ನಟ ರಾಕ್ಷಸ ಖ್ಯಾತಿಯ ನಟ ಡಾಲಿ ಧನಂಜಯ ಅವರ ಮತ್ತೊಂದು ಚಿತ್ರ ಇದೀಗ ಚಿತ್ರಮಂದಿರಕ್ಕೆ ನುಗ್ಗಲು ಸಿದ್ದವಾಗಿದೆ. ಬೆಂಗಳೂರಿನ ಭೂಗತ ಜಗತ್ತಿನ ಕುರಿತಾದ ‘ ಹೆಡ್ ಬುಷ್’ ಸಿನಿಮಾವು ಇದೇ ಶುಕ್ರವಾರ ರಿಲೀಸ್ ಆಗಲಿದೆ. ಬಿಡುಗಡೆಗೆ ಮೊದಲೇ ಸಾಕಷ್ಟು ಹವಾ ಸೃಷ್ಟಿಸಿರುವ ‘ಹೆಡ್ ಬುಷ್’ ಚಿತ್ರಕ್ಕಾಗಿ ಡಾಲಿ ಫಾನ್ಸ್ ಕಾಯುತ್ತಿದ್ದಾರೆ.
‘ಬಡವ ರಾಸ್ಕಲ್’ ಚಿತ್ರ ಹಿಟ್ ಲಿಸ್ಟ್ ಗೆ ಸೇರಿದ ಬಳಿಕ ನಾಯಕ ನಟನಾಗಿ, ನಿರ್ಮಾಪಕನಾಗಿ ಹೆಡ್ ಬುಷ್ ಚಿತ್ರದ ಮೂಲಕ ಧನಂಜಯ ಮತ್ತೆ ಜನರ ಮುಂದೆ ಬರುತ್ತಿದ್ದಾರೆ.
ಇದನ್ನೂ ಓದಿ:ಲಡಾಖ್ ನಲ್ಲಿ ಜಿಆರ್‌ಇಎಫ್ ಟ್ರಕ್ ಉರುಳಿ ಬಿದ್ದು ಇಬ್ಬರು ಸಾವು; 12 ಜನರಿಗೆ ಗಾಯ
ರಿಲೀಸ್ ಗೂ ಮೊದಲೇ ಚಿತ್ರ ಕೋಟಿ ಬಾಚಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ಓಟಿಟಿ ವೇದಿಕೆಗೆ ಹೆಡ್ ಬುಷ್’ ಸಿನಿಮಾ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. ಪ್ರತಿಷ್ಠಿತ ಜೀ ನೆಟ್ ವರ್ಕ್ ‘ಹೆಡ್ ಬುಷ್’ ಸಿನಿಮಾದ ಓಟಿಟಿ ಹಕ್ಕನ್ನು ಖರೀದಿ ಮಾಡಿದ್ದಾರೆ. ಸುಮಾರು 21 ಕೋಟಿ ರೂ. ಮೊತ್ತಕ್ಕೆ ಡಾಲಿ ಚಿತ್ರವನ್ನು ಖರೀದಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಅಗ್ನಿ ಶ್ರೀಧರ್ ಅವರ ದಾದಾಗಿರಿಯ ಆ ದಿನಗಳು ಕೃತಿಯನ್ನು ಆಧರಿಸಿ ಹೆಡ್ ಬುಷ್’ ಸಿನಿಮಾ ಮಾಡಲಾಗುತ್ತಿದೆ. ಅಗ್ನಿ ಶ್ರೀಧರ್ ಅವರೇ ಚಿತ್ರಕಥೆ ಬರೆದಿದ್ದಾರೆ. ಶೂನ್ಯ ನಿರ್ದೇಶನದ ಚಿತ್ರದಲ್ಲಿ ಧನಂಜಯ ಅವರು ಎಂ.ಪಿ ಜಯರಾಜ್ ಪಾತ್ರವನ್ನು ಮಾಡುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ದೇವರಾಜ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಶ್ರುತಿ ಹರಿಹರನ್, ರಘು ಮುಖರ್ಜಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.