Advertisement

ಜಯರಾಜ್‌ ಅಬ್ಬರ ಶುರು; ತೆರೆಗೆ ಬಂತು ಡಾಲಿ ‘ಹೆಡ್‌ ಬುಷ್‌’

09:39 AM Oct 21, 2022 | Team Udayavani |

80ರ ದಶಕದ ಬೆಂಗಳೂರಿನ ಭೂಗತ ಜಗತ್ತು “ಹೆಡ್‌ ಬುಷ್‌’ ಸಿನಿಮಾದ ಮೂಲಕ ಈ ವಾರ ಮತ್ತೂಮ್ಮೆ ತೆರೆಮೇಲೆ ಅನಾವರಣವಾಗಲಿದೆ. ಹೌದು, ಬೆಂಗಳೂರಿನ ಭೂಗತ ಲೋಕದ ಕಥಾಹಂದರ ಹೊಂದಿರುವ “ಹೆಡ್‌ ಬುಷ್‌’ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದ್ದು, ನಟ ಡಾಲಿ ಧನಂಜಯ್‌ ಸಿನಿಮಾದಲ್ಲಿ ಬೆಂಗಳೂರಿನ ಮಾಜಿ ಭೂಗತ ಡಾನ್‌ ಎಂ. ಪಿ ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಭೂಗತ ಲೋಕದ ನೈಜ ಘಟನೆಗಳನ್ನು ಆಧರಿಸಿ ತೆರೆಗೆ ಬರುತ್ತಿರುವ “ಹೆಡ್‌ ಬುಷ್‌’ ಸಿನಿಮಾಕ್ಕೆ ಅಗ್ನಿ ಶ್ರೀಧರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು ಶೂನ್ಯ ನಿರ್ದೇಶನ ಮಾಡಿದ್ದಾರೆ.

Advertisement

ಇಲ್ಲಿಯವರೆಗೆ ಹತ್ತಾರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಧನಂಜಯ್‌, ಇದೇ ಮೊದಲ ಬಾರಿಗೆ ಅಂಡರ್‌ವರ್ಲ್ಡ್ ಕಥಾಹಂದರ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್‌ ಸಿನಿಮಾದಲ್ಲಿ ಲಾಂಗ್‌ ಹಿಡಿದು ತೆರೆ ಮುಂದೆ ಬರುತ್ತಿದ್ದಾರೆ. ಜೊತೆಗೆ ತೆರೆಹಿಂದೆ ಸಿನಿಮಾದ ನಿರ್ಮಾಣದ ಹೊಣೆಯನ್ನೂ ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡುತ್ತಿರುವುದರ ಬಗ್ಗೆ ಧನಂಜಯ್‌ ಅವರಿಗೂ ಸಾಕಷ್ಟು ಖುಷಿ, ಕುತೂಹಲ, ನಿರೀಕ್ಷೆ ಎಲ್ಲವೂ ಇದೆ.

“ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಇದು ಸಂಪೂರ್ಣ ವಿಭಿನ್ನವಾದ ಸಿನಿಮಾ. ತೆರೆಮುಂದೆ ನಟನಾಗಿ, ತೆರೆ ಹಿಂದೆ ನಿರ್ಮಾಪಕನಾಗಿ “ಹೆಡ್‌ ಬುಷ್‌’ ಸಾಕಷ್ಟು ಒಳ್ಳೆಯ ಅನುಭವಗಳನ್ನು ನೀಡಿದೆ. ಮೊದಲ ಬಾರಿಗೆ ಒಬ್ಬ ಡಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೂ ಇದು ಹೊಸಥರದ ಪಾತ್ರ. ಕಾಲ್ಪನಿಕ ಕಥೆಗಳನ್ನು ಸಿನಿಮಾ ಮಾಡುವುದು ಸುಲಭ. ಆದರೆ, ನೈಜ ಘಟನೆಗಳನ್ನು ಸಿನಿಮಾ ರೂಪದಲ್ಲಿ ತೆರೆಮೇಲೆ ತರುವುದು ತುಂಬ ಕಷ್ಟದ ಕೆಲಸ. ಎಲ್ಲರೂ ಕಂಡಿರುವ, ಕೇಳಿರುವ ವಿಷಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ದೊಡ್ಡ ಸವಾಲು. ಆದರೆ ಇಡೀ ಚಿತ್ರತಂಡದ ಸಹಕಾರದಿಂದ ಈ ಕೆಲಸ ಸುಲಭವಾಯಿತು’ ಎನ್ನುವುದು ಧನಂಜಯ್‌ ಮಾತು.

“ಹೆಡ್‌ ಬುಷ್‌’ ಸಿನಿಮಾದಲ್ಲಿ ನಟ ಧನಂಜಯ್‌ ಅವರಿಗೆ ಪಾಯಲ್‌ ರಜಪೂತ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಟ ಸಿಂಹ, ಶ್ರುತಿ ಹರಿಹರನ್‌, ಶೋಭರಾಜ್‌, ಬಾಲಾಜಿ ಮನೋಹರ್‌, ಅರವಿಂದ ರಾವ್‌ ಹೀಗೆ ಬೃಹತ್‌ ಕಲಾವಿದರ ತಾರಾಗಣ ಸಿನಿಮಾದಲ್ಲಿದೆ. ಇನ್ನು ಕಳೆದ ಒಂದು ತಿಂಗಳಿನಿಂದ ಭರ್ಜರಿಯಾಗಿ “ಹೆಡ್‌ ಬುಷ್‌’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ರಾಜ್ಯಾದ್ಯಂತ ಸುತ್ತಾಟ ನಡೆಸಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡಿದೆ. ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಅದ್ಧೂರಿಯಾಗಿ “ಹೆಡ್‌ ಬುಷ್‌’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಡೆದಿದ್ದು ನಟಿಯರಾದ ರಮ್ಯಾ, ರಚಿತಾ ರಾಮ…, ಅಮೃತಾ ಅಯ್ಯಂಗಾರ್‌, ಸಪ್ತಮಿ ಗೌಡ, ಸಂಜನಾ, ನಟ ನೀನಾಸಂ ಸತೀಶ್‌, ಯೋಗಿ ಸೇರಿದಂತೆ ಚಿತ್ರರಂಗದ ತಾರೆಯರ ದಂಡೇ ಹಾಜರಿದ್ದು, “ಹೆಡ್‌ ಬುಷ್‌’ ಸಿನಿಮಾಕ್ಕೆ ಸಾಥ್‌ ನೀಡಿತ್ತು.

ಮತ್ತೂಂದೆಡೆ ಈಗಾಗಲೇ ಬಿಡುಗಡೆಯಾಗಿರುವ “ಹೆಡ್‌ ಬುಷ್‌’ ಸಿನಿಮಾದ ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸೌಂಡ್‌ ಮಾಡುತ್ತಿದ್ದು, ಬಿಡುಗಡೆಗೂ ಮೊದಲೇ “ಹೆಡ್‌ ಬುಷ್‌’ ಸಿನಿಮಾದ ರೈಟ್ಸ್‌ ಬರೋಬ್ಬರಿ 22 ಕೋಟಿಗೂ ಅಧಿಕ ಮೊತ್ತಕ್ಕೆ ಬಿಕರಿಯಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆ ಸಿನಿಮಾದ ಪ್ರಚಾರ ವೇಳೆಯಲ್ಲಿ “ಹೆಡ್‌ ಬುಷ್‌’ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ, ಥಿಯೇಟರ್‌ನಲ್ಲೂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿದೆ.

Advertisement

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next