ
ಪಂಜಾಬಿಯಿಂದಲೇ ನಡೆಸಲ್ಪಡುತ್ತಿರುವ ಈ ಧಾಬಾ ಬ್ಯಾಚುಲರ್‌ಗಳಿಗೆ ತುಂಬಾ ಪ್ರಿಯವಾದುದು. ಯಾವ ಸಮಯಕ್ಕೆ ಹೋದರೂ ವಿದ್ಯಾರ್ಥಿಗಳು, ಐಟಿ ಪ್ರೊಫೆಷನಲ್‌ಗ‌ಳಿಂದಲೇ ತುಂಬಿರುತ್ತದೆ. ಇಲ್ಲಿ ಸಿಗೋ ಆಹಾರದ ವೆರೈಟಿ ಮಾತ್ರವೇ ಪಂಜಾಬಿಯಲ್ಲ, ದರ ಕೂಡಾ ತುಂಬಾ ಕಡಿಮೆ. ಹಾಗಾಗಿ ನಿಜಾರ್ಥದಲ್ಲಿ ಇದು ಪಂಜಾಬಿ ಧಾಬಾ ಎನ್ನಬಹುದು. ವೆಜ್‌ ಮತ್ತು ನಾನ್‌ ವೆಜ್‌ ಎರಡೂ ಬಗೆಯ ಖಾದ್ಯಗಳು ಇಲ್ಲಿ ಲಭ್ಯ. ಊಟ ಮುಗಿದ ನಂತರ ಲಸ್ಸಿ ಕುಡಿಯೋದನ್ನ ಮರೆಯಬೇಡಿ. ಗಟ್ಟಿ ಮೊಸರಿನಿಂದ ತಯಾರಿಸುವ ಇಲ್ಲಿನ ಲಸ್ಸಿ ಬಹಳ ಫೇಮಸ್‌. 

ಎಲ್ಲಿ?: 20ನೇ ಮುಖ್ಯರಸ್ತೆ, 100 ಅಡಿ ರಸ್ತೆ, ಬಿ.ಟಿ.ಎಂ ಲೇಔಟ್‌

2. ಗುರು ಗ್ರೀನ್ಸ್‌
ಶುಚಿಯಾಗಿಯೂ ಇರಬೇಕು, ದರ ಕಡಿಮೆಯೂ ಇರಬೇಕು, ರುಚಿಕರವಾಗಿಯೂ ಇರಬೇಕು… ಹೀಗೆ ಮೂರರ ನಡುವೆ ಕಾಂಪ್ರಮೈಸ್‌ ಮಾಡಿಕೊಳ್ಳಲಿಚ್ಛಿಸದವರಿಗೆ ಹೇಳಿ ಮಾಡಿಸಿದ ಧಾಬಾ ಗುರು ಗ್ರೀನ್ಸ್‌. ಇನ್‌ಡೋರ್‌ ಮತ್ತು ಔಟ್‌ಡೋರ್‌ ಎರಡರಲ್ಲೂ ಸೀಟಿಂಗ್‌ ಲಭ್ಯ. ವಿಶಾಲವಾಗಿರುವ ಈ ಧಾಬಾಗೆ ಬಹಳಷ್ಟು ಮಂದಿ ತಮ್ಮ ಸ್ನೇಹಿತರೊಡನೆ ಬರುತ್ತಾರೆ. ಹರಟೆ ಹೊಡೆಯುತ್ತಾ ರುಚಿಕರ ಆಹಾರ ಸವಿಯಲು ಗುರು ಗ್ರೀನ್ಸ್‌ ಬೆಸ್ಟ್‌. ಫ್ಯಾಮಿಲಿ ಕೂಡ ಬರಬಹುದು. ಗೆಟ್‌ ಟುಗೆದರ್‌, ಪಾರ್ಟಿ ಕಾರ್ಯಕ್ರಮಗಳು ಈ ಧಾಬಾದಲ್ಲಿ ಸರ್ವೇಸಾಮಾನ್ಯ.

Advertisement

ಎಲ್ಲಿ?: ಬನ್ನೇರುಘಟ್ಟ ರಸ್ತೆ, ಗೊಟ್ಟಿಗೆರೆ ಲೇಕ್‌ ಬಳಿ

3. ತಿರುಮಲ ಗ್ರೀನ್‌ ಪ್ಯಾಲೇಸ್‌
ಹೆಸರು ಕೇಳಿ ಇದ್ಯಾವುದೋ ದಕ್ಷಿಣ ಭಾರತೀಯ ಹೋಟೆಲ್‌ ಎಂದುಕೊಳ್ಳದಿರಿ. ಪಂಜಾಬಿ ಅಡುಗೆ ಮನೆಯ ನಿಜವಾದ ಸ್ವಾದ ಇಲ್ಲಿ ಸಿಗುತ್ತೆ. ಹೊರಗಿನಿಂದ ನೋಡಿದರೆ ಈ ಹೋಟೆಲ್‌ ಹಳೆ ಕಾಲದಲ್ಲಿ ಬ್ರಿಟಿಷರು ಕಟ್ಟಿದ ಕೋಟೆಯಂತೆ ಕಾಣುತ್ತದೆ. ಒಳಗೆ ಹೋದರೆ ಸಿಗುವ ಚಿಕ್ಕಪುಟ್ಟ ಹಟ್‌ಗಳಲ್ಲಿ ಊಟ ಸರಬರಾಜು ಮಾಡುತ್ತಾರೆ. ಅಂದಹಾಗೆ ಇಲ್ಲಿ ದಕ್ಷಿಣ ಭಾರತೀಯ ಶೈಲಿಯ ಖಾದ್ಯಗಳೂ ಸಿಗುತ್ತವೆ. 

ಎಲ್ಲಿ?: ವಂಡರ್‌ ಲಾ ಗೇಟ್‌ ಬಳಿ, ಬಿಡದಿ

4. ಬಾಬ್ಬಿ ಪಂಜಾಬಿ ಧಾಬಾ
ಇಲ್ಲಿಗೆ ಭೇಟಿ ನೀಡುವ ಖಾಯಂ ಗ್ರಾಹಕರು ಹೇಳುವ ಒಂದು ಮಾತೆಂದರೆ ನಿಜವಾದ ಪಂಜಾಬಿ ಶೈಲಿಯ, ಮನೆಯ ಖಾದ್ಯಗಳ ರುಚಿಯನ್ನು ಸವಿಯಬೇಕೆಂದರೆ ಇಲ್ಲಿಗೆ ಬರಬೇಕೆಂದು. ಅಂದ ಹಾಗೆ ಇದು ಶುದ್ಧ ವೆಟಿಟೇರಿಯನ್‌ ಧಾಬಾ. ತುಂಬಾ ಸರಳವಾಗಿರುವ ಈ ಧಾಬಾ ತುಸು ಚಿಕ್ಕದಾದರೂ, ಇಲ್ಲಿನ ರುಚಿ ನೋಡಿದ ಗ್ರಾಹಕರು ಬರುವ ಸಂಖ್ಯೆಯೇನೂ ಚಿಕ್ಕದಲ್ಲ. ದಾಲ್‌ ಮಖಾನಿ, ರಾಜ್‌ಮಾ ಮತ್ತು ಖೀರ್‌ ಇಲ್ಲಿನ ವೈಶಿಷ್ಟ.

ಎಲ್ಲಿ?: ಸೇಂಟ್‌ ಜಾನ್‌ ರಸ್ತೆ, ಹಲಸೂರು

5. 9th ಮೈಲ್‌ ಧಾಬಾ
ಸಂಜೆ ಕುಟುಂಬದ ಜೊತೆ ಯಾವತ್ತಾದರೂ ಲಾಂಗ್‌ ಡ್ರೈವ್‌ ಹೋದಾಗ ಈ ಧಾಬಾಗೆ ಭೇಟಿ ನೀಡಬಹುದು. ಗುಡಿಸಲುಗಳಲ್ಲಿ ಲಾಟೀನಿನ ಮಂದ ಬೆಳಕು, ಸುತ್ತಲು ಸಂಜೆಗತ್ತಲು, ಹಿತವಾದ ತಂಗಾಳಿ… ಒಳ್ಳೆಯ ಪರಿಸರ ಈ ಧಾಬಾದ ಹೆಗ್ಗಳಿಕೆ. ಅಷ್ಟು ಹೇಳಿ ಅಲ್ಲಿನ ಮೆನುವಿನ ಬಗ್ಗೆ ಹೇಳದೇ ಹೋದರೆ ಅನರ್ಥವಾಗುವುದು. ದಮ್‌ ಬಿರಿಯಾನಿ, ಮ್ಯಾಂಗೋ ಲೀಚಿ ಪಾನೀಯ ಈ ಧಾಬಾದ ಟ್ರೇಡ್‌ ಮಾರ್ಕ್‌. ಬಹುತೇಕ ಧಾಬಾಗಳಂತೆ ಉದ್ದನೇ ಇರುವ ಈ ಮೆನುವಿನ ರುಚಿಯನ್ನು ಟೇಸ್ಟ್‌ ಮಾಡಿಯೇ ತಿಳಿಯಬೇಕು.

ಎಲ್ಲಿ?: ಜಕ್ಕೂರು ಫ್ಲೈಯಿಂಗ್‌ ಕ್ಲಬ್‌ ಬಳಿ, ಬಳ್ಳಾರಿ ರಸ್ತೆ, ಯಲಹಂಕ

* ಹವನ

Advertisement

Udayavani is now on Telegram. Click here to join our channel and stay updated with the latest news.

Next